ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ (DK Suresh) ಪತ್ನಿ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ದೊಡ್ಡಾಲಹಳ್ಳಿ ಗ್ರಾಮದ ನಿವಾಸಿ ಪವಿತ್ರ ಬಂಧಿತ ಮಹಿಳೆಯಾಗಿದ್ದಾರೆ.
ಮೈಸೂರಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಪವಿತ್ರ ತನ್ನ ಪತಿಯಿಂದ ವಿಚ್ಛೇದಿತರು ಎನ್ನಲಾಗಿದೆ.
ಅಕ್ಕಪಕ್ಕದ ಮನೆಯವರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಪವಿತ್ರಾ ಡಿಕೆ ಸುರೇಶ್ ಹೆಸರು ಹೇಳಿದರು ಯಾರೂ ತನ್ನ ತಂಟೆಗೆ ಬರುವುದಿಲ್ಲ ಎಂದು ಈ ರೀತಿ ಮಾಡಿದೆ ಎಂದು ವಿಚಾರಣೆಯ ವೇಳೆ ಹೇಳಿಕೊಂಡಿದ್ದಾಳೆಂದು ವರದಿಯಾಗಿದೆ.
ಡಿಕೆ ಸುರೇಶ್ ತನ್ನ ಪತಿಯೆಂದು ಈಕೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಂಧಿತ ಪವಿತ್ರ, ಏಪ್ರಿಲ್ 8 ರಂದು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿ, ನಾನು ಮೊದಲು ಡಿಕೆ ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ.
ಯಾಕೆಂದರೆ ಅವರು ಮೂರು ಬಾರಿ ಎಂಪಿ ಆಗಿ ಯಾರೂ ಮಾಡಲು ಆಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನಾನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ.
ನಾನು ಹಲವು ಸಭೆ ಸಮಾರಂಭಗಳಿಗೆ ಹೋಗುತ್ತಿರುತ್ತೇನೆ. ಆದರೆ ನಾನು ಸರಳವಾಗಿ ಹೋಗುವುದರಿಂದ ಎಲ್ಲರೂ ನನ್ನನ್ನು ಪ್ರಶ್ನೆ ಮಾಡುತ್ತಾರೆ. ನೀವು ಡಿಕೆ ಸುರೇಶ್ ಅವರ ಪತ್ನಿ ಅಲ್ಲವೇ, ಏಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ ಎಂದು ಕೇಳುತ್ತಾರೆ. ಜನರಿಗೆ ಸ್ಟೇಟಸ್ ಬೇಕು. ಹಾಗಾಗಿ ನಾನು ರಾಯಲ್ ಆಗಿ ಇರಲು ಬಯಸುತ್ತೇನೆ ಎಂದು ವಿಡಿಯೋದಲ್ಲಿ ಆಕೆ ಹೇಳಿಕೊಂಡಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಡಿಕೆ ಸುರೇಶ್ ಅವರ ವಕೀಲರಾದ ಪ್ರದೀಪ್ ಎಂಬುವವರು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಹಿಳೆ ಡಿಕೆ ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾಳೆ. ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)