ನಾಗಮಂಗಲ (Video): ವೃದ್ಧೆಯೊಬ್ಬರು ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ, ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಕರೆದ ಸಂದರ್ಭದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ.
ಮರಿಯಮ್ಮ ಎಂಬಾಕೆ ತನ್ನ ಮಗ ಪೂಜಾರಿ ಕೃಷ್ಣ ಹಣಕ್ಕಾಗಿ ಪೀಡಿಸಿದ್ದಾನೆ. ನನಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾನೆ. ಹಣ ಕೊಟಿಲ್ಲ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮರಿಯಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆಯ ಹಿನ್ನೆಲೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಬಿ ಬಡಾವಣೆಯ ನ್ಯಾಯಾಲಯದ ಮುಂದಿರುವ ಇರುವ ಜ್ಯೂಸ್ ಅಂಗಡಿಯ ಮುಂದೆ ನಿಂತಿದ್ದ ಕೃಷ್ಣನನ್ನು ಗಮನಿಸಿ ವಿಚಾರಣೆಗೆ ಕರೆದಿದ್ದಾರೆ. ಆರೋಪಿಯು ಬರಲು ಒಪ್ಪದಿದ್ದಾಗ ಬಲವಂತವಾಗಿ ಆಟೊ ಹತ್ತಿಸಲು ಎ.ಎಸ್.ಐ ಮುಂದಾದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ನಂತರ ಆರೋಪಿ ಮತ್ತು ಪೊಲೀಸ್ ಅಧಿಕಾರಿಯು ಪರಸ್ಪರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ.
ಈ ಸಂದರ್ಭದಲ್ಲಿ ಕೃಷ್ಣ ಎಎಸ್‌ಐ ರಾಜುರನ್ನು ಅವಾಚ ಶಬ್ದದಿಂದ ನಿಂದಿಸಿ ತಳ್ಳಿ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ.
ನಂತರ ಇಬ್ಬರು ಕೊರಳಪಟ್ಟಿ ಹಿಡಿದು ಹೊಡೆದಾಟ ನಡೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕಾರ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಿ ಎಳೆದಾಡಿದ ಪೂಜಾರಿ ಕೃಷ್ಣನಿಗೆ ತರಾಟೆ ತೆಗೆದುಕೊಂಡು ಜಗಳವನ್ನು ಬಿಡಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಬಳಿಕ ಪೂಜಾರಿ ಕೃಷ್ಣನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.