ದೊಡ್ಡಬಳ್ಳಾಪುರ: ಮೇ.25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ (JDS) ಬೆಂಬಲಿತ ಅಭ್ಯರ್ಥಿ ಹುಸ್ಕೂರು ಆನಂದ್ ಅವರಿಗೆ ನಿರೀಕ್ಷಿಸಿದಂತೆ ಕಾಂಗ್ರೆಸ್ (Congress) ಬೆಂಬಲ ಘೋಷಿಸಿದೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ (G.Lakshmipathi) ಅವರು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹುಸ್ಕೂರು ಆನಂದ್ ಅವರಿಗೆ ಯಾವುದೇ ಷರತ್ತುಗಳಿಲ್ಲದೆ ಬಾಹ್ಯ ಬೆಂಬಲ ನೀಡುತ್ತಿರುವುದಾಗಿ ಹೇಳಿದರು.
ಅಂದು ನಾವು ಮಾಡಿದ ಆ ಮೂರು ತಪ್ಪುಗಳಿಂದ ಇಂದು ನೋವು ಅನುಭವಿಸುತ್ತಿದ್ದೇವೆ. ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಸೇರ್ಪಡೆಗೊಂಡ ಬಿ.ಸಿ ಆನಂದ್ ಗೆ ಬಮೂಲ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು, ಮುಖಂಡರ ಒಮ್ಮತದ ಮೇರೆಗೆ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ.ಆನಂದ್ ಅವರಿಗೆ ಬಾಹ್ಯ ಬೆಂಬಲ ನೀಡಲಾಗುತ್ತಿದೆ.
ಬಿ.ಸಿ.ಆನಂದ್ ನಮ್ಮ ಪಕ್ಷದ ಸಹಕಾರದಿಂದ ಹಲವು ಅಧಿಕಾರಗಳನ್ನು ಅನುಭವಿಸಿ, ಒಂದು ಹಂತಕ್ಕೆ ಬೆಳೆದು ನಿಂತ ಮೇಲೆ ವೆಂಕಟರಮಣಯ್ಯ, ಪಕ್ಷ ನೀಡಿದ ಸಹಕಾರವನ್ನು ಮರೆತು, ದ್ರೋಹ ಮಾಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಬುದ್ದಿ ಕಲಿಸುವ ಕಾಲ ಬಂದಿದೆ.
ನಮ್ಮ ಪಕ್ಷದಿಂದ ಬಮೂಲ್ ಚುನಾವಣೆಗೆ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಆದರೆ, ಅವರ ನಾಮಪತ್ರಗಳನ್ನು ವಾಪಸ್ ಪಡೆಯುವಂತೆ ಮಾಡಿ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಅವರಿಗೆ ಬಾಹ್ಯ ಬೆಂಬಲ ಸೂಚಿಸಿದ್ದೇವೆ ಎಂದರು.
ನಮಗೆ ಅಧಿಕೃತವಾಗಿ ಜೆಡಿಎಸ್ ನಿಂದ ಬೆಂಬಲ ಬೇಡಿಕೆ ಇಟ್ಟಿದ್ದರು, ಅಲ್ಲದೆ ಜೆಡಿಎಸ್ ಪಕ್ಷದಿಂದ ಬೆಂಬಲಿಸುವಂತೆ ಪತ್ರ ನೀಡಿದ್ದರು, ನಾವು ಈ ಕುರಿತು ಹೈಕಮಾಂಡ್ ಗಮನಕ್ಕೆ ತಂದು, ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರ ಜತೆ ಸಭೆ ನಡೆಸಿ, ಚರ್ಚೆ ಮಾಡಿ, ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ.
ನಾವು ಯಾವ ಬೇಡಿಕೆ ಇಡದೇ, ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಅವರಿಗೆ ಬಾಹ್ಯ ಬೆಂಬಲ ಸೂಚಿಸಿದ್ದೇವೆ. ತಾಲೂಕಿನ ರೈತರ ಅಭಿವೃದ್ಧಿಗಾಗಿ ಎಲ್ಲರು ಸಹಕರಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ (T Venkataramanaiah) ಮಾತನಾಡಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವ ವಿಚಾರವಾಗಿ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಪಕ್ಷದ ವರಿಷ್ಠರು, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆಹೆಚ್ ಮುನಿಯಪ್ಪ ಒಳಗೊಂಡಂತೆ ಹಲವು ಹಿರಿಯ ಪ್ರಮುಖರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ.
ಕ್ರಮ ಸಂಖ್ಯೆ 2 ಹಣ್ಣಿನ ಬುಟ್ಟಿ ಗುರುತು ಪಡೆದಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ಅವರಿಗೆ ತಾಲೂಕಿನ ರೈತರು, ಹಾಲು ಉತ್ಪಾದಕರು, ನಿರ್ದೇಶಕರು, ಅಧ್ಯಕ್ಷರು ಬೆಂಬಲ ನೀಡಿ, ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಹಿಂದೆ ದೊಡ್ಡಬಳ್ಳಾಪುರದಲ್ಲಿ ಟೆಟ್ರಾ ಪ್ಯಾಕೇಟ್ ತಯಾರಿಕಾ ಘಟಕ ಸ್ಥಾಪನೆಗೆ ಚಿಂತನೆ ನಡೆಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ, ಮುಂದಿನ ದಿನಗಳಲ್ಲಿ ನಮ್ಮದೇ ಪಕ್ಷದ ಆಡಳಿಮಂಡಳಿ ಬರುತ್ತೆ, ನಮ್ಮದೇ ಪಕ್ಷದ ಕೆಎಂಎಫ್ ಆಡಳಿತ ಬರುತ್ತೆ. ತಾಲೂಕಿನ ಮುಖಂಡರು ತೆರಳಿ ಮನವೊಲಿಸಿ ಟೆಟ್ರಾಪ್ಯಾಕೆಟ್ ತಯಾರಿಕಾ ಘಟಕ ಸ್ಥಾಪನೆ ಮಾಡಲು ಕೋರುತ್ತೇವೆ. ಇದರಿಂದ ತಾಲೂಕಿನ ಜನರಿಗೆ ಉದ್ಯೋಗ ದೊರಕಲಿದೆ. ಈ ನಿಟ್ಟಿನಲ್ಲಿ ಡೈರಿ ಅಧ್ಯಕ್ಷರು ಜೆಡಿಎಸ್ -ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಬೇಕೆಂದು ವೆಂಕಟರಮಣಯ್ಯ ಕೋರಿದರು.
ಇನ್ನೂ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಕಾರಣ ಎಲ್ಲರೂ ನನ್ನ ಮಿತ್ರರಾಗಿದ್ದಾರೆ. ಈಗ ಜೆಡಿಎಸ್ ನಲ್ಲಿರುವೆ. ಲಕ್ಷ್ಮೀಪತಿ ಅವರು ಹೇಳಿದಂತೆ ಬಿಸಿ ಆನಂದ್ ಅವರು ಕಾಂಗ್ರೆಸ್ ಗೆ ಯಾವ ರೀತಿ ಮೋಸ ಮಾಡಿದ್ದಾರೆ ಎಂಬುದನ್ನು ಹೇಳಿದಂತೆ, ಜೆಡಿಎಸ್ ಗೆ ಏನ್ ಮಾಡಿದ್ದಾರೆ ಎಂಬುದನ್ನು ನಿನ್ನೆ ಜೆಡಿಎಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಾವು ಮುನೇಗೌಡರೊಂದಿಗೆ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರೊಂದಿಗೆ ಚರ್ಚೆ ನಡೆಸಿ, ನಿಮ್ಮ ಪಕ್ಷದಿಂದ ಅಭ್ಯರ್ಥಿ ಮಾಡಿ ನಾವು ಬೆಂಬಲ ನೀಡುತ್ತೇವೆ. ಇಲ್ಲ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಕೋರಲಾಗಿತ್ತು. ಈ ಕುರಿತು ಸಭೆ ನಡೆಸಿ ನೀವೆ ಸ್ಪರ್ಧೆ ಮಾಡಿ ಬೆಂಬಲ ಸೂಚಿಸುತ್ತೇವೆ ಎಂದ ಕಾಂಗ್ರೆಸ್ ಪಕ್ಷಕ್ಕದ ಮುಖಂಡರಿಗೆ ಧನ್ಯವಾದ.
ಈ ಚುನಾವಣೆ ಪಕ್ಷಾತೀತ ಚುನಾವಣೆ ಆಗಿರುವ ಕಾರಣ, ದೊಡ್ಡಬಳ್ಳಾಪುರ ತಾಲೂಕಿನ ಕಾಂಗ್ರೆಸ್, ಜೆಡಿಎಸ್ ಎಲ್ಲಾ ಡೈರಿ ಅಧ್ಯಕ್ಷರಿಗೆ ಮನವಿ ಏನೆಂದರೆ, ಪಕ್ಷಾತೀತ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಕಸಬಾ ಹೋಬಳಿ ಅಧ್ಯಕ್ಷ ಅಪ್ಪಿ ವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಬೈರೇಗೌಡ, ತೂಬಗೆರೆ ಹೋಬಳಿ ಬ್ಲಾಕ್ ಅಧ್ಯಕ್ಷ ರಂಗಪ್ಪ, ತಾಪಂ ಮಾಜಿ ಅಧ್ಯಕ್ಷರಾದ ಲಾವಣ್ಣ ನಾಗರಾಜ್, ನಾರಾಯಣಗೌಡ, ಕಂಟನಕುಂಟೆ ಕೃಷ್ಣಮೂರ್ತಿ ಮತ್ತಿತರರಿದ್ದರು.