ವಿಜಯಪುರ: ಬಿಜೆಪಿ ಬಣ ಬಡಿದಾಟದ ಕುರಿತು ರೋಚಕ ವರದಿ ಮಾಡುತ್ತಿದ್ದ ಖಾಸಗಿ ಸುದ್ದಿವಾಹಿನಿಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಮೌನ ತೀವ್ರ ನಿರಾಸೆಯನ್ನುಂಟು ಮಾಡಿದೆ.
ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಪಟ್ಟು ಹಿಡಿದಿರುವ ಯತ್ನಾಳ್ ಬಣದ ಕುರಿತು ರೋಚಕ ವರದಿ ಮಾಡುವ ಮೂಲಕ ಭರ್ಜರಿ ಟಿಆರ್ಪಿ ಪಡೆಯುತ್ತಿದ್ದ ಖಾಸಗಿ ಚಾನಲ್ ಗಳಿಗೆ ಯತ್ನಾಳ್ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ತಳಮಳವನ್ನು ಉಂಟುಮಾಡುತ್ತಿದೆ.
ಇದಕ್ಕೆ ಕಾರಣ ಕೆಲ ವಿಜಯೇಂದ್ರ ಪರ ವಿರುವ ಕೆಲ ಖಾಸಗಿ ಸುದ್ದಿವಾಹಿನಿಗಳು, ಬಿಜೆಪಿಗೆ ಯಡಿಯೂರಪ್ಪ, ವಿಜಯೇಂದ್ರ ಅನಿವಾರ್ಯ.. ಅವರಿಲ್ಲದಿದ್ದರೆ ಬಿಜೆಪಿಯೇ ಇಲ್ಲ ಎಂಬಂತೆ, ಯತ್ನಾಳ್ ಬಣದ ಕುರಿತು ನಕಾರಾತ್ಮಕ ವರದಿ ಪ್ರಸಾರ ಮಾಡಿವೆ ಎಂಬುದು ಆರೋಪ.
ಅಲ್ಲದೆ ಇತ್ತೀಚಿಗೆ ಯತ್ನಾಳ್ಗೆ ಶಿಸ್ತು ಸಮಿತಿ ನೋಟಿಸ್ ನೀಡಿರುವುದು, ಯತ್ನಾಳ್ ಗೆ ತಲುಪುವ ಮುನ್ಮವೇ ಚಾನಲ್‌ಗಳಿಗೆ ಸೋರಿಕೆಯಾಗಿದ್ದು, ಈ ಕುರಿತು ಊಹಾಪೋಹಗಳ ವರದಿ ಪ್ರಸಾರ ಮಾಡಿದ್ದು ಯತ್ನಾಳ್ ಅವರನ್ನು ಕೆರಳಿಸಿದೆ.
ಈ ಹಿನ್ನೆಲೆಯಲ್ಲಿ ಮೊನ್ನೆ ಬೆಂಗಳೂರಿನ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ನಡೆದ ಸಭೆಯ ವೇಳೆ ಖಾಸಗಿ ಸುದ್ದಿವಾಹಿನಿ ಸುದ್ದಿಗಾರರೊಂದಿಗೆ ಮಾತಿನಚಕಮಕಿ ನಡೆಸಿದ ಯತ್ನಾಳ್, ಸಾಕ್ಷಿ ಇದೆಯಾ..? ಬಾಯಿಗೆ ಬಂದಂತೆ ಬೇಕಾಬಿಟ್ಟಿ ವರದಿ ಮಾಡ್ತಿರಾ..? ಮಾನಮರ್ಯಾದೆ ಇಲ್ವಾ ಎಂಬಂತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಮುಂದುವರಿದು ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಏರ್ಪಡಿಸಲಾದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಲು ಬಂದ ಯತ್ನಾಳ್ ಅವರ ಪ್ರತಿಕ್ರಿಯೆ ಪಡೆಯಲು ಖಾಸಗಿ ಚಾನಲ್ ವರದಿಗಾರರು ಯತ್ನಿಸಿದರು.
ಆದರೆ ಪ್ರತಿಕ್ರಿಯೆ ನೀಡದ ಯತ್ನಾಳ್, ಇಲ್ಯಾಕ್ ಬಂದ್ರಿ.. ಎಲ್ಲಾ ವಿಜಯೇಂದ್ರ ಬಳಿ ಕೇಳ್ರಿ ಓಗ್ರಿ.. ನನ್ನೇನ್ ಕೇಳ್ತೀರಿ, ನಿಮಗೆ ಅವರೆ ಅಲ್ವಾ ಬೇಕಿರೋದು ಎಂಬಂತೆ ತೀಕ್ಷ್ಣ ಉತ್ತರ ನೀಡಿ ತೆರಳಿದರು.