ಕೊರಟಗೆರೆ: ಲಕ್ಷಾಂತರ ರೂ. ತೆರಿಗೆ ಹಣ ಪಾವತಿ ಮಾಡದ ಆರೋಪದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಶಿವಗಂಗ ಚಿತ್ರ ಮಂದಿರ (Shivaganga Movie theater), ಕಲ್ಯಾಣಮಂಟಪ (Wedding hall) ಹಾಗೂ ಹೋಟೆಲ್ ಗೆ (Hotel) ಬೀಗ ಹಾಕಿ, ಸೀಲ್ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಶ್ರೀ ಶಿವಗಂಗಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಗಳಿಗೆ ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದ್ದು, ಮಾಲೀಕರು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬೀಗಜಡಿದು, ಬಂದ್ ಮಾಡಿಸಿದ್ದಾರೆ.
ಅನೇಕ ಬಾರಿ ನೋಟಿಸ್ ನೀಡಿದರು ಸುಮಾರು 10ಲಕ್ಷ ರೂಗಳಷ್ಟು ತೆರಿಗೆ ಹಣವನ್ನು ಪಾವತಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ತೆರಿಗೆ ಹಣ ಪಾವತಿ ಮಾಡುವವರೆಗೂ ಚಿತ್ರಮಂದಿರ ಸೇರಿದಂತೆ ಕಲ್ಯಾಣ ಮಂಟಪ ಮತ್ತು ಹೋಟೆಲ್ ನಡೆಸದಂತೆ ಕ್ರಮಕೈಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಹೆಲ್ತ್ ಇನ್ಸ್ಪೆಕ್ಟರ್ ಮಹಮ್ಮದ್ ಹುಸೇನ್, ಆರ್‌ಐ ವೇಣುಗೋಪಾಲ್, ಶೈಲೇಂಧ್ರ, ವೆಂಕಟೇಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.
ನೋಟಿಸ್ ನೀಡಿಲ್ಲ
ಯಾವುದೇ ನೋಟಿಸ್ ನೀಡದೇ ಏಕಾಏಕಿ ಬಂದು ಪಟ್ಟಣ ಪಂಚಾಯಿತಿಯವರು ಬೀಗ ಹಾಕಿಸಿ ಬಾಗಿಲು ಮುಚ್ಚಿಸಿದ್ದು, ಚಿತ್ರಮಂದಿರಕ್ಕೆ ಇಂದು ಶುಕ್ರವಾರ ವಾದಕಾರಣ ಚಲನಚಿತ್ರವನ್ನು ಪ್ರರ್ದಶನ ಮಾಡಲಾಗಿತ್ತು, ಸಿನಿಮಾ ವೀಕ್ಷಣೆಗೆ ಬಂದ ಪ್ರೇಕ್ಷಕರು ವಾಪಾಸ್ಸು ಹೋಗಿದ್ದರಿಂದ ನಮಗೆ ನಷ್ಟ ಉಂಟಾಗಿದೆ ಎಂದು ಚಿತ್ರಮಂದಿರದ ವ್ಯವಸ್ಥಾಪಕ ಆರೋಪಿಸಿದ್ದಾರೆ.
ನೋಟಿಸ್ ನಲ್ಲಿರುವ ಪ್ರಕಾರ ಕಳೆದ 3 ದಿನಗಳ ಹಿಂದೆ ನೋಟಿಸ್ ನೀಡಬೇಕಿತ್ತು ಆದರೆ ಗುರುವಾರ ನೋಟಿಸ್ ಅಂಟಿಸಿ ಮರುದಿನ ಏಕಾಏಕಿ ಬಂದು ಗಡುವು ನೀಡದೆ ಬಾಗಿಲು ಮುಚ್ಚಿಸುವ ಕೆಲಸ ಮಾಡಿದ್ದಾರೆ.
ನಮಗೆ ಇಲ್ಲಿಯವರೆಗೂ ಯಾವುದೇ ನೋಟಿಸ್ ಬಂದಿಲ್ಲ, ಕೋರ್ಟ್ ನಲ್ಲಿ ತಡೆಯಾಜ್ಞೆ ಇರುವ ಕಾರಣ ಕಂದಾಯ ಕಟ್ಟಿಲ್ಲ. ಕೋರ್ಟ್ ಆದೇಶದ ಬಳಿಕ ಪಟ್ಟಣಪಂಚಾಯಿತಿಗೆ ಕಂದಾಯ ಪಾವತಿಸುತ್ತೇವೆ ಎಂದು ವ್ಯವಸ್ಥಾಪಕ ಅನಿಲ್ ಕುಮಾರ್ ಹೇಳಿದ್ದಾರೆ.
ಅನೇಕ ಬಾರಿ ನೋಟಿಸ್
ಅನೇಕ ಬಾರಿ ನೋಟಿಸ್ ನೀಡಿದರೂ ಸರಿಯಾದ ರೀತಿ ತೆರಿಗೆ ಹಣಪಾವತಿ ಮಾಡಿದೆ ಸುಮಾರು 10ಲಕ್ಷ ರೂಪಾಯಿಗಳಷ್ಟು ಹಣ ಬಾಕಿ ಉಳಿಸಿಕೊಂಡಿದ್ದರು.
ಕಳೆದ ಬಾರಿ ಮಾಲೀಕರ ಮನವಿಗೆ ಕಾಲಾವಕಾಶ ನೀಡಿದ್ದು, ಆದರೆ ಮತ್ತೊಮ್ಮೆ ನೋಟಿಸ್ ನೀಡಲು ಬಂದಾಗ ನಿರಾಕರಿಸಿರುತ್ತಾರೆ ಆದ ಕಾರಣಕ್ಕೆ ಬಾಗಿಲು ಹಾಕಿಸುವ ಕೆಲಸ ಮಾಡಿದ್ದೇವೆ.
ಪಟ್ಟಣದ ಅಂಗಡಿ, ಮಳಿಗೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಕಂದಾಯವನ್ನು ಪಾವತಿಸಲು ಈ ಮೂಲಕ ಮನವಿ ಮಾಡುತ್ತೇವೆ ಎಂದು ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಕೆ.ಎಸ್ ಉಮೇಶ್ ಹೇಳಿದ್ದಾರೆ.