ನವದೆಹಲಿ: ಮಹಿಳಾ ಮೀಸಲಾತಿ (Women’s reservation Bill) ಮಸೂದೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಸೋಲಾಗಿದ್ದು, ಇದೇ ಮೊದಲ ಬಾರಿಗೆ ಮಸೂದೆಯನ್ನು ಅಂಗೀಕರಿಸುವಲ್ಲಿ ಮೋದಿ (Modi) ಸರ್ಕಾರ ವಿಫಲವಾಗಿ, ಮುಖಭಂಗಕ್ಕೀಡಾಗಿದೆ.

ಮಸೂದೆಯ ಪರವಾಗಿ 278 ಮತಗಳು ಮತ್ತು ವಿರುದ್ಧವಾಗಿ 211 ಮತಗಳು ಬಿದ್ದಿದ್ದು. ಲೋಕಸಭೆಯಲ್ಲಿ 489 ಸಂಸದರು ಮತ ಚಲಾಯಿಸಿದರು.


ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 489 ರಲ್ಲಿ ಮೂರನೇ ಎರಡರಷ್ಟು 326. ಹೀಗಾಗಿ, ಬಹುಮತದ ಕೊರತೆಯಿಂದಾಗಿ, ಮಸೂದೆಯನ್ನು 28 ಮತಗಳಿಂದ ಸೋಲಿಸಲಾಗಿದೆ.
ತನ್ನ 11 ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರವು ಸದನದಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು, ಅಮಿತ್ ಶಾ ಒಂದು ಗಂಟೆ ಭಾಷಣ ಮಾಡಿ, ಈ ಮಸೂದೆಗಳನ್ನು ಅಂಗೀಕರಿಸದಿದ್ದರೆ, ವಿರೋಧ ಪಕ್ಷವೇ ಜವಾಬ್ದಾರವಾಗಿರುತ್ತದೆ ಎಂದು ಹೇಳಿದರು.
ಈ ತಿದ್ದುಪಡಿ ಮಾಡಿದ ಮಸೂದೆಗಳನ್ನು ಲೋಕಸಭೆಯಲ್ಲಿ 21 ಗಂಟೆಗಳ ಕಾಲ ಚರ್ಚಿಸಲಾಯಿತು. 56 ಮಹಿಳೆಯರು ಸೇರಿದಂತೆ ಒಟ್ಟು 130 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವಿವಾದಿತ ಕ್ಷೇತ್ರ ವಿಂಗಡನೆ ಬದಿಗಿಟ್ಟು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರೆ ಬೆಂಬಲಿಸುವುದಾಗಿ ವಿಪಕ್ಷಗಳು ಹೇಳಿದ್ದವಾದ್ರೂ, ಮೋದಿ ಸರ್ಕಾರ ಪಟ್ಟುಬಿಡದ ಕಾರಣ ಹಿನ್ನಡೆ ಅನುಭವಿಸಿದೆ ಎಂಬ ಮಾತುಗಳು ವ್ಯಾಪಕವಾಗಿದೆ.
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ: ಆರ್. ಆಶೋಕ

ಬೆಂಗಳೂರು: ನಾರಿ ಶಕ್ತಿ ವಂದನಾ ಅಧಿನಿಯಮ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಈ ಹಿಂದೆ ಮಸೂದೆಯನ್ನು ಸ್ವಾಗತ ಮಾಡುತ್ತೇವೆಂದು ಹೇಳಿ ಈಗ ಕಿತಾಪತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೀಗ ಧರ್ಮಾಧಾರಿತ ಮೀಸಲು ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಿಗೆ ಅವಕಾಶವಿಲ್ಲ. ದೇಶದ ಎಲ್ಲ ಮಹಿಳೆಯರು ಈ ಮಸೂದೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.
ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಬುದ್ಧಿ ಕಡಿಮೆ ಇದೆ. ಇದೇ ರೀತಿ ಕಾಂಗ್ರೆಸ್ ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್ ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್‌ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿ ತರುವ ಮೂಲಕ ಮಹಿಳಾ ಸಮಾನತೆ ತರುತ್ತಿದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಇಂತಹ ಪ್ರಯತ್ನ ಮಾಡಿದರೂ ಸಫಲವಾಗಿರಲಿಲ್ಲ.
ನಾರಿ ಶಕ್ತಿ ವಂದನಾ ಅಧಿನಿಯಮ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಲಿದೆ. ಇದರ ಜೊತೆಗೆ ಜನಸಂಖ್ಯೆಗೆ ಪೂರಕವಾಗಿ ಕ್ಷೇತ್ರ ಮರುವಿಂಗಡಣೆ ಆಗಲಿದೆ. ಇದರಿಂದ ಎಲ್ಲರಿಗೂ ಪ್ರಾತಿನಿಧ್ಯ ಸಿಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸ್ವಾಗತಾರ್ಹ ತೀರ್ಪು
ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಇಬ್ಬರು ಸಾಕ್ಷಿ ಹೇಳಿದ್ದಾರೆ. ರಾಜಕಾರಣಿಗಳ ಮಾತು ಕೇಳಿಕೊಂಡು ಕೊಲೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ಪೊಲೀಸ್ ಇಲಾಖೆ ಕೇಸನ್ನು ಮುಚ್ಚಿಹಾಕುತ್ತಿತ್ತು. ಈಗ ಎಲ್ಲವೂ ಸಾಬೀತಾಗಿದ್ದು, ತಪ್ಪಿತಸ್ಥರು ಯಾರೆಂದು ಗೊತ್ತಾಗಿದೆ. ವಿನಯ್ ಕುಲಕರ್ಣಿಯೇ ಕೊಲೆ ಮಾಡಿಸಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ರಾಜಕೀಯ ಕ್ಷೇತ್ರದಲ್ಲಾಗುವ ಕೊಲೆಗಳಿಗೆ ಇದು ತಿಲಾಂಜಲಿ ನೀಡಲಿದೆ. ಇದು ಸ್ವಾಗತಾರ್ಹ ತೀರ್ಪು ಎಂದರು.
ತುಘಲಕ್ ದರ್ಬಾರ್
ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್ ದರ್ಬಾರ್ ಮಾಡುವ ಅಗತ್ಯವಿರಲಿಲ್ಲ. ನಾನು ಕೂಡ ಕನ್ನಡದ ಹೋರಾಟಗಾರನಾಗಿದ್ದು, ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಪೊಲೀಸರ ಲಾಠಿ ಏಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದೆ. ಹೊಸೂರಿನಲ್ಲಿ ಹೆಚ್ಚಿನವರು ಕನ್ನಡ ಮಾತಾಡುತ್ತಾರೆ. ಕಾಸರಗೋಡಿನಲ್ಲೂ ಕನ್ನಡಿಗರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಇಲ್ಲವೆಂದರೆ ಸಮಸ್ಯೆಯಾಗುತ್ತದೆ. ಉರ್ದು ಶಾಲೆಗಳಲ್ಲಿ ಮೊದಲಿಗೆ ಉರ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್ ಓದುತ್ತಾರೆ. ಕೊನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ.
ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಅಥವಾ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ತೀರ್ಮಾನ ಮಾಡಿರುವುದು ಸರಿಯಲ್ಲ. ಕನ್ನಡಕ್ಕೆ ಆದ್ಯತೆ ನೀಡಬೇಕೆಂಬುದು ನಮ್ಮ ಆಗ್ರಹ. ದ್ವಿಭಾಷಾ ಸೂತ್ರದಿಂದಲೇ ಕನ್ನಡ ಬೆಳೆಯುತ್ತದೆ ಎನ್ನಲು ಸಾಧ್ಯವಿಲ್ಲ. ತ್ರಿಭಾಷಾ ನೀತಿ ಕುರಿತು ದೀರ್ಘ ಚರ್ಚೆ ನಡೆಯಬೇಕಿತ್ತು ಎಂದರು.
ಸಿಎಂ ಸ್ಥಾನ ಕುರಿತು ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಎಲ್ಲರೂ ದೆಹಲಿಗೆ ಹೋಗುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಹಾಗೂ ಎಲ್ಲ ಸಚಿವರ ಮಕ್ಕಳು ನಮ್ಮಪ್ಪನೇ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಇಂದು ಕ್ಯಾಬಿನೆಟ್ ರಚನೆಯಾಗಿದೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿ ಜನರ ಪಾಲಿಗೆ ಸತ್ತಿದೆ. ಬಜೆಟ್‌ನಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ, ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಸರ್ಕಾರವೀಗ ತ್ರಿಶಂಕು ಸ್ಥಿತಿಯಲ್ಲಿದೆ ಎಂದರು.
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್ ಮುಖಂಡರು ಕಾಂಗ್ರೆಸ್ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ.
ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬರಲಿದೆ.
ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.
