ದೊಡ್ಡಬಳ್ಳಾಪುರ (Doddaballapura): ಕಳ್ಳತನದ ಆರೋಪದ ಪ್ರಕರಣದಲ್ಲಿ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನರಸಿಂಹರಾಜು (44 ವರ್ಷ) ಎಂದು ಗುರುತಿಸಲಾಗಿದೆ.
ಕಳೆದ 23 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೀಮೆ ಹಸು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈತನ ಬಂಧನವಾಗಿದೆ.
ನರಸಿಂಹರಾಜು ಅವರ ಪ್ರಕರಣ, ಕೃತ್ಯ ನಡೆದ ವ್ಯಾಪ್ತಿಯ ದೊಡ್ಡಬಳ್ಳಾಪುರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ನಂತರ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೆ ಉಳಿದಿದ್ದ ಎನ್ನಲಾಗಿದೆ.
ಈ ಪ್ರಕರಣವನ್ನು ಬೆಂಗಳೂರಿನ ಪೊಲೀಸರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು, ಎಳ್ಳುಪುರ ಗ್ರಾಮದಲ್ಲಿ ವಾಸವಾಗಿದ್ದ ನರಸಿಂಹರಾಜುನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಿಡಲಾಗಿದೆ.
ಪ್ರಕರಣ ಮರೆತನೇ ಆರೋಪಿ..?
ಸುಮಾರು 23 ವರ್ಷಗಳ ಹಿಂದೆ ನಡೆದ ಪ್ರಕರಣ ಮರೆತ ಕಾರಣ ಈ ಬಂಧವಾಗಿರಬಹುದು ಎಂದು ಶಂಕಿಸಲಾಗಿದೆ.
ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗದೆ ದೊಡ್ಡಬಳ್ಳಾಪುರ ಸಮೀಪದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ಹೆಂಡತಿ, ಮಕ್ಕಳೊಂದಿಗೆ ನೆಮ್ಮದಿಯಿಂದ ಇದ್ದ ವ್ಯಕ್ತಿಗೆ ಹಳೆಯ ಪ್ರಕರಣ ಮರೆತು ನ್ಯಾಯಾಲಯಕ್ಕೆ ಹಾಜರಾಗದೆ ಉಳಿದಿದ್ದು, ಈ ಸಂಕಷ್ಟವನ್ನು ತಂದಿದೆ ಎನ್ನಲಾಗುತ್ತಿದೆ.