ದೊಡ್ಡಬಳ್ಳಾಪುರ, (ನ.01): ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆ ಹಾಗೂ ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಯಲ್ಲಿ ಈ ದಿನ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿ ಹಾಗೂ ಕರ್ನಾಟಕ ರಾಜ್ಯದ ಭೂಪಟವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಬೃಹತ್ತಾದ ಕನ್ನಡ ಧ್ವಜವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯದ ವೈಭವ ಪರಂಪರೆನ್ನು ಸಾರಿದ ಮೇರು ವ್ಯಕ್ತಿಗಳು, ರಾಜ ಮನೆತನಗಳು, ಗುಡಿ ಗೋಪುರಗಳು, ಧ್ವಜಸ್ತಂಭ, ಕಂಸಾಳೆ, ವೀರಗಾಸೆ, ಮರಗೊಂಬೆಗಳು, ಕೊಡವರು, ಯಕ್ಷಗಾನ, ಭರತನಾಟ್ಯ, ಹುಲಿವೇಷ, ಡೊಳ್ಳುಕುಣಿತ, ಕಳಸ ಗಮನ ಸೆಳೆದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲಾ ಕಾರ್ಯದರ್ಶಿ ಅನುರಾಧ ಕೆ.ಆರ್., ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ.
50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷ ‘ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಎಂಬ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಡಿನ ಹೆಸರಾಂತ ಕವಿಗಳು ಕನ್ನಡಕ್ಕೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕುವೆಂಪು ಅವರ `ಎಲ್ಲಾದರೂ ಇರು ಎಂತಾದರೂ ಇರು, ದ.ರಾ.ಬೇಂದ್ರೆ ಅವರ ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಅವರ ‘ಹೊತ್ತಿತೊ ಹೊತ್ತಿತು ಕನ್ನಡ ದೀಪ ಹಾಗೂ ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳು ಕನ್ನಡತನವನ್ನು ಜನರಲ್ಲಿ ಗಟ್ಟಿಗೊಳಿಸಿವೆ ಎಂದರು.
ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಕರ್ನಾಟಕ ಪರಂಪರೆಯ ಅನೇಕ ಪ್ರತಿಕೃತಿಗಳನ್ನು ವೇಷಭೂಷಣಗಳನ್ನು ಸಿದ್ದಗೊಳಿಸಿರುವುದು ಅಭಿನಂದನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಸುನೀತಾ.ಪಿ., ಅನಿತಾ ಕೆ. ಪಿ., ಭಾರತಿ.ಎನ್ ಹಾಗು ಸಹಶಿಕ್ಷಕರ ವೃಂದ ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….