ಬೆಂಗಳೂರು, (ಆಗಸ್ಟ್ 31): ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರಗಳನ್ನು ಅಪ್ರಜಾತಾಂತ್ರಿಕ ಮಾರ್ಗದಲ್ಲಿ ಅಸ್ಥಿರಗೊಳಿಸುವ ಕೇಂದ್ರ ಸರ್ಕಾರ ಮತ್ತು ರಾಜಭವನದ ಷಡ್ಯಂತ್ರಗಳನ್ನು ವಿರೋಧಿಸಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆಗೆ, ಕ್ರಮಕ್ಕೆ ಅನುಮತಿ ನೀಡದ ರಾಜ್ಯಪಾಲರ ತಾರತಮ್ಯ ನೀತಿಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಲಾಯಿತು.
ಗೆಹಲೋಟ್ ಹಠಾವೋ ಪ್ರಜಾಪ್ರಭುತ್ವ ಬಚಾವೋ, ಇದು ರಾಜಭವನ ಅಲ್ಲ ರಾಜಕೀಯ ಭವನ,ಮೋದಿ ಕಾ ಕೈಗೊಂಬೆ, ಕಣ್ಮುಚ್ಚಿದ ಪಕ್ಷಪಾತಿ ರಾಜ್ಯಪಾಲ ಮುಂತಾದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಾ ಸಿಎಂ ನೇತೃತ್ವದ ಕಾಂಗ್ರೆಸ್ ಬಳಗವು ಗೆಹಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಗಾಂಧಿ ಪ್ರತಿಮೆಯ ಬಳಿಯೇ ತುಸು ಹೊತ್ತು ಕುಳಿತು ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಚಿವ ಈಶ್ವರ ಖಂಡ್ರೆ, ಸಚಿಮ ಜಮೀರ್ ಅಹ್ಮದ್, ಎಚ್.ಕೆ. ಪಾಟೀಲ್, ವೀರಪ್ಪ ಮೊಯಿಲಿ, ದಿನೇಶ್ ಗುಂಡೂರಾವ್, ವಿ.ಎಸ್. ಉಗ್ರಪ್ಪ, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….