ಬೆಂಗಳೂರು: ಮಹದೇವಪುರದ ಮಹೀಂದ್ರಾ ಶೋರೂಂ ಸಿಬ್ಬಂದಿ ಮಾಡಿಕೊಂಡ ಎಡವಟ್ಟಿಗೆ ಹಲವು ಹೊಸ ವಾಹನಗಳು ಅಪಘಾತಕ್ಕೆ (Accident) ಒಳಗಾಗಿ ಜಖಂಗೊಂಡಿರುವ ಘಟನೆ ವರದಿಯಾಗಿದೆ.

ಕುಡಿದ ಮತ್ತಿನಲ್ಲಿ ಶೋ ರೂಂಗೆ ಬಂದ ವ್ಯಕ್ತಿಯೊಬ್ಬನಿಗೆ ಮಹೀಂದ್ರಾ ಶೋರೂಂ ಸಿಬ್ಬಂದಿ ಕಾರನ್ನು ಟೆಸ್ಟ್ ಡ್ರೈವ್‌ಗೆ ನೀಡಿದ್ದಾರೆ.

ಏಪ್ರಿಲ್ 12ರಂದು ಮಹದೇವಪುರದ ವಿಜೇಶ್ವರ ನಗರದಲ್ಲಿರುವ ಮಹೀಂದ್ರಾ ಶೋರೂಂನಲ್ಲಿ ಕುಡಿದು ಬಂದಿದ್ದ ಅಭಿಲಾಶ್ ಎಂಬಾತನಿಗೆ ಟೆಸ್ಟ್ ಡ್ರೈವ್ ವಾಹನ ನೀಡಿದ ಸಿಬ್ಬಂದಿಯ ನಿರ್ಲಕ್ಷ್ಯ ತೋರಿದೆ. ಇದರಿಂದ ಅಪಘಾತ ಉಂಟಾಗಿ, ನಾಲ್ಕು ವಾಹನಗಳು ಜಖಂಗೊಂಡಿದೆ.
ಕುಡಿದ ಮತ್ತಿನಲ್ಲಿ ಅಭಿಲಾಶ್, ರಸ್ತೆಯಲ್ಲಿ ಮನಸೋ ಇಚ್ಛೆ ಕಾರು ಓಡಿಸಿದ್ದಾನೆ. ಆತ ನಾಲ್ಕು ಕಾರುಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ, ಅಷ್ಟೇ ಅಲ್ಲದೆ, ರಮೇಶ್ ಎಂಬವರ ಕಾರಿಗೆ ಗುದ್ದಿದ ರಭಸಕ್ಕೆ ಅವರ ಕಾಲು ಮುರಿದಿದೆ.
ಗಾಯಗೊಂಡ ರಮೇಶ್ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಲಾಶ್ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಸಂಬಂಧ ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಹದೇವಪುರ ಸಂಚಾರಿ ಪೊಲೀಸರು ಅಭಿಲಾಶ್ ಗೆ ನೋಟಿಸ್ ಜಾರಿ ಮಾಡಿದ್ದು, ಐಎಂವಿ ಕಾಯಿದೆ ಹಾಗೂ ಬಿಎನ್‌ಎಸ್ 125 (ಎ), 281 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪತ್ನಿ ಭುವನ ಪತ್ತೆಗೆ ಪತಿಯ ಮನವಿ

ಚಿಕ್ಕಬಳ್ಳಾಪುರ: ನಗರದ ಪ್ರಶಾಂತನಗರದ 4ನೇ ವಾರ್ಡ್ ನಿವಾಸಿ ಪಿ.ಭುವನ (P. Bhuvana) ಎಂಬ 31 ವರ್ಷದ ಮಹಿಳೆಯು ಮಾನಸಿಕ ಖಿನ್ನತೆ ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಮನನೊಂದು ಏಪ್ರಿಲ್ 2 ರಂದು ಮನೆಯಿಂದ ಹೊರಗಡೆ ಹೋದವಳು ಮತ್ತೆ ಮನೆಗೆ ಬಂದಿರುವುದಿಲ್ಲ.
ಎಲ್ಲಾ ಕಡೆ ಹುಡುಕಾಡಿದರೂ, ಸಂಬಂಧಿಕರಲ್ಲಿ ವಿಚಾರಿಸಿದರೂ ಮಾಹಿತಿ ಸಿಗದ ಕಾರಣ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿರುವ ಬಗ್ಗೆ ದೂರು ನೀಡಿ ಪತ್ತೆ ಮಾಡಿಕೊಡಬೇಕೆಂದು ಅವರ ಮನವಿ ಮಾಡಿದ್ದಾರೆ.
ಚಹರೆ: ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, 5 ಅಡಿ ಎತ್ತರವಿದ್ದು, ಗ್ರೇ ಕಲ್ಲರ್ ಚೂಡಿದಾರ್ ಧರಿಸಿದ್ದು, ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ.
ಈ ಚಹರೆಯುಳ್ಳ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದೆಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಕುರಿತ ಮಸೂದೆಗೆ ಸೋಲು..!

ನವದೆಹಲಿ: ಮಹಿಳಾ ಮೀಸಲಾತಿ (Women’s reservation) ಮಸೂದೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಸೋಲಾಗಿದ್ದು, ಇದೇ ಮೊದಲ ಬಾರಿಗೆ ಮಸೂದೆಯನ್ನು ಅಂಗೀಕರಿಸುವಲ್ಲಿ ಮೋದಿ (Modi) ಸರ್ಕಾರ ವಿಫಲವಾಗಿ, ಮುಖಭಂಗಕ್ಕೀಡಾಗಿದೆ.
ಮಸೂದೆಯ ಪರವಾಗಿ 278 ಮತಗಳು ಮತ್ತು ವಿರುದ್ಧವಾಗಿ 211 ಮತಗಳು ಬಿದ್ದಿದ್ದು. ಲೋಕಸಭೆಯಲ್ಲಿ 489 ಸಂಸದರು ಮತ ಚಲಾಯಿಸಿದರು.
ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 489 ರಲ್ಲಿ ಮೂರನೇ ಎರಡರಷ್ಟು 326. ಹೀಗಾಗಿ, ಬಹುಮತದ ಕೊರತೆಯಿಂದಾಗಿ, ಮಸೂದೆಯನ್ನು 28 ಮತಗಳಿಂದ ಸೋಲಿಸಲಾಗಿದೆ.
ತನ್ನ 11 ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರವು ಸದನದಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು, ಅಮಿತ್ ಶಾ ಒಂದು ಗಂಟೆ ಭಾಷಣ ಮಾಡಿ, ಈ ಮಸೂದೆಗಳನ್ನು ಅಂಗೀಕರಿಸದಿದ್ದರೆ, ವಿರೋಧ ಪಕ್ಷವೇ ಜವಾಬ್ದಾರವಾಗಿರುತ್ತದೆ ಎಂದು ಹೇಳಿದರು. ವಿರೋಧ ಪಕ್ಷವು ಮತ ಚಲಾಯಿಸದಿದ್ದಾರೆ.
ಈ ತಿದ್ದುಪಡಿ ಮಾಡಿದ ಮಸೂದೆಗಳನ್ನು ಲೋಕಸಭೆಯಲ್ಲಿ 21 ಗಂಟೆಗಳ ಕಾಲ ಚರ್ಚಿಸಲಾಯಿತು. 56 ಮಹಿಳೆಯರು ಸೇರಿದಂತೆ ಒಟ್ಟು 130 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕ್ಷೇತ್ರ ವಿಂಗಡನೆ ಬದಿಗಿಟ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿದ್ದವಾದ್ರೂ, ಮೋದಿ ಸರ್ಕಾರ ಪಟ್ಟುಬಿಡದ ಕಾರಣ ಹಿನ್ನಡೆ ಅನುಭವಿಸಿದೆ.
