ಬೆಂಗಳೂರು: ಮದ್ಯಪಾನದ ಮಾಡಲು (Alcohol addiction) ಹಣ ಕೊಡಲಿಲ್ಲವೆಂದು ತಾಯಿಗೆ ಚಾಕು ಇರಿದಿದ್ದ ಮಗನನ್ನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯಲಕ್ಷ್ಮಿ ಎಂಬುವವರಿಗೆ ಚಾಕು ಇರಿದಿದ್ದ ಪಾಪಿ ಪುತ್ರ ರಾಹುಲ್‌ನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯಪಾನದ ಗೀಳಿಗೆ ಬಿದ್ದಿದ್ದ ರಾಹುಲ್, ತಾಯಿ ಜಯಲಕ್ಷ್ಮಿ ಬಳಿ ಆಗಾಗ ಹಣಕ್ಕಾಗಿ ಪೀಡಿಸುತ್ತಿದ್ದ.ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜಯಲಕ್ಷ್ಮಿ, ಮಗನ ಖರ್ಚಿಗೆ ಹಣ ಕೊಡುತ್ತಿದ್ದರು. ಆದರೆ ಕಳೆದ ಎರಡು ಮೂರು ದಿನಗಳಿಂದ ಮಗನ ಖರ್ಚಿಗೆ ಹಣ ಕೊಡಲು ಜಯಲಕ್ಷ್ಮಿ ಅವರಿಗೆ ಸಾಧ್ಯವಾಗಿರಲಿಲ್ಲ.
ಹಣ ಇಲ್ಲ ಎಂದಿದ್ದಕ್ಕೆ ತಾಯಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಕೊಡುವಂತೆ ರಾಹುಲ್ ಪೀಡಿಸಲಾರಂಭಿಸಿದ್ದನಂತೆ, ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಹಣದ ವಿಚಾರವಾಗಿ ತಾಯಿ ಮಗನ ನಡುವೆ ಗಲಾಟೆ ನಡೆದಿದೆ.
ಆ ಸಂದರ್ಭದಲ್ಲಿ ರಾಹುಲ್ ತಾಯಿ ಜಯಲಕ್ಷ್ಮಿ ಅವರಿಗೆ ಚಾಕು ಇರಿದು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯಲಕ್ಷ್ಮಿ ಅವರನ್ನ ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆ ಸಂಬಂಧ ಜಯಲಕ್ಷ್ಮಿ ಅವರ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿ ರಾಹುಲ್‌ನನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.