Daily story: ರಂಗಪ್ಪ ಎಂಬ ರೈತ ತನ್ನ ಮಗ ಶಂಕರನನ್ನು ಶಾಲೆಗೆ ಕಳುಹಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದ. ಅದರಂತೆ ಶಾಲೆಗೆ ಬೇಕಾದ ಎಲ್ಲ ಪುಸ್ತಕಗಳನ್ನು ಖರೀದಿಸಿ ಮೊದಲ ದಿನ ತಾನೇ ಶಾಲೆಗೆ ಹೋಗಿ ಮಗನಿಗೆ ಬಿಟ್ಟು ಬಂದ.
ಶಾಲೆಯಲ್ಲಿ ಹೊಸ ಗೆಳೆಯರು. ಅವರ ಕೀಟಲೆ, ಬೈಗುಳ, ಹೊಡೆದಾಟ ಮೇಲಾಗಿ ಶಿಕ್ಷಕರೆಂಬ ಭಯದಿಂದಲೇ ಶಂಕರ ತತ್ತರಿಸಿದ. ಅಂದು ಹೇಗೋ ಶಾಲೆಯಲ್ಲಿದ್ದು ಬಂದು ತನ್ನ ತಂದೆಯ ಹತ್ತಿರ ‘ಅಪ್ಪಯ್ಯಾ ನಾಳೆಯಿಂದ ನಾನು ಶಾಲೆಗೆ ಹೋಗುವುದಿಲ್ಲ. ಅಲ್ಲಿ ಗೆಳೆಯರು, ಹೊಡೆಯುತ್ತಾರೆ. ಬೈಯುತ್ತಾರೆ’ ಎಂದು ಹೇಳಿದ.
ರಂಗಪ್ಪನು ಮಗನಿಗೆ ‘ಹೊಸದಾಗಿ ಶಾಲೆಗೆ ಹೋಗಿದ್ದೀಯಾ, ಸ್ವಲ್ಪ ದಿನ ಮಗಾ, ಏನೂ ಆಗುವುದಿಲ್ಲ, ಮುಂದೆ ಅವರೇ ನಿನಗೆ ಮಿತ್ರರಾಗುತ್ತಾರೆ. ನೀನು ಧೈರ್ಯದಿಂದ ಇರು’ ಎಂದು ಹೇಳಿದ. ಆದರೆ ಶಂಕರನು ಕೇಳಲಿಲ್ಲ.
ಮರುದಿನ ಮಗನಿಗೆ ಊಟದ ಚೀಲ ಮತ್ತು ಪಾಟಿ ಚೀಲವನ್ನು ತೆಗೆದುಕೊಂಡು ಅವನಿಗೆ ಪ್ರಿಯವಾದ ಲಾಡು ಉಂಡಿಯನ್ನು ಕೊಡಿಸಿ ‘ಇವತ್ತು ನಾನು ನಿನಗೆ ಶಾಲೆಗೆ ಬಿಡುತ್ತೇನೆ ನಡಿ’ ಎಂದ. ರಸ್ತೆಯಲ್ಲಿ ಶಂಕರನು ‘ನಾನು ಒಲ್ಲೆ ಶಾಲೆಗೆ…’ ಎಂದು -ಅಳುತ್ತಿದ್ದ..
ಶಾಲೆಯ ಹತ್ತಿರದಲ್ಲಿ ಒಂದು ಸಣ್ಣ ಗುಡ್ಡ ಇತ್ತು ರಂಗಪ್ಪನು ಶಂಕರನಿಗೆ ಅಲ್ಲಿ ಕರೆದುಕೊಂಡು ಹೋಗಿ ಆ ಗುಡ್ಡದ ಮೇಲೆ ಹತ್ತಿದ, ತಂಪಾದ ಗಾಳಿ ಜೋರಾಗಿ ಬೀಸುತ್ತಿತ್ತು. ‘ನೋಡು ಈ ಗಾಳಿಯನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ಕಣ್ಣಿಗೆ ಕಾಣುವುದಿಲ್ಲ. ಆದರೂ ಈ ದೊಡ್ಡ ದೊಡ್ಡ ಕಲ್ಲುಗಳಿಂದ ಕೂಡಿದ ಗುಡ್ಡವನ್ನು ಎದುರಿಸಿ ಮೈಯೊಡ್ಡಿ ಮುಂದೆ ಹೋಗುತ್ತಿದೆ.
ಅದೇ ರೀತಿ ಮೊದ ಮೊದಲು ನೀನು ಶಾಲೆಗೆ ಹೊರಟಾಗ ಇಂತಹ ಅಡ್ಡಿ ಆತಂಕಗಳು ಸಾಕಷ್ಟು ಬರುತ್ತವೆ. ಅದು ಯಾವುದನ್ನೂ ಲಕ್ಷಿಸದೆ ಧೈರ್ಯದಿಂದ ಮುಂದೆ ಹೋಗು, ಭಯ, ಸಂಕೋಚ, ಅಂಜಿಕೆ ಇಲ್ಲದೆ ಮುಂದೆ ಸಾಗಿದರೆ ಗೆಲವು ನಿನ್ನದೆ…’ ಎಂದು ರಂಗಪ್ಪನು ಹೇಳಿದಾಗ, ಶಂಕರನಿಗೆ ಧೈರ್ಯ ಮೂಡಿಬಂತು.
ಅದೇ ಕ್ಷಣ ನಿರ್ಧಾರ ಮಾಡಿದ ಶಂಕರನು ‘ಅಪ್ಪಯ್ಯ ನೀನು ಮನೆಗೆ ಹೋಗು, ನಾನು ಶಾಲೆಗೆ ಹೋಗುತ್ತೇನೆ’ ಎಂದು ಹೇಳಿ ಶಾಲೆಗೆ ಹೋದನು.
ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)