ಸೀತಾಮಾತೆ ಭೂಮಿಗೆ ಅವತರಿಸಿದ್ದು, ಜನಕ ಸ್ಥಾನವಾದ ನೇಪಾಳದಲ್ಲಿ, ಪುಷ್ಯ ಮಾಸದ, ಕೃಷ್ಣ ಪಕ್ಷದ ಅಷ್ಟಮಿಯ ದಿನ ಜನಕ ಮಹಾರಾಜ ಭೂಮಿಯನ್ನು ಉಳುತ್ತಿದ್ದ ಸಮಯದಲ್ಲಿ ‘ಸೀತೆ’ ದೊರೆತಿದ್ದು. ನೇಪಾಳದಲ್ಲಿ ಈ ದಿನವನ್ನು ಜಾನಕಿ ಜಯಂತಿ, ಸೀತಾಷ್ಟಮಿ ಎಂದು ಆಚರಿಸುತ್ತಾರೆ.
ಭೂಮಿ ಪುತ್ರಿ ಸೀತಾ ದೇವಿಗೆ ಒಬ್ಬ ಸಹೋದರನಿದ್ದಾನೆ. ಅದು ಹೇಗೆ ಎಂದರೆ, ಸೀತಾ ರಾಮರ ಕಲ್ಯಾಣ ಸಮಯದಲ್ಲಿ, ವಧುವನ್ನು ಮಂಟಪಕ್ಕೆ ಕರೆತರುವಾಗ ಹುಡುಗಿಯ ಸಹೋದರ, ವಧುವಿಗೆ ಸುಗಂಧ ದ್ರವ್ಯವನ್ನು ಸಿಂಪಡಿಸುತ್ತಾ ಕೈ ಹಿಡಿದು ಲಗ್ನ ಮಂಟಪಕ್ಕೆ ಕರೆತರಬೇಕು. ಧಾರೆಯ ಸಮಯ ಬಂದಿತು. ಶಾಸ್ತ್ರಕ್ಕನುಸಾರವಾಗಿ ಪುರೋ ಹಿತರು, ಮದುಮಗಳನ್ನು ವಧುವಿನ ಸಹೋದರ ಮಂಟಪಕ್ಕೆ ಕರೆ ತರಲಿ ಎಂದರು. ಆದರೆ ಜನಕರಾಜನಿಗೆ ಗಂಡು ಸಂತಾನವಿಲ್ಲ. ಹೇಗೆ ಎಂಬ ಚಿಂತೆ ಎಲ್ಲರಿಗೂ ಶುರುವಾಯಿತು. ವಿವಾಹದ ಸಮಯ ಆಗುತ್ತಿದೆ ತಡ ಮಾಡುವಂತಿಲ್ಲ.
ಸೀತೆಯ ತಾಯಿ ಪೃಥ್ವಿಗೆ ಇದರಿಂದ ಬೇಸರವಾಯಿತು. ಏನು ಮಾಡುವುದು ಎಂದು ಯೋಚಿಸುತ್ತಾಳೆ, ಅಂದಿನ ಸೀತಾರಾಮರ ಕಲ್ಯಾಣೋತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ‘ಮಂಗಳ ಗ್ರಹ’ನು ಬಂದು ಅಲ್ಲಿ ಕುಳಿತಿದ್ದನು. ಸಭೆಯ ಮಧ್ಯ ದಿಂದ ತಟ್ಟನೆ ಎದ್ದು ಬಂದ ‘ಮಂಗಳ ಗ್ರಹ’ ನಾನು ಸೀತೆಯ ಸಹೋದರ, ನನ್ನ ಸಹೋದರಿಯ ವಿವಾಹದ ಈ ಶಾಸ್ತ್ರಗಳನ್ನೆಲ್ಲಾ ನಾನು ಮಾಡುತ್ತೇನೆ ಎಂದು ಮುಂದೆ ಬಂದನು.
ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು ಇಂದಿನ ತನಕ ಕೇಳರಿಯದ ಈ ಸಹೋದರ ಈಗ ಎಲ್ಲಿಂದ ಬಂದ. ಜನಕ ಮಹಾರಾಜನಿಗೆ, ಕುಲ- ಗೋತ್ರ- ಧರ್ಮ- ವಂಶಗಳ ಸಂಬಂಧವಲ್ಲದ ಈ ವ್ಯಕ್ತಿ ಈಗ ಎಲ್ಲಿಂದ ಬಂದ ಎಂದು ಕಸಿವಿಸಿಗೊಂಡಿದ್ದನ್ನು ಕಂಡ ‘ಮಂಗಳ ಗ್ರಹ’ ಓ ಜನಕ ಮಹಾರಾಜರೇ, ಈ ವಿವಾಹದ ಶುಭ ಸಮಯದಲ್ಲಿ ಸೀತೆಯ ಸಹೋದರನಾಗಿ ನಾನು ಎಲ್ಲಿಂದ ಲೋ ಬಂದವನಲ್ಲ. ನಾನು ಸೀತೆಯ ಸಹೋದರ. ನಿಮಗೆ ಈ ವಿಷಯದಲ್ಲಿ ಸಂದೇಹವಿದ್ದರೆ ಮಹರ್ಷಿಗಳಾದ ವಿಶ್ವಾಮಿತ್ರರು, ವಸಿಷ್ಠರನ್ನು ಕೇಳಿ ಎಂದನು.
ಆಗ ನಡೆದದ್ದು ಹೀಗೆ, ವಾಸ್ತವವಾಗಿ ಭೂಮಿಗೆ ಸೀತೆ ಹೇಗೆ ಪುತ್ರಿಯೋ, ಹಾಗೆಯೇ ‘ಮಂಗಳ ಗ್ರಹ’ನು ಭೂಮಿ ಪುತ್ರನಾಗಿದ್ದ. ವಿವಾಹ ಶಾಸ್ತ್ರದ ಪ್ರಯುಕ್ತ ವಿವಾಹ ಕಾರ್ಯ ವಿಳಂಬವಾಗುತ್ತಿರುವುದನ್ನು ಕಂಡ ಭೂಮಿತಾಯಿ, ತನ್ನ ಮಗನಾದ ಮಂಗಳ ಗ್ರಹನಿಗೆ ನಿನ್ನ ಸಹೋದರಿ ಸೀತೆ. ಆದುದರಿಂದ ಈ ಶಾಸ್ತ್ರವನ್ನು ನೀನು ಮಾಡು ಎಂಬ ಭೂಮಿತಾಯಿಯ ಸೂಚನೆಯಂತೆ ಮಂಗಳ ಗ್ರಹನು ಸೀತೆಯ ಸಹೋದರನ ಸ್ಥಾನದಲ್ಲಿ ನಿಂತು ಈ ಶುಭ ಕಾರ್ಯವನ್ನು ಪೂರೈಸಲು ಬಂದನು.
ಜನಕರಾಜನು, ಈ ಸಂದೇಹವನ್ನು ಪರಿಹರಿಸಲು ವಿಶ್ವಾಮಿತ್ರರು ವಸಿಷ್ಠರನ್ನು ಕೇಳಿದಾಗ ಮಹರ್ಷಿಗಳಿಗೂ ‘ಮಂಗಳ’ ಭೂಮಿಪುತ್ರ ಎಂಬ ರಹಸ್ಯ ಮೊದಲೇ ತಿಳಿದಿದ್ದು, ಅವರ ಅನುಮತಿ ಮೇರೆಗೆ ಜನಕರಾಜನು ‘ಸೀತಾ ರಾಮ’ರ ಕಲ್ಯಾಣ ಮಹೋತ್ಸವವನ್ನು ಸಕಲ ವಿಧಿ ವಿಧಾನಗಳೊಂದಿಗೆ ವೈಭವೋಪೇತವಾಗಿ ನಡೆಸಿದನು.
ಮಾರ್ಗಶಿರ ಶುಕ್ಲ ಪಕ್ಷದ ಐದನೇ ದಿನ ಜನಕ ಮಹಾರಾಜನ ಮಗಳು ಸೀತೆಗೂ, ಅಯೋಧ್ಯೆಯ ದಶರಥ ಮಹಾರಾಜನ ಮಗ ರಾಮನಿಗೂ ವಿವಾಹವಾದ ದಿನ. ಈ ದಿನವನ್ನು ಸೀತಾ ರಾಮರ ವಿವಾಹ ಪಂಚಮಿ ಎಂದೂ, ಜಾನಕಿ ಕಲ್ಯಾಣ ದಿನವೆಂದು ಆಚರಣೆ ಮಾಡುತ್ತಾರೆ. ರಾಮ ಸೀತೆಯ ಕಲ್ಯಾಣೋತ್ಸವದಲ್ಲಿ ಮುಕ್ಕೋಟಿ ದೇವತೆಗಳು ಸಂಭ್ರಮದಿಂದ ವಿವಾಹ ಮಹೋತ್ಸವ ನೋಡಿ ಮನದುಂಬಿ ಹಾರೈಸಿ ಆಶೀರ್ವಾದ ಮಾಡಿದರು.
ಜನಕ ಮಹಾರಾಜ ಸೀತೆಯನ್ನು ಗಂಡನ ಮನೆಗೆ ಕಳಿಸುವಾಗ, ಗೋಸಂಪತ್ತಿನ ಜೊತೆ ಮುತ್ತು ರತ್ನ ಐಶ್ವರ್ಯ ಸಂಪತ್ತು, ದಾಸದಾಸಿಯರು, ಕುದುರೆ ಕಾಲಾಳು ಗಳು, ರಥ ಸಾರಥಿ ಎಲ್ಲವನ್ನು ಬಳುವಳಿಯಾಗಿ ಕೊಡುತ್ತಾನೆ. ಆದರೆ ಸೀತೆ ಅದೆಲ್ಲವನ್ನು ಬಿಟ್ಟು ಅವಳು ಆರಾಧಿಸುತ್ತಿದ್ದ ಪಾರ್ವತಿಯ ರೂಪ ‘ಕಾಳಿ ಮಾತೆ’ ವಿಗ್ರಹವನ್ನು ಅಯೋಧ್ಯೆಗೆ ತನ್ನ ಜೊತೆಗೆ ತಂದಳು.
ಇಂದಿಗೂ ಅಯೋಧ್ಯೆಯ ಚೌಟಿ ದೇವಾಲಯದಲ್ಲಿ ‘ಕಾಳಿ ಮಾತೆ’ಯ ವಿಗ್ರಹವಿದೆ ತಾಯಿ ಪಾರ್ವತಿಯ ಅಪರೂಪದ ರೂಪ ‘ಕಾಳಿ’ ಇಲ್ಲಿ ಸರ್ವ ಮಂಗಳೆಯಾಗಿ ಶೋಭಾಯಮಾನವಾಗಿ ‘ದೇವಕಾಳಿ’ ಹೆಸರಿನಲ್ಲಿ ಪೂಜಿಸಲ್ಪಡುತ್ತಾಳೆ.
ಮಹಾರಾಜ ದಶರಥನು ಈ ವಿಗ್ರಹವನ್ನು ಸಪ್ತಸಾಗರದ ಈಶಾನ್ಯ ಮೂಲೆಯಲ್ಲಿ ಸ್ಥಾಪಿಸಿದ್ದಾನೆ. ಅಂದು ರಾಣಿ ಸೀತೆ ಪೂಜೆ ಮಾಡಲು ತನ್ನ ಸಖಿಯರೊಂದಿಗೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಳು. ಹಾಗೆ ದಶರಥ ನಂದ ರಾಮನ ಕುಲ ದೇವರ ಹೆಸರು ‘ಬಡಾ ಕಾಳಿ’ ಎಂದು. ‘ಬಡಾ ಕಾಳಿ’ ಮಂದಿರವೂ ಅಯೋಧ್ಯೆಯಲ್ಲಿ ಇದೆ.
ಸಂಗ್ರಹ ವರದಿ; ಗಣೇಶ್. ಎಸ್., ದೊಡ್ಡಬಳ್ಳಾಪುರ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….