ಗೌರಿಬಿದನೂರು: ಮೈಕ್ರೋ ಫೈನಾನ್ಸ್ (micro finance) ಕಾಟ ತಾಳಲಾರದೆ ವೃದ್ಧನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ನಡೆದಿದೆ.
ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಪದೇ ಪದೇ ಮನವಿ ಮಾಡಿದರು, ಕಿರುಕುಳ ತಾಳಲಾರದೆ ಗ್ರಾಪಂ ಸದಸ್ಯ ಎನ್ಆರ್ ನರಸಿಂಹಯ್ಯ (58 ವರ್ಷ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ಫೈನಾನ್ಸ್ ಕಂಪನಿಗಳಲ್ಲಿ ಹಣ ಪಡೆದಿದ್ದ ನರಸಿಂಹಯ್ಯ, ಕಂತುಗಳ ರೂಪದಲ್ಲಿ ಹಣ ಕಟ್ಟುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಬಂದು ಫೈನಾನ್ಸ್ ನವರು ಕಿರುಕುಳ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ನರಸಿಂಹಯ್ಯ, ಫೈನಾನ್ಸ್ ಕಿರುಕುಳಕ್ಕೆ ಆಟೋ ಸಹ ಎರಡು ಮೂರು ಬಾರಿ ಒತ್ತೆ ಇಟ್ಟು ಹಣ ಕಟ್ಟಿದ್ದಾರಂತೆ.
ಇಂದು ಫೈನಾನ್ಸ್ ಗಳಿಗೆ ಹಣ ಕಟ್ಟಲು ಹಣ ಇಲ್ಲದ ಕಾರಣ, ಮನೆಯಲ್ಲಿ ಸಾಲ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ ಇಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರ ಬಂದಿರುತ್ತಾರೆ.
ಎಷ್ಟೊತ್ತಾದರೂ ಬರದ ಪತಿಯನ್ನು ಊರೆಲ್ಲಾ ಹುಡುಕಿ, ನಾಗಸಂದ್ರ ದಿಂದ ಇಡುಗೂರು ಕಡೆಗೆ ಹೋಗುವ ರಸ್ತೆಯಲ್ಲಿ ಇವರ ಹೊಲ ಇದ್ದು, ಹುಡುಕುತ್ತಾ ಹೊಲದ ಕಡೆಗೆ ಬಂದ ಪತ್ನಿ ಪ್ರಭಾವತಿ ಕಣ್ಣಿಗೆ ಗಂಡ ಮರಕ್ಕೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ.
ಕೂಡಲೇ ಮೃತರ ಸಹೋದರರಿಗೆ ಮಾಹಿತಿ ನೀಡಿದ್ದು, ಅವರು ಕೂಡ ಸ್ಥಳಕ್ಕೆ ಬಂದು ನೋಡಿದಾಗ ಅವರ ಅಣ್ಣ ನೇಣಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನೆಯನ್ನು ತಿಳಿದು ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.