ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ರಾಷ್ಟ್ರೀ ಸ್ವಯಂ ಸೇವಕ ಸಂಘದ (RSS) ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ವಿಜಯದಶಮಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು “ಶಾಸ್ತ್ರ ಪೂಜೆ” ನೆರವೇರಿಸಿದರು. ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಡಾ.ಕೋಪಿಲ್ಲಿಲ್ ರಾಧಾಕೃಷ್ಣ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು, ಎಲ್ಲಾ ಹಿಂದೂಗಳು ಒಟ್ಟಾಗಿ ಹಬ್ಬಗಳನ್ನು ಆಚರಿಸಬೇಕು. ನಾವು ನಮ್ಮ ಧರ್ಮ, ದೇವರು, ಆಚರಣೆ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ. ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ಎಲ್ಲರೂ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟಕ್ಕೆ ಕಾರಣವೇನು? ಎಂಬುದನ್ನು ಪತ್ತೆ ಹಚ್ಚಬೇಕಿದೆ. ಇಂತಹ ಘಟನೆಗಳು ಮರುಕಳುಹಿಸದಂತೆ ಕ್ರಮವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಯಾವುದು ಪರಿಸರ ಸ್ನೇಹಿ ಎಂದು ಸಾಂಪ್ರದಾಯಿಕವಾಗಿ ಯೋಚಿಸುವ ಅಗತ್ಯವಿದೆ. ಸಾವಯವ ಕೃಷಿಯ ಅವಶ್ಯಕತೆ ಇದೆ. ರಾಸಾಯನಿಕ ಗೊಬ್ಬರಗಳು ಭೂಮಿಯನ್ನು ನಾಶ ಮಾಡುತ್ತಿವೆ.
ನಮ್ಮ ಸ್ವಂತ ಆಲೋಚನೆಗಳಿಗೆ ಅನುಗುಣವಾಗಿ ನಾವು ಅಭಿವೃದ್ಧಿ ಹೊಂದಬೇಕು. ಅದಕ್ಕೆ ತಕ್ಕಂತೆ ನೀತಿ ರೂಪಿಸಬೇಕು. ಅದಕ್ಕಾಗಿ ಒಂದೇ ಮನಸ್ಸಿನಿಂದ ಕೆಲಸ ಮಾಡಬೇಕು. ಅದಕ್ಕಾಗಿ ಕಾಯದೆ ನಿಮ್ಮ ಮನೆಯಿಂದಲೇ ಪ್ರಾರಂಭಿಸಿ. ನೀರನ್ನು ಪೋಲು ಮಾಡಬೇಡಿ, ಒಂದೇ ಬಾರಿ ಬಳಸುವ ಪ್ಲಾಸ್ಟಿಕ್ ಬಳಸಬೇಡಿ ಎಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ರಾಮರಾಜ್ಯ
ರಾಮರಾಜ್ಯ ಸದೃಶ ವಾತಾವರಣ ನಿರ್ಮಾಣವಾಗುವುದಕ್ಕಾಗಿ ಪ್ರಜೆಗಳ ಗುಣಮಟ್ಟ ಮತ್ತು ಚಾರಿತ್ರ್ಯ ಹಾಗೂ ದೃಢತೆ ಹೇಗಿರುವುದು ಅನಿವಾರ್ಯವೋ ಆ ರೀತಿ ಸಂಸ್ಕಾರ ಮತ್ತು ಕರ್ತವ್ಯಪ್ರಜ್ಞೆ ಸರ್ವರಲ್ಲೂ ಉತ್ಪತ್ತಿಯಾಗುವಂತೆ ಮಾಡುವ ‘ಸತ್ಸಂಗ’ ಅಭಿಯಾನವನ್ನು ಪರಮಪೂಜ್ಯ ಶ್ರೀ ಶ್ರೀ ಅನುಕೂಲಚಂದ್ರ ಠಾಕೂರ್ ಅವರ ಮೂಲಕ ಚಾಲನೆ ನೀಡಲಾಯಿತು.
ನಮ್ಮ ದೇಶದಲ್ಲಿಯೂ ಭರವಸೆ ಮತ್ತು ಆಕಾಂಕ್ಷೆಗಳ ಜೊತೆಗೆ ಸವಾಲುಗಳು ಮತ್ತು ಸಮಸ್ಯೆಗಳೂ ಇವೆ. ಪರಂಪರೆಯಂತೆ ಈ ಎರಡನ್ನೂ ಸಂಘದ ಈ ವಿಜಯದಶಮಿ ಭಾಷಣದಲ್ಲಿ ಸಾಧ್ಯವಾದಷ್ಟು ವಿವರವಾಗಿ ಚರ್ಚಿಸಲಾಗಿದೆ. ಆದರೆ ಇಂದು ನಾನು ಕೆಲವು ಸವಾಲುಗಳನ್ನು ಮಾತ್ರ ಚರ್ಚಿಸುತ್ತೇನೆ. ಏಕೆಂದರೆ ಆಸೆ ಆಕಾಂಕ್ಷೆಗಳ ಈಡೇರಿಕೆ ಕಡೆಗೆ ದೇಶವು ಯಾವ ವೇಗದಲ್ಲಿ ಮುನ್ನಡೆಯುತ್ತಿದೆಯೋ ಅದಂತೂ ಸಾಗುತ್ತಲೇ ಇರುತ್ತದೆ.
ಪ್ರತಿಷ್ಠಿತ ಸ್ಥಾನದಲ್ಲಿ ಭಾರತ
ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ಒಂದು ರಾಷ್ಟ್ರವಾಗಿ ಸಶಕ್ತ ಮತ್ತು ಪ್ರತಿಷ್ಠಿತ ಸ್ಥಾನದಲ್ಲಿದೆ ಎನ್ನುವುದು ಎಲ್ಲರ ಅನುಭವಕ್ಕೆ ಬರುತ್ತಿದೆ. ಜಗತ್ತಿನಲ್ಲಿ ಅದರ ಖ್ಯಾತಿ ಹೆಚ್ಚಿದೆ. ಸ್ವಾಭಾವಿಕವಾಗಿ, ನಮ್ಮ ಸಂಪ್ರದಾಯ ಮತ್ತು ಭಾವನೆಯಲ್ಲಿ ಹುದುಗಿರುವ ವಿಚಾರಗಳಿಗೆ ಗೌರವವು ಅನೇಕ ಕ್ಷೇತ್ರಗಳಲ್ಲಿ ಹೆಚ್ಚಾಗಿದೆ.
ನಮ್ಮ ವಿಶ್ವಬಂಧುತ್ವದ ಮನೋಭಾವ, ಪರಿಸರದೆಡೆಗಿನ ನಮ್ಮ ದೃಷ್ಟಿಯ ಸ್ವೀಕೃತಿ, ಯೋಗ ಇತ್ಯಾದಿಗಳನ್ನು ಜಗತ್ತು ನಿಸ್ಸಂಕೋಚವಾಗಿ ಸ್ವೀಕರಿಸುತ್ತಿದೆ. ಸಮಾಜದಲ್ಲಿ ಅದರಲ್ಲೂ ಯುವ ಪೀಳಿಗೆಯಲ್ಲಿ ಸ್ವ (ನಮ್ಮತನದ) ಗೌರವ ಭಾವನೆ ಹೆಚ್ಚುತ್ತಿದೆ. ನಾವು ಕೆಲವು ಕ್ಷೇತ್ರಗಳಲ್ಲಿ ನಿಧಾನವಾಗಿ ಪ್ರಗತಿ ಸಾಧಿಸುತ್ತಿದ್ದೇವೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲಾ ಚುನಾವಣೆಗಳು ಶಾಂತಿಯುತವಾಗಿ ನಡೆದಿವೆ. ದೇಶದ ಯುವಶಕ್ತಿ, ಮಾತೃಶಕ್ತಿ, ಉದ್ಯಮಿಗಳು, ರೈತರು, ಕಾರ್ಮಿಕರು, ಸೈನಿಕರು, ಆಡಳಿತ ಮತ್ತು ಸರ್ಕಾರ ಎಲ್ಲರೂ ತಮ್ಮ ಕೆಲಸಗಳಿಗೆ ಬದ್ಧರಾಗಿರುತ್ತಾರೆ ಎಂಬ ವಿಶ್ವಾಸವಿದೆ.
ಕಳೆದ ಕೆಲವು ವರ್ಷಗಳಲ್ಲಿ, ದೇಶಹಿತದ ಈ ಪ್ರೇರಣೆಯಿಂದ ಇವರೆಲ್ಲರೂ ಮಾಡಿದ ಪ್ರಯತ್ನಗಳಿಂದಾಗಿ ವಿಶ್ವ ವೇದಿಕೆಯಲ್ಲಿ ಭಾರತದ ಚಿತ್ರಣ, ಶಕ್ತಿ, ಕೀರ್ತಿ ಮತ್ತು ಸ್ಥಾನವು ನಿರಂತರವಾಗಿ ಎತ್ತರಕ್ಕೇರುತ್ತಿದೆ. ಆದರೆ ನಮ್ಮೆಲ್ಲರ ದೃಢನಿಶ್ಚಯವನ್ನು ಪರೀಕ್ಷಿಸುವಂತೆೆ, ಕೆಲವು ಮಾಯಾವಿ ಷಡ್ಯಂತ್ರಗಳು ನಮ್ಮ ಮುಂದೆ ಇವೆ.
ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ನಮ್ಮ ದೇಶದ ಪ್ರಸ್ತುತ ಸನ್ನಿವೇಶಗಳೆಡೆಗೆ ಕಣ್ಣು ಹಾಯಿಸಿ ಅವಲೋಕಿಸಿದರೆ, ಅಂತಹ ಸವಾಲುಗಳು ನಮ್ಮ ಮುಂದೆ ಸ್ಪಷ್ಟವಾಗಿ ಗೋಚರಿಸುತ್ತವೆ. ದೇಶದ ನಾಲ್ಕೂ ದಿಕ್ಕುಗಳ ಪ್ರದೇಶಗಳನ್ನು ಅಶಾಂತ ಮತ್ತು ಅಸ್ಥಿರಗೊಳಿಸುವ ಪ್ರಯತ್ನಗಳು ವೇಗವನ್ನು ಪಡೆಯುತ್ತಿರುವಂತೆ ತೋರಿಸುತ್ತಿದೆ.
ದೇಶ ವಿರೋಧಿ ಕುತಂತ್ರಗಳು
ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ಸಿಗುವುದರಿಂದ ಯಾರು ಸ್ವಾರ್ಥ ಹೊಡೆದುರುಳುತ್ತದೆಯೋ ಅಂತಹ ಶಕ್ತಿಗಳು ಭಾರತ ಒಂದು ಚೌಕಟ್ಟಿನೊಳಗೆ ಬೆಳೆಯುವಂತೆ ಮಾಡಲು ನಿರೀಕ್ಷೆಯಂತೆಯೇ ಶ್ರಮಿಸುತ್ತಿದೆ. ತಮ್ಮ ಉದಾರವಾದಿ, ಜನತಾಂತ್ರಿಕ ಸ್ವಭಾವ ಮತ್ತು ವಿಶ್ವಶಾಂತಿಗಾಗಿ ಕಟಿಬದ್ಧರೆನ್ನುವ ದೇಶಗಳ ಕಟಿಬದ್ಧತೆ ಅವರ ಸುರಕ್ಷತೆ ಮತ್ತು ಸ್ವಾರ್ಥದ ಪ್ರಶ್ನೆ ಎದ್ದಾಗ ಅಂತರ್ಧಾನವಾಗುತ್ತಿದೆ.
ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದರಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತ ಅಲ್ಲಿನ ಸರ್ಕಾರಗಳನ್ನು ಹಿಂಸಾತ್ಮಕ ಮಾರ್ಗದ ಮೂಲಕ ಕೆಳಗಿಳಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ.
ಭಾರತದ ಒಳಗೆ ಮತ್ತು ಹೊರಗೆ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಪ್ರತಿಯೊಬ್ಬರೂ ಈ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು. ಸುಳ್ಳಿನ ಅಥವಾ ಅರ್ಧಸತ್ಯದ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಹಿಂದೂಗಳ ಒಗ್ಗಟ್ಟು
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯ ತಾತ್ಕಾಲಿಕ ಮತ್ತು ಸ್ಥಾನೀಯ ಕಾರಣಗಳು ಈ ಘಟನಾಕ್ರಮದ ಒಂದು ಮುಖ ಮಾತ್ರ. ಹಾಗೆಯೆ ಅಲ್ಲಿರುವ ಹಿಂದೂ ಸಮಾಜದ ಮೇಲೆ ಯಾವುದೇ ಕಾರಣವಿಲ್ಲದೇ ನಡೆಯುವ ಅಮಾನವೀಯ ಅತ್ಯಾಚಾರದ ಪರಂಪರೆ ಮತ್ತೆ ಮರುಕಳಿಸಿತು. ಆ ದೌರ್ಜನ್ಯದ ವಿರುದ್ಧ ಅಲ್ಲಿನ ಹಿಂದುಗಳು ಈ ಬಾರಿ ಸಂಘಟಿತರಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಿಂದ ಹೊರಬಂದು ವಿರೋಧಿಸಿದ್ದರಿಂದ ಸ್ವಲ್ಪ ಬಚಾವಾದರು. ಆದರೆ ಎಲ್ಲಿಯವರೆಗೂ ಅಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ, ಅಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ.
ಆದ್ದರಿಂದ ಆ ದೇಶದಿಂದ ಭಾರತಕ್ಕೆ ಒಳನುಸುಳುತ್ತಿರುವ ಮತ್ತು ಅದರ ಕಾರಣದಿಂದಾಗಿ ಇಲ್ಲಿ ಉದ್ಭವಿಸುತ್ತಿರುವ ಜನಸಂಖ್ಯಾ ಅಸಮತೋಲನವು ಇಲ್ಲಿನ ಸಾಮಾನ್ಯ ಜನರನ್ನು ಬಾಧಿಸುವ ಚಿಂತೆಯ ವಿಷಯವಾಗಿದೆ. ಪರಸ್ಪರ ಸೌಹಾರ್ದತೆ ಮತ್ತು ದೇಶದ ಸುರಕ್ಷತೆಯ ಮೇಲೂ ಈ ಒಳನುಸುಳುವಿಕೆ ಗಂಭೀರವಾದ ಪ್ರಶ್ನೆಯನ್ನು ಮೂಡಿಸುತ್ತದೆ.
ಉದಾರತೆ, ಮಾನವತೆ, ಹಾಗೂ ಸದ್ಭಾವನೆಯ ಪರವಾಗಿರುವ ಎಲ್ಲರ, ವಿಶೇಷವಾಗಿ ಭಾರತ ಸರ್ಕಾರ ಮತ್ತು ವಿಶ್ವಾದ್ಯಂತ ನೆಲೆಸಿರುವ ಹಿಂದೂಗಳ ಸಹಾಯವೊಂದೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಅಗತ್ಯವಿರುವ ವಿಚಾರ.
ಅಸಂಘಟಿತವಾಗಿರುವುದು ಅಥವಾ ದುರ್ಬಲರಾಗಿ ಉಳಿಯುವುದು ದುಷ್ಟರಿಂದ ದೌರ್ಜನ್ಯವನ್ನು ಆಹ್ವಾನಿಸುವುದು ಎಂಬ ಪಾಠವನ್ನು ಪ್ರಪಂಚದಾದ್ಯಂತದ ಹಿಂದೂ ಸಮಾಜವೂ ಗ್ರಹಿಸಬೇಕು. ಆದರೆ ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಈಗ ಭಾರತದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದ ಜೊತೆ ಸೇರುವ ಮಾತುಗಳು ಕೇಳಿಬರುತ್ತಿವೆ.
ಇಂತಹ ಕಥನ (narrative)ಗಳನ್ನು ಸೃಷ್ಟಿಸಿ, ಸ್ಥಾಪಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯಾವ ದೇಶಗಳು ಬಯಸುತ್ತವೆ ಎಂದು ಹೇಳಬೇಕಾಗಿಲ್ಲ. ಅದಕ್ಕೆ ಸೂಕ್ತ ಉತ್ತರಗಳು ಇಲ್ಲಿನ ಆಡಳಿತಕ್ಕೆ ಸಂಬಧಿಸಿದ ವಿಷಯವಾಗಿದೆ. ಆದರೆ ಸಮಾಜದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಷ್ಟ-ಭ್ರಷ್ಟಗೊಳಿಸುವ, ವೈವಿಧ್ಯತೆಯನ್ನು ಪ್ರತ್ಯೇಕತೆಯಂತೆ ಬಿಂಬಿಸುವ, ಸಮಸ್ಯೆಗಳಿಂದ ಬಳಲುತ್ತಿರುವ ಗುಂಪುಗಳಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಮೂಡಿಸುವ ಮತ್ತು ಅತೃಪ್ತಿಯನ್ನು ಅರಾಜಕತೆಗೆ ಪರಿವರ್ತಿಸುವ ಪ್ರಯತ್ನಗಳು ಹೆಚ್ಚಾಗಿರುವುದು ಸಮಾಜದಲ್ಲಿರುವ ಸರ್ವಾಧಿಕ ಚಿಂತೆಯ ವಿಷಯವಾಗಿದೆ.
ಕುತಂತ್ರ
‘ಡೀಪ್ ಸ್ಟೇಟ್’, ‘ವೋಕಿಸಂ’, ‘ಕಲ್ಚರಲ್ ಮಾರ್ಕ್ಸಿಸ್ಟ್’ ಇಂತಹ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ವಾಸ್ತವವಾಗಿ, ಅವರು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳು. ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಯಾವುದನ್ನು ಒಳ್ಳೆಯದು ಅಥವಾ ಮಂಗಳಕರವೆಂದು ಪರಿಗಣಿಸಲಾಗಿದೆಯೋ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಗುಂಪಿನ ಕಾರ್ಯವೈಖರಿಯ ಒಂದು ಭಾಗವಾಗಿದೆ.
ಸಮಾಜದ ಮನಸ್ಸನ್ನು ರೂಪಿಸುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು, ಉದಾ. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು, ಸಂವಹನ ಮಾಧ್ಯಮ, ಬೌದ್ಧಿಕ ಸಂವಾದ ಇತ್ಯಾದಿಗಳನ್ನು ತಮ್ಮ ಪ್ರಭಾವಕ್ಕೆ ತಂದು ಅವುಗಳ ಮೂಲಕ ಸಮಾಜದ ವಿಚಾರ, ಸಂಸ್ಕಾರ ಮತ್ತು ನಂಬಿಕೆಗಳನ್ನು ನಾಶಪಡಿಸುವುದು ಅವರ ಕಾರ್ಯವೈಖರಿಯ ಮೊದಲ ಹೆಜ್ಜೆಯಾಗಿದೆ.
ಒಟ್ಟಿಗೆ ವಾಸಿಸುವ ಸಮಾಜದಲ್ಲಿ, ಯಾವುದೇ ಘಟಕವು ಅದರ ವಾಸ್ತವಿಕ ಅಥವಾ ಕೃತಕವಾಗಿ ರಚಿಸಲಾದ ಅನನ್ಯತೆ, ಬೇಡಿಕೆ, ಅವಶ್ಯಕತೆ ಅಥವಾ ಸಮಸ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಲು ಪ್ರೇರೇಪಿಸುತ್ತದೆ. ಅವರಲ್ಲಿ ಅನ್ಯಾಯಗ್ರಸ್ಥ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಅವರ ಅತೃಪ್ತಿಯ ವಾತಾವರಣವನ್ನು ಗಮನಿಸಿ, ಆ ಘಟಕವು ಸಮಾಜದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಮತ್ತು ವ್ಯವಸ್ಥೆಯ ವಿರುದ್ಧವಾಗಿ, ಆಕ್ರಮಣಕಾರಿಯಾಗಿಸುತ್ತದೆ.
ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಭಾವ್ಯತೆಗಳನ್ನೂ ಕಂಡುಹಿಡಿದು ನೇರ ಸಂಘರ್ಷಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತಿದೆ. ವ್ಯವಸ್ಥೆ, ಕಾನೂನು, ಆಡಳಿತ ಇತ್ಯಾದಿಗಳ ಬಗ್ಗೆ ಅಶ್ರದ್ಧೆ ಮತ್ತು ದ್ವೇಷವನ್ನು ತೀವ್ರಗೊಳಿಸುವ ಮೂಲಕ ಅರಾಜಕತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಆ ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಲು ಅನುಕೂಲವಾಗುತ್ತದೆ.
ಬಹುಪಕ್ಷೀಯ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ಪಕ್ಷಗಳು ಅಧಿಕಾರವನ್ನು ಪಡೆಯಲು ಸ್ಪರ್ಧೆ ನಡೆಸುತ್ತವೆ. ಒಂದು ವೇಳೆ ಸಮಾಜದಲ್ಲಿರುವ ಸಣ್ಣ ಸ್ವಾರ್ಥಗಳು, ಪರಸ್ಪರ ಸದ್ಭಾವನೆ ಅಥವಾ ರಾಷ್ಟ್ರದ ಏಕತೆ ಮತ್ತು ಅಖಂಡತೆಗಿಂತ ಹೆಚ್ಚು ಮಹತ್ವಪೂರ್ಣ ಎನಿಸಿದರೆ, ಅಥವಾ ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಸಮಾಜದ ಸದ್ಭಾವನೆ ಮತ್ತು ರಾಷ್ಟ್ರದ ಗೌರವ ಮತ್ತು ಏಕಾತ್ಮತೆ ಗೌಣವೆಂದು ಪರಿಗಣಿಸಿದರೆ, ಆಗ ಅಂತಹ ಬಹುಪಕ್ಷೀಯ ರಾಜಕಾರಣದಲ್ಲಿ ಒಂದು ಪಕ್ಷದ ಬೆಂಬಲಕ್ಕೆ ನಿಂತು, ಪರ್ಯಾಯ ರಾಜಕಾರಣದ ಹೆಸರಿನಲ್ಲಿ ತಮ್ಮ ವಿಭಜನಕಾರಿ ಅಜೆಂಡಾವನ್ನು ಮುಂದುವರಿಸುವುದು ಅವರ ಕಾರ್ಯಪದ್ಧತಿ. ಇದು ಕಪೋಲಕಲ್ಪಿತ ಕಥೆಯಲ್ಲ. ಪ್ರಪಂಚದ ಹಲವು ದೇಶಗಳಲ್ಲಿ ನಡೆದಿರುವ ವಾಸ್ತವ ಎಂದರು.
ಪಾಶ್ಚಿಮಾತ್ಯ ಪ್ರಪಂಚದ ಮುಂದುವರಿದ ದೇಶಗಳಲ್ಲಿ ಈ ಮಂತ್ರವಿಪ್ಲವದ ಪರಿಣಾಮವಾಗಿ, ಜೀವನದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯು ಬಿಕ್ಕಟ್ಟಿಗೆ ಸಿಲುಕಿರುವುದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ತಥಾಕಥಿತ “ಅರಬ್ ಸ್ಪ್ರಿಂಗ್” ನಿಂದ ಪ್ರಾರಂಭಿಸಿ ನೆರೆಯ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರವರೆಗೆ ಈ ಪದ್ಧತಿಯು ಕಾರ್ಯನಿರ್ವಹಿಸಿದ್ದನ್ನು ನಾವು ನೋಡಿದ್ದೇವೆ.
ಭಾರತದಾದ್ಯಂತ ನಾಲ್ಕೂ ದಿಕ್ಕುಗಳಲ್ಲಿ ವಿಶೇಷವಾಗಿ ಗಡಿಪ್ರದೇಶ ಮತ್ತು ಬುಡಕಟ್ಟು ಜನನಿಬಿಡ ಪ್ರದೇಶಗಳಲ್ಲಿ ಇಂತಹ ದುಷ್ಟ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಜೀವನವು ಸಾಂಸ್ಕೃತಿಕ ಏಕಾತ್ಮತೆ ಮತ್ತು ಶ್ರೇಷ್ಠ ನಾಗರಿಕತೆಯ ಸುದೃಢ ಅಡಿಪಾಯದ ಮೇಲೆ ನಿಂತಿದೆ.
ನಮ್ಮ ಸಾಮಾಜಿಕ ಜೀವನವು ಉದಾತ್ತ ಜೀವನ ಮೌಲ್ಯಗಳಿಂದ ಪ್ರೇರಿತವಾದದ್ದು ಮತ್ತು ಪೋಷಣೆಯಾದದ್ದು. ನಮ್ಮ ಇಂತಹ ರಾಷ್ಟ್ರೀಯ ಜೀವನಕ್ಕೆ ಹಾನಿ ಮಾಡುವ ಮತ್ತು ನಾಶಗೊಳಿಸುವ ದುಷ್ಟ ಪ್ರಯತ್ನಗಳನ್ನು ಬಹುಮುಂಚಿತವಾಗಿಯೇ ನಿಲ್ಲಿಸುವ ಅವಶ್ಯಕತೆ ಇದೆ.
ಇದಕ್ಕಾಗಿ ಜಾಗೃತ ಸಮಾಜವೇ ಪ್ರಯತ್ನ ನಡೆಸಬೇಕಿದೆ. ಇದಕ್ಕಾಗಿ ನಮ್ಮ ಸಂಸ್ಕೃತಿಜನ್ಯ ಜೀವನದರ್ಶನ ಮತ್ತು ಸಂವಿಧಾನದತ್ತ ಮಾರ್ಗದ ಆಧಾರದ ಮೇಲೆ ಪ್ರಜಾತಾಂತ್ರಿಕ ಯೋಜನೆ ರೂಪಿಸಬೇಕು. ವೈಚಾರಿಕ ಮತ್ತು ಸಾಂಸ್ಕೃತಿಕ ಮಾಲಿನ್ಯವನ್ನು ಹರಡುವ ಈ ಷಡ್ಯಂತ್ರಗಳಿಂದ ಸಮಾಜವನ್ನು ಸುರಕ್ಷಿತವಾಗಿಡುವುದು ಇಂದಿನ ಅಗತ್ಯವಾಗಿದೆ ಎಂದರು.