ಬೆಂಗಳೂರು, (ನ.01): ಸಾಕು ನಾಯಿ ದಾಳಿ ಆರೋಪದ ಮೇರೆಗೆ ಖ್ಯಾತ ನಟ ತೂಗುದೀಪ ದರ್ಶನ್ ಅವರ ವಿರುದ್ಧ ಮಹಿಳೆಯೊಬ್ಬರು ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಟ ದರ್ಶನ್ ಮನೆಯ ಸಾಕು ನಾಯಿ, ಮಹಿಳೆಯೊಬ್ಬರಿಗೆ ಕಡಿದು ಗಾಯಗೊಳಿಸಿ ಆರೋಪದ ಮೇರೆಗೆ ವಕೀಲರಾದ ಅಮಿತ್ ಜಿಂದಾಲ್ ಎಂಬ ಮಹಿಳೆಯು ದರ್ಶನ್ ಹಾಗೂ ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದರ್ಶನ್ರ ಆರ್ಆರ್ ನಗರದ ನಿವಾಸದ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆ ನಡೆಯುವ ಮುನ್ನ ದರ್ಶನ್ರ ಮನೆ ಸಿಬ್ಬಂದಿ ಮಹಿಳೆಯೊಂದಿಗೆ ವಾಗ್ವಾದ ಮಾಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ದೂರಿನಲ್ಲಿ ಹೇಳಿಕೊಂಡಿರುವಂತೆ ಆರ್ ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಮಹಿಳೆ ಆಗಮಿಸಿದ್ದರು. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ತಮ್ಮ ಕಾರನ್ನು ಮಹಿಳೆ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವಂತೆ. ದರ್ಶನ್ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಮಹಿಳೆ ಕೇಳಿದ್ದಾರೆ.
ಆಗ ವಾಗ್ವಾದ ನಡೆಸಿರುವ ದರ್ಶನ್ ಮನೆಯ ಸಿಬ್ಬಂದಿ, ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದಿದ್ದಾರೆ. ಮಹಿಳೆ ಹಾಗೂ ದರ್ಶನ್ರ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಬಳಿಕ ನಾಯಿಗಳು ಮಹಿಳೆಯ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಚ್ಚಿ ಗಾಯಗೊಳಿಸಿವೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಮಹಿಳೆ ಆರ್ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದು, ಮನೆಯ ಸಿಬ್ಬಂದಿಗಳನ್ನು ಮೊದಲ ಆರೋಪಿಯನ್ನಾಗಿಸಿದ್ದರೆ, ನಟ ದರ್ಶನ್ರನ್ನು ಎರಡನೇ ಆರೋಪಿಯನ್ನಾಗಿಸಿ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….