ಬೆಂಗಳೂರು: ಕೊಡಿಗೇಹಳ್ಳಿಯ ಸ್ಥಳೀಯರು ಹಾಗೂ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ (Jagadish) ವಿರುದ್ಧ ಸ್ಥಳೀಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಜಗದೀಶ್, ಪುತ್ರ ಹಾಗೂ ಇಬ್ಬರು ಗನ್ಮ್ಯಾನ್ಗಳನ್ನ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಗಲಾಟೆಯಲ್ಲಿ ಜಗದೀಶ್ ಅವರು ಗಾಯಗೊಂಡಿದ್ದರು. ಅವರ ಮೂಗಿನಿಂದ ರಕ್ತ ಬರುತ್ತಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿದ್ದರು.
ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ ಜಗದೀಶ್ ಗಾಯಗೊಂಡಿದ್ದಕ್ಕೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಜಗದೀಶ್, ಅವರ ಮಗ ಆರ್ಯನ್ ಹಾಗೂ ಇಬ್ಬರು ಗನ್ ಮ್ಯಾನ್ಗಳನ್ನು ಬಂಧನ ಮಾಡಿದ್ದಾರೆ.
ಇಂದು 11 ಗಂಟೆಯ ಬಳಿಕ ಜಗದೀಶ್ರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ.
ಜಗದೀಶ್ ವಿರುದ್ಧ ಸ್ಥಳೀಯರು ದೂರು ನೀಡಿದ್ದಾರೆ. ಇದಕ್ಕೆ ಜಗದೀಶ್ ಕೂಡ ಪ್ರತಿ ದೂರು ದಾಖಲು ಮಾಡಿದ್ದಾರೆ.
ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಹಾಗೂ ಸ್ಥಳೀಯರ ಮಧ್ಯೆ ಹೊಡೆದಾಟ ನಡೆದಿದೆ.
ಯಾವುದೇ ಅನುಮತಿ ಪಡೆಯದೇ ರಸ್ತೆಗೆ ಅಡ್ಡವಾಗಿ ಪೆಂಡಾಲ್ ಹಾಕಲಾಗಿದೆ ಎಂದು ವಕೀಲ ಜಗದೀಶ್ ಬಿಬಿಎಂಪಿ ಹಾಗೂ ಪೊಲೀಸರಿಗೆ ಎರಡು ದಿನದ ಹಿಂದೆ ದೂರು ನೀಡಿದ್ದರು. ಇದಕ್ಕೆ ಕೋಪಗೊಂಡಿದ್ದ ಸ್ಥಳೀಯರು ವಕೀಲ ಜಗದೀಶ್ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದರು.
ಈ ಬಗ್ಗೆ ಜನವರಿ 23 ರಂದು ಕೊಡಿಗೆಹಳ್ಳಿ ಠಾಣೆಯಲ್ಲಿ ನಾಗರಾಜ್ ಎನ್ನುವವರ ವಿರುದ್ಧ ಜಗದೀಶ್ ದೂರು ನೀಡಿದ್ರೆ, ಜಗದೀಶ್ ವಿರುದ್ಧವೂ ಪ್ರತಿದೂರು ದಾಖಲಾಗಿದೆ.
ದರ್ಶನ್ ಅಭಿಮಾನಿಗಳನ್ನು ಕೆರಳಿಸಿದ್ದ ಜಗದೀಶ್
ಗುರುವಾರ ಗಲಾಟೆ ಪ್ರಕರಣದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದ ಜಗದೀಶ್, ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದೆಲ್ಲ ಮಾತನಾಡಿ ಅಭಿಮಾನಿಗಳಿಗೆ ಸವಾಲೆಸೆದಿದ್ದರು.
ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ.
ಪೊಲೀಸರ ಮುಂದೆಯೇ ಕೆರಳಿರುವ ಜನ ಜಗದೀಶ್, ಗನ್ ಮೆನ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಈ ಸಂದರ್ಭದ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.