ದೊಡ್ಡಬಳ್ಳಾಪುರ: ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಬೈಕ್ ಸವಾರ ಸಾವು
ದೊಡ್ಡಬಳ್ಳಾಪುರ ತಾಲೂಕಿನ ಹನುಮಂತಯ್ಯನ ಪಾಳ್ಯದಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಕೋಳಾಲ ವಾಸಿ ರಾಮಾಂಜಿನಯ್ಯ (45 ವರ್ಷ) ಎಂದು ಗುರುತಿಸಲಾಗಿದೆ.
ಮೃತ ರಾಮಾಂಜಿನಯ್ಯ ಸ್ವಗ್ರಾಮವಾದ ಹನುಮಂತಯ್ಯನ ಪಾಳ್ಯದಲ್ಲಿ ನಡೆದ ಜಾತ್ರೆಗೆಂದು ಬಂದಿದ್ದ ವೇಳೆ, ಬೈಕ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರು- ಕ್ಯಾಂಟರ್ ಮುಖಾಮುಖಿ ಡಿಕ್ಕಿ
ಮತ್ತೊಂದು ಪ್ರಕರಣದಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಓರ್ವ ಸಾವನಪ್ಪಿರುವ ಘಟನೆ ಕೋಡಿಪಾಳ್ಯ ಮತ್ತು ಮದುರೆ ನಡುವೆ ಸಂಭವಿಸಿದೆ.
ಮೃತನನ್ನು ಬೆಂಗಳೂರಿನ ಅಬ್ಬಿಗೆರೆ ನಿವಾಸಿ ಹನುಮಂತ (19 ವರ್ಷ) ಎಂದು ಗುರುತಿಸಲಾಗಿದೆ.
ಮದುರೆ ಕಡೆಯಿಂದ ತೆರಳಿದ ಕಾರು ಮತ್ತು ಕೋಡಿಪಾಳ್ಯ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ದುರ್ಘಟನೆ ಸಂಭವಿಸಿದೆ.
ಈ ವೇಳೆ ಗಂಭೀರವಾಗಿ ಗಾಯಗೊಂಡ ಹನುಮಂತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು, ಚಿಕ್ಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ