ಮೈಸೂರು: ‘ನಗರದಲ್ಲಿ ಸೆ.29ರಂದು ಮಹಿಷ ಮಂಡಲೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 8.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು’ ಎಂದು ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಮ್ಮ ಆಚರಣೆಗೆ ಜಿಲ್ಲಾಡಳಿತ ಸಹಕರಿಸಬೇಕು. ಮಹಿಷನ ಪ್ರತಿಮೆಗೆ ಸುಣ್ಣ, ಬಣ್ಣ ಬಳಿಯುವ ನೆಪದಲ್ಲಿ ಮುಸುಕು ಹಾಕಲು ಮುಂದಾಗಬಾರದು. ಕಳೆದ 3-4 ವರ್ಷದಿಂದ ಇಂಥ ನಡೆ ಕಂಡು ಬರುತ್ತಿದ್ದು, ನಮ್ಮ ತಾಳ್ಮೆಗೂ ಮಿತಿಯಿದೆ’ ಎಂದು ಎಚ್ಚರಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಬನ್ನಿ, ನೋಡೇ ಬಿಡೋಣ ಎಂದು ಸವಾಲೆಸೆದಿದ್ದಾರೆ.
ಈಗಾಗಲೇ ಕೆಲವು ಸಂಘಟನೆಗಳವರು ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಮಾಡಿದರೆ, ಚಾಮುಂಡಿ ಭಕ್ತರಾದ ನಾವೂ ಅಂದೇ ಚಾಮುಂಡಿ ಚಲೋ ನಡೆಸುತ್ತೇವೆ. ಆಗ, ಯಾರ ಕೈ ಮೇಲಾಗುತ್ತದೆಯೋ ನೋಡೋಣ’ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
‘ತಾಯಿ ಚಾಮುಂಡಿಗೆ ಅವಮಾನ ಮಾಡುವ ಮಹಿಷ ದಸರೆಗೆ ಹಿಂದೂಗಳು ಬಿಡಬಾರದು; ಒಟ್ಟಾಗಿ ವಿರೋಧಿಸಬೇಕು. ನಾವೆಲ್ಲಾ ಸೇರಿ ಹೋರಾಡದಿದ್ದರೆ, ಚಾಮುಂಡಿ ಬಳಿಗೆ ಹೋಗಿ ಬೇಡುವ ಅರ್ಹತೆ ಕಳೆದುಕೊಳ್ಳುತ್ತೇವೆ’ ಎಂದರು.
‘ಮಹಿಷನ ಮೇಲೆ ನಂಬಿಕೆ ಇರುವವರು ಮನೆಯಲ್ಲೆ ಪೂಜೆ ಮಾಡಿಕೊಳ್ಳಲಿ. ಮಹಿಷ ದಸರಾ ಹೆಸರಿನಲ್ಲಿ ಒಡಕು ಮೂಡಿಸುವುದು ಬೇಡ. ಮುಸ್ಲಿಮರು ಮಹಿಷನನ್ನು ನಂಬುವುದಿಲ್ಲ. ಮುಂದೊಂದು ದಿನ, ಮಹಿಷನ ಮೆರವಣಿಗೆ ಮೇಲೂ ಅವರು ಕಲ್ಲು ಎಸೆಯುತ್ತಾರೆ. ಮಹಿಷಾ ದಸರೆಗೆ ಚಾಮುಂಡಿ ಬೆಟ್ಟ ಸರಿಯಾದ ಜಾಗವಲ್ಲ. ದಸರೆ ವೇಳೆ ಅಪಸ್ವರಕ್ಕೆ ಅವಕಾಶ ಕೊಡಬಾರದು’ ಎಂದು ಹೇಳಿದ್ದರು.