ಬೆಂಗಳೂರು ಗ್ರಾಮಾಂತರ ಜಿಲ್ಲೆ, (ಆಗಸ್ಟ್ 29,2024): ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಪ್ರತಿ ವರ್ಷ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಅಂಗವಾಗಿ ಜೀವವೈವಿಧ್ಯತೆಯ ಸಂರಕ್ಷಣೆಯ ಕುರಿತಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಜೀವವೈವಿಧ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ವರ್ಷವು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದುದ್ದರಿಂದ ಅರ್ಜಿ ಆಹ್ವಾನವು ವಿಳಂಬವಾಗಿರುತ್ತದೆ.
ಅದರಂತೆ, 2024-25ನೇ ಸಾಲಿನ ಜೀವವೈವಿಧ್ಯತೆ ಸಂರಕ್ಷಣೆ, ಸಾವಯವ-ಪಾರಂಪರಿಕ ಕೃಷಿ ಪದ್ಧತಿ, ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ, ಅತ್ಯುತ್ತಮ ಜೀವವೈವಿಧ್ಯ ಸಾಕ್ಷ್ಯಚಿತ್ರ ಈ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು – ಸಾಮಾನ್ಯ ಮಾನದಂಡಗಳು
1. ಅರ್ಜಿ ಸಲ್ಲಿಸುವ ವ್ಯಕ್ತಿಯು ಕರ್ನಾಟಕದಲ್ಲಿ ವಾಸವಾಗಿರುವವರಾಗಿರಬೇಕು ಅಥವಾ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯಾಗಿರತಕ್ಕದ್ದು.
2. ವ್ಯಕ್ತಿ/ಸಂಘ/ಸಂಸ್ಥೆಯು ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಇದುವರೆಗೆ ಯಾವುದೇ ‘ಜೀವವೈವಿಧ್ಯತೆಯ ಪ್ರಶಸ್ತಿ’ಯನ್ನು ಪಡೆದಿರಬಾರದು.
3. ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಿಬ್ಬಂದಿ/ನೌಕರರಿಗೆ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
4. ಒಂದು ಸಂಸ್ಥೆ/ಒಬ್ಬ ವ್ಯಕ್ತಿ ಈ ಮೇಲಿನ ನಾಲ್ಕು ವಿಭಾಗಗಳಲ್ಲಿ ಒಂದು ವಿಭಾಗಕ್ಕೆ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
5. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ ಮೂರು ವರ್ಷಗಳ ಕಾರ್ಯಸಾಧನೆಯನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
6. ಸರ್ಕಾರೇತರ ಸಂಸ್ಥೆಯಾಗಿದ್ದಲ್ಲಿ ಪ್ರಶಸ್ತಿ ನೀಡುವ ವರ್ಷಕ್ಕೆ ನೋಂದಾಯಿತವಾಗಿ ಕನಿಷ್ಠ ಮೂರು ವರ್ಷಗಳಾಗಿರಬೇಕು.
7. ಸರ್ಕಾರಿ ಅನುದಾನದೊಂದಿಗೆ ನಿರ್ವಹಿಸಲಾದ ಕಾರ್ಯಗಳು/ಯೋಜನೆಗಳು/ ಕಾರ್ಯಕ್ರಮಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. (‘ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ’ ವಿಭಾಗಕ್ಕೆ ಈ ಮಾನದಂಡವು ಅನ್ವಯಿಸುವುದಿಲ್ಲ)
8. ಸರ್ಕಾರದಿಂದ/ಮಂಡಳಿಯಿಂದ ರಚನೆಗೊಂಡಿರುವ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ನಂತರ ಅರ್ಹರನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
9. ಅರ್ಜಿದಾರರನ್ನು ಪ್ರಶಸ್ತಿ ಸಮಿತಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಲು ಆಹ್ವಾನಿಸಲಾಗುವುದಿಲ್ಲ. ಆದುದರಿಂದ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗಿರುವ ಮಾಹಿತಿಗಳೊಂದಿಗೆ ಸಮರ್ಪಕ ರೀತಿಯಲ್ಲಿ ಲಗತ್ತಿಸಿರಬೇಕು. ಅಪೂರ್ಣವಾದ ಹಾಗೂ ಕಾರ್ಯನಿರ್ವಹಿಸಿರುವುದರ ಬಗ್ಗೆ ಆಧಾರವಾಗಿರುವ ದಾಖಲೆ/ಸಾಕ್ಷ್ಯಧಾರ/ರುಜುವಾತುಗಳು ಇಲ್ಲದೇ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
10. ಪ್ರಶಸ್ತಿ ಆಯ್ಕೆ ಸಮಿತಿಯು ಅಗತ್ಯವಿದ್ದಲ್ಲಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಕ್ಷೇತ್ರ ಸಮೀಕ್ಷೆ ನಡೆಸುವ ಅಧಿಕಾರವನ್ನು ಹೊಂದಿರುತ್ತದೆ.
11. ಜೀವವೈವಿಧ್ಯ ಪ್ರಶಸ್ತಿಯ ಪ್ರತಿ ವಿಭಾಗಕ್ಕೆ ಒಬ್ಬ ವ್ಯಕ್ತಿ/ಒಂದು ಸಂಸ್ಥೆಯನ್ನು ಮಾತ್ರವೇ ಆಯ್ಕೆ ಮಾಡಲಾಗುವುದು. ಪ್ರಶಸ್ತಿಗೆ ಅರ್ಹರಾದ ವ್ಯಕ್ತಿ/ಸಂಸ್ಥೆಗೆ ರೂ.50,000/- ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರವನ್ನು ಹಾಗೂ ಅತ್ಯುತ್ತಮ ಅರ್ಜಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಗುವುದು.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿದ್ದು, ನಿಗದಿತ ಅರ್ಜಿಯ ನಮೂನೆಯಲ್ಲಿ ವ್ಯಕ್ತಿ/ಸಂಘ/ ಸಂಸ್ಥೆಯು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುದ್ದಾಂ ಅಥವಾ ಅಂಚೆಯ ಮೂಲಕ ಸಲ್ಲಿಸಬಹುದಾಗಿರುತ್ತದೆ. ಅರ್ಜಿ ಸಲ್ಲಿಸುವ ಲಕೋಟೆ/ಕವರ್ ಮೇಲೆ ಅರ್ಜಿ ಸಲ್ಲಿಸುವ ವಿಭಾಗದ ಹೆಸರನ್ನು ನಮೂದಿಸುವುದು.
ಅರ್ಜಿಗಳನ್ನು ಸಲ್ಲಿಸುವ ವಿಳಾಸ- ಸದಸ್ಯ ಕಾರ್ಯದರ್ಶಿಗಳು ಕರ್ನಾಟಕ ಜೀವವೈವಿಧ್ಯ ಮಂಡಳಿ ನೆಲಮಹಡಿ, ವನವಿಕಾಸ ಕಟ್ಟಡ, 18ನೇ ಕ್ರಾಸ್ ಮಲ್ಲೇಶ್ವರಂ, ಬೆಂಗಳೂರು – 560003.
ಜೀವವೈವಿಧ್ಯತೆಯ ಪ್ರಶಸ್ತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23448783 ಈ-ಮೇಲ್-kbb.ka.ms@gmail.com; ಅಂತರ್ಜಾಲ- kbb.karnataka.gov.in ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….