ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 12(ಕರ್ನಾಟಕ ವಾರ್ತೆ): ಪ್ರಥಮ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಕೈಗಾರಿಕೆ ಕೇಂದ್ರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಸೆಪ್ಟೆಂಬರ್ 13 ರಂದು ಆಯೋಜಿಸಲಾಗಿದ್ದು ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದೆ.
ಉದ್ಯೋಗ ಮೇಳ ವಿವರ: ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳವು ಸೆಪ್ಟೆಂಬರ್ 13 ರ ಶುಕ್ರವಾರದಂದು ದೇವನಹಳ್ಳಿ ಟೌನ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 09:00 ರಿಂದ ಸಂಜೆ 06:00 ಗಂಟೆಯವರೆಗೆ ಆಯೋಜಿಸಲಾಗಿದೆ.
ಉದ್ಯೋಗಮೇಳಕ್ಕೆ ನೋಂದಣಿ ಪ್ರಕ್ರಿಯೆ: ಉದ್ಯೋಗಮೇಳದಲ್ಲಿ ಭಾಗವಹಿಸಲು ಕಂಪನಿಗಳಿಗೆ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ನೋಂದಾಯಿಸಲು ಅನುಕೂಲ ಮಾಡಲಾಗಿತ್ತು. ಪ್ರಸ್ತುತ ವರದಿಯನ್ವಯ ಇದುವರೆಗೂ 22,448 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿದ್ದು, https://bangalorerural.nic.in/en/job-fair/5 ಈ ಲಿಂಕ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಪ್ರತಿಷ್ಠಿತ ಕಂಪನಿಗಳು ಭಾಗಿ: ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಫಾಕ್ಸ್ ಕಾನ್(Foxcon), ಏಕ್ಸೈಡ್(Exide) ವೋಲ್ವೋ(Volvo), ಎಲ್ & ಟಿ(L&T), ಅಜೆಕ್ಸ್(Ajax), ಇಂಡಿ ಮೀಮ್(Indi Mim), ತ್ರಿವೇಣಿ ಟ್ರಬೈನ್(Triveni Turbine), ಎಬಿಬಿ ಇಂಡಿಯಾ(ABB India) ಸೇರಿದಂತೆ 180 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.
ಉದ್ಯೋಗ ಮೇಳದಲ್ಲಿ ಯಾರು ಭಾಗವಹಿಸಬಹುದು: ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ- ತಾಂತ್ರಿಕೇತರ ವಿದ್ಯಾಭ್ಯಾಸ, ವಿವಿಧ ತರಬೇತಿ ಸಂಸ್ಥೆಗಳಲ್ಲಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳು, ಯಾವುದೇ ವಿದ್ಯಾರ್ಹತೆ ಹೊಂದಿದ ಪಾಸ್ ಅಥವಾ ಫೇಲ್ ಆಗಿರುವ ಉದ್ಯೋಗಾಂಕ್ಷಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿರುತ್ತದೆ. ಹೊರ ಜಿಲ್ಲೆಯ ಉದ್ಯೋಗಾಂಕ್ಷಿಗಳು, ಆನ್ಲೈನ್ ಲ್ಲಿ ನೋಂದಣಿಯಾಗದ ಅಭ್ಯರ್ಥಿಗಳು ಕೂಡ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಉದ್ಯೋಗ ಮೇಳ ಪ್ರಚಾರ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ವಾಹಿನಿಗಳ ಮೂಲಕ ಪ್ರಚಾರ ಮಾಡಲಾಗಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಮನೆ ಮನೆಗೆ ಕರ ಪತ್ರ ಹಂಚಲಾಗಿದೆ. ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಉದ್ಯೋಗ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ.
ಉದ್ಯೋಗ ಮೇಳದಲ್ಲಿ ಮೂಲ ಸೌಕರ್ಯ: ಉದ್ಯೋಗಾಕಾಂಕ್ಷಿಗಳಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ; ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡಲು 20 ಕೌಂಟರ್ ಗಳನ್ನು ತೆರೆಯಲಾಗಿದ್ದು, ಒಂದು ಕೌಂಟರ್ ಲ್ಲಿ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿ, ಪಿ.ಡಿ.ಒ, ಉಪನ್ಯಾಸಕರು ಸೇರಿ ಹತ್ತು ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಇವರು ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಕಂಪನಿಗಳ ಸಂದರ್ಶನ ಕೊಠಡಿಗೆ ತೆರಳಲು ಮಾರ್ಗದರ್ಶನ ಮಾಡುವರು.
ಪಾರ್ಕಿಂಗ್ ವ್ಯವಸ್ಥೆ: ಉದ್ಯೋಗಾಕಾಂಕ್ಷಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆ ಪಕ್ಕದಲ್ಲಿನ ರಸ್ತೆ ಮೂಲಕ ತೆರಳಿ ಕ್ರೀಡಾಂಗಣದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–