ಬೆಂಗಳೂರು, (ಫೆ.08); ಬಿಜೆಪಿಯಿಂದ ಇನ್ನು ಮೂರು ದಿನಗಳ ಕಾಲ ಗ್ರಾಮ ಚಲೋ ಅಭಿಯಾನ ನಡೆಯಲಿದ್ದು, ಈ ಅಭಿಯಾನದಲ್ಲಿ 42 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿ 9.10, 11 ರಂದು ರಾಜ್ಯಾದ್ಯಂತ ಗ್ರಾಮ ಚಲೋ ಅಭಿಯಾನ ನಡೆಯಲಿದೆ ಎಂದರು.
ಪಕ್ಷದ ವರಿಷ್ಠರ ಅಪೇಕ್ಷೆಯಂತೆ ಗ್ರಾಮ ಚಲೋ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಿದ್ದೇವೆ. ರಾಜ್ಯದ 28ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ, 19 ಸಾವಿರ ನಗರ ಬೂತ್ ಗಳಲ್ಲಿ ಮೂರು ದಿನ ನಿರಂತರ ಈ ಅಭಿಯಾನ ನಡೆಯಲಿದೆ ಎಂದು ವಿಜಯೇಂದ್ರ ತಿಳಿಸಿದರು.
2047ಕ್ಕೆ ಭಾರತ ಸಂಪೂರ್ಣ ಅಭಿವೃದ್ಧಿಯಾಗಬೇಕಾದರೆ ಹಳ್ಳಿ ಹಳ್ಳಿಗಳೂ ಅಭಿವೃದ್ಧಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ.
ಪ್ರತಿಯೊಂದು ಮನೆಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಿ ಕೇಂದ್ರದ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ದೇಶದ ಭವಿಷ್ಯವನ್ನು ರೂಪಿಸಲು ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಆಗ ಮಾತ್ರ ದೇಶ ಸಂಪೂರ್ಣವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದ ಅವರು ರಾಜ್ಯ ಭೇಟಿಗೆ ಬರುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರದಲ್ಲಿ ಕೊಂಚ ಬದಲಾವಣೆಯಾಗಿದೆ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಎಂಬುದು ಸಿದ್ದರಾಮಯ್ಯ ಅವರು ಮರೆಯುತ್ತಿದ್ದಾರೆ. ದೇವರ ಬಗ್ಗೆ ಅವರ ಭಕ್ತಿ ಭಾವನೆಯ ಬಗ್ಗೆ ಅವರೇ ಹೇಳಬೇಕು. ಮಾಂಸಾಹಾರ ಸೇವಿಸಿ ಸುತ್ತೂರು ಗದ್ದುಗೆಗೆ ಭೇಟಿ ನೀಡಿರುವುದಕ್ಕೆ ಅವರೇ ಉತ್ತರ ಕೊಡಬೇಕು. ರಾಜ್ಯದ ಮುಖ್ಯಮಂತ್ರಿಯ ನಡವಳಿಕೆಯನ್ನು ಪ್ರತಿಯೊಬ್ಬರು ಗಮನಿಸುತ್ತಿರುತ್ತಾರೆ. ಅವರ ಈ ನಡವಳಿಕೆ ಖಂಡನೀಯ. ಅವರ ನಡೆ, ನುಡಿಗೆ ಅಜಗಜಾಂತರ ವ್ಯತ್ಯಾಸವಿದೆ. ಅವರು ಭಕ್ತರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಶಾಸಕ ಹಾಗೂ ರಾಜ್ಯ ಕಾರ್ಯದರ್ಶಿ ಶೈಲೇಂದ್ರ ಬೆಲ್ದಾಳೆ, ವಿನಯ್ ಬಿದಿರೆ, ಶರಣು ತಳ್ಳೀಕೆರೆ, ಜಿಲ್ಲಾಧ್ಯಕ್ಷ ಎಸ್.ಹರೀಶ್, ಮುಖಂಡರಾದ ಅನಿಲ್ ಚಳಗೇರಿ, ಎಂ.ರುದ್ರೇಶ್, ಎಂ.ರಂಗರಾಜು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….