Daily story: ಲಕ್ಷ್ಮಣ, ಲಕ್ಷ್ಮಣರೇಖೆ ಎಳೆದದ್ದು ಸೀತೆಗಾಗಿ. ಅಂದರೆ ಗಂಡು ಹೆಣ್ಣಿಗೆ, ಅಪಾಯ ಅರಿತು ಎಳೆದ ರೇಖೆಯದು. ಅಂದಿನಿಂದ ಇಂದಿನವರೆಗೂ ಹೆಣ್ಣು ಸುಲಭದಲ್ಲಿ ಶಿಕಾರಿಗೆ ಬಲಿಯಾಗುತ್ತ ಬಂದಳು ಎಂದರೆ ತಪ್ಪಾಗಲಾರದು.
ಹೆಣ್ಣು ಅರಿತೋ, ಅರಿಯದೆಯೋ ಲಕ್ಷ್ಮಣ ರೇಖೆ ದಾಟಿದಾಗ ಬೆಲೆ ತೆತ್ತಿದ್ದು ಅವಳೇ, ಸೀತೆ ಹಲವು ವರ್ಷಗಳ ಕಾಲ ಲಂಕೆಯ ಅಶೋಕ ವನದಲ್ಲಿ ಶೋಕ ತಪ್ತಳಾಗಿ ಕುಳಿತುಕೊಳ್ಳಬೇಕಾಗಿ ಬಂತು.
ಕಡೆಗೂ ರಾಮ, ಸೀತೆಯರು ಒಂದಾದಾಗ ಒಟ್ಟಿಗೆ ಇದ್ದದ್ದಾದರೂ ಎಷ್ಟು ದಿನ? ಮತ್ತೆ ಪರಿತ್ಯಕ್ತೆಯಾಗಿ ಕಾಡಿನಲ್ಲಿ ಒಂಟಿಜೀವನ ಮಕ್ಕಳೊಂದಿಗೆ, ತನ್ನ ಪರಿಶುದ್ಧತೆಯನ್ನು ಪರೀಕ್ಷಿಸಲು ಅಗ್ನಿ ಪ್ರವೇಶ, ಇವೆಲ್ಲವೂ ಸೀತೆ ಲಕ್ಷ್ಮಣ ರೇಖೆ ದಾಟಿದ ಪರಿಣಾಮವೆ.
ಸೀತೆಗೆ ಚಿನ್ನದ ಜಿಂಕೆಯನ್ನು ನೋಡುತ್ತಲೇ ಅದು ತನಗೆ ಬೇಕೆಂಬ ಆಸೆ ಬಂದು ಲಕ್ಷ್ಮಣನನ್ನು ಒತ್ತಾಯಿಸದಿದ್ದರೆ ಲಕ್ಷ್ಮಣನಿಗೆ ರೇಖೆ ಎಳೆಯುವ ಸಂದರ್ಭ ಬರುತ್ತಿರಲಿಲ್ಲ, ಇನ್ನೂ ಹಿಂದಕ್ಕೆ ಹೋದರೆ ಶೂರ್ಪನಖೀಗೆ ರಾಮ, ಲಕ್ಷ್ಮಣರ ಮೇಲೆ ಆಸೆ, ಮೋಹ ಬಾರದಿದ್ದರೆ ಶೂರ್ಪನಖೀ ಮೂಗು ಕಳೆದುಕೊಳ್ಳುತ್ತಿರಲಿಲ್ಲ, ಕೈಕೇಯಿಗೆ ತನ್ನ ಮಗ ಭರತನ ಮೇಲಿನ ಅತಿಯಾದ ಮೋಹವೇ ರಾಮನನ್ನು ಕಾಡಿಗೆ ಅಟ್ಟುವಂತೆ ಮಾಡಿತು.
ಇದರರ್ಥ ಎಷ್ಟೋ ಸಲ ಆಸೆ-ಮೋಹಗಳು ಲಕ್ಷ್ಮಣ ರೇಖೆ ದಾಟಿದಾಗ ರಾಮಾಯಣ, ಮಹಾಭಾರತಕ್ಕೆ ಕಾರಣವಾಯಿತೆನ್ನಬಹುದು.
ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)