ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ ಶ್ರೇಣಿಯಲ್ಲಿನ ಚಿಕ್ಕರಾಯಪ್ಪನಹಳ್ಳಿ ಗೌಡನಕೆರೆಯಲ್ಲಿ ಈಜಲು ತೆರಳಿದ್ದ ಯುವಕ ಕೆರೆಯ ನೀರಿನಲ್ಲಿ ಮುಳುಗಿ ಎರಡು ದಿನಗಳ ನಂತರ ಇಂದು ಬೆಳಗ್ಗೆ (ಶುಕ್ರವಾರ) ಮೃತ ದೇಹ ಪತ್ತೆಯಾಗಿದೆ.
ದೊಡ್ಡಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಲಘುಮೇನಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ (21) ಬುಧವಾರ ಸ್ನೇಹಿತರೊಂದಿಗೆ ಈಜಲು ಕೆರೆಗೆ ಹೋಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಯಲ್ಲಿ ಹೆಚ್ಚಿನ ನೀರು ಇದ್ದು, ಯುವಕನ ಮೃತ ದೇಹ ಪತ್ತೆಯಾಗುವುದು ಕಷ್ಟವಾಗಿತ್ತು. ಗುರುವಾರ ಮದ್ಯಾಹ್ನದವರೆಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು ಯಾವುದೇ ಕುರುಹು ದೊರೆತಿಲ್ಲ. ಮಧ್ಯಾಹ್ನದ ನಂತರ ಎನ್ಡಿಆರ್ಎಫ್ ತಂಡ, ಮುಳುಗು ತಜ್ಞರನ್ನು ಕರೆಸಿ ಹುಡುಕಾಟ ನಡೆಸಿದರು ಸಹ ಮೃತ ದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಶುಕ್ರವಾರ ಮತ್ತಷ್ಟು ಜನ ಮುಳುಗು ತಜ್ಞರು ಹಾಗೂ ಹೆಚ್ಚಿನ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿ ಹುಡುಕಾಟ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು.
ಈ ಬೆನ್ನಲ್ಲೇ ಇಂದು ಬೆಳಗ್ಗೆ (ಶುಕ್ರವಾರ) ಕಾರ್ಯಾಚರಣೆ ಆರಂಭಿಸಿದ ಎನ್‌ಡಿಆರ್‌ಎಫ್ ತಂಡಕ್ಕೆ ಯುವಕ ಮುಳಗಿದ ಸ್ಥಳದಲ್ಲಿಯೇ ಶವ ಪತ್ತೆಯಾಗಿದೆ.
ಯುವಕನ ಶವ ಪತ್ತೆ ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.