ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೊಂಡಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು ಸರಿಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಸುದ್ದಿ ಹಂಚುವುದು ಕೆಲವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಹಳೆಯ ಘಟನೆಯನ್ನು ಇಂದು ನಡೆದ ಘಟನೆ ಎನ್ನುವ ರೀತಿ ಕೆಲವರು ಪೋಸ್ಟ್ ಮಾಡುತ್ತಾರೆ. ಕೆಲವರು ಹೊರ ದೇಶದಲ್ಲಿ ನಡೆದ ಘಟನೆಯ ಫೋಟೋ ಹಾಕಿ ನಮ್ಮಲ್ಲಿ ನಡೆದಿದೆ ಎಂದು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸಂದೇಶ ಹಾಕಿ ಜನರಿಗೆ ತಪ್ಪು ಮಾಹಿತಿ ನೀಡುತ್ತಾರೆ. ಹೀಗಾಗಿ ಕಾನೂನಿನಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಹೀಗಾಗಿ ತೇಜಸ್ವಿ ಸೂರ್ಯ ಮೇಲೆ ಎಫ್‌ಐಆರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್: ಹಾವೇರಿ ಜಿಲ್ಲೆಯ 2022 ರಲ್ಲಿ ನಡೆದ ರೈತರೊಬ್ಬ ಸಾವನ್ನು, ವಕ್ಫ್ ನೋಟೀಸ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುಳ್ಳು ಸುದ್ದಿಯ ವರದಿಯನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದಕ್ಕಾಗಿ ಹಾವೇರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ E Paper ಸಂಪಾದಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.