ಬೆಂಗಳೂರು ದಕ್ಷಿಣ (ಕನಕಪುರ): “ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷನಾಗಿರುವುದಕ್ಕಿಂತ, ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ನನ್ನ ಸೇವೆ ಕೂಡ ಸದಾ ಇರುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಮೆಟ್ಟಿಲುಗಳ ಉದ್ಘಾಟನೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಬಾಳೆ ಹೊನ್ನೂರು ಪೀಠದ ಗಂಗಾಧರ ಸ್ವಾಮೀಜಿಗಳು ನನ್ನ ಜೀವನವನ್ನೇ ಬದಲಿಸಿದವರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ, ಇಂದು ಈ ಚಿಕ್ಕದಾದ, ಚೊಕ್ಕದಾದ ಧಾರ್ಮಿಕ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ಆಗಮಿಸಿರುವುದು ನಮ್ಮ ಭಾಗ್ಯ” ಎಂದು ನಮಿಸಿದರು.
“ನಾನು ನಂಬುವ ಅಜ್ಜಯ್ಯ ಅವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮದ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ, ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ, ಧರ್ಮಕ್ಕಾಗಿ ಆಳಿರಿ, ಧರ್ಮಕ್ಕಾಗಿ ತಾಳಿರಿ ಎಂಬ ಸಂದೇಶ ಸಾರಿದ್ದಾರೆ” ಎಂದರು.
“ನಮ್ಮ ತಾಯಿ, ತಂದೆ, ಗುರು ನಮ್ಮ ಬದುಕಿನ ಮೂರು ಭಾಗಗಳು. ಸಂಸ್ಕೃತಿ, ಶಾಂತಿ, ನೆಮ್ಮದಿ ಸಿಗಲಿ ಎಂದು ನಾವು ಗುರುಗಳಲ್ಲಿ ಪ್ರಾರ್ಥಿಸುತ್ತೇವೆ. ದೇವರು, ಧರ್ಮವನ್ನು ನಾವು ಮರೆಯಬಾರದು. ಈ ಹಿಂದೆ ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂಬ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದರು.
“ಇಂದು ಶ್ರೀಗಳು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಮಗೆಲ್ಲಾ ದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಈ ಊರಿನವರು ಸಂಘಟಿತರಾಗಿ, ಸಹಕಾರ ನೀಡಿ ಈ ಧರ್ಮ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಮೆಟ್ಟಿಲು ಹಾಕಿಸಿದ್ದಾರೆ” ಎಂದು ತಿಳಿಸಿದರು.
“ನೀವೆಲ್ಲರೂ ನನ್ನನ್ನು, ಡಿ.ಕೆ. ಸುರೇಶ್ ಹಾಗೂ ನಮ್ಮ ಮುಖಂಡರನ್ನು ಬೆಳೆಸಿದ್ದೀರಿ. ನಾವು ಹುಟ್ಟುವಾಗ ನಿರ್ದಿಷ್ಟ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಆದರೆ ನಾವು ಹುಟ್ಟಿದ ಮೇಲೆ ನಮ್ಮ ಹಿರಿಯರು ನಮಗೆ ಜಾತಿ, ಧರ್ಮದ ಪರಿಚಯ ಮಾಡಿಸಿದ್ದಾರೆ” ಎಂದು ತಿಳಿಸಿದರು.
“ನಮ್ಮ ರಾಜ್ಯದಲ್ಲಿ ರಂಭಾಪುರಿ ಶ್ರೀಗಳ ಧಾರ್ಮಿಕ ಇತಿಹಾಸ, ಪರಂಪರೆ ಬಹಳ ವಿಶೇಷವಾದುದು. ಧರ್ಮ ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ನಮಗೂ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ನನಗೆ ಈ ಮಠ ಹಾಗೂ ಶ್ರೀಗಳ ಬಗ್ಗೆ ದೊಡ್ಡ ಗೌರವವಿದೆ. ನನಗೂ ಈ ಮಠಕ್ಕೂ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧವಿದೆ. ಈ ಕಾರ್ಯಕ್ರಮಕ್ಕೆ ಶ್ರೀಗಳು ಬರುತ್ತಿರುವ ಮಾಹಿತಿ ಸಿಕ್ಕ ಕೂಡಲೇ ನನ್ನ ಎಲ್ಲಾ ಕೆಲಸ ಬಿಟ್ಟು, ಇಲ್ಲಿಗೆ ಬಂದು ಅವರ ದರ್ಶನ, ಆಶೀರ್ವಾದ ಪಡೆದಿದ್ದೇನೆ” ಎಂದರು.
“ನಮ್ಮ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದು, ಮುಂದಿನ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು. ನೀವೆಲ್ಲರೂ ಉಪಕಾರ ಸ್ಮರಣೆ ಇಟ್ಟುಕೊಳ್ಳಬೇಕು. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ. ಅವರು ಈ ರೀತಿ ನಿಮ್ಮ ಕೆಲಸಗಳನ್ನು ಮಾಡುವುದಿಲ್ಲ. ನಿಮ್ಮ ತಾಲೂಕು ಈ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂದು ನೀವು ಗಮನದಲ್ಲಿಟ್ಟುಕೊಳ್ಳಿ. ನೀವೆಲ್ಲರೂ ಬೆಂಗಳೂರು ದಕ್ಷಿಣ ಜಿಲ್ಲೆಯವರು. ನಮ್ಮ ಗೌರವ, ಪರಂಪರೆಯನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗೋಣ” ಎಂದು ಕರೆ ನೀಡಿದರು.
“ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನಾವು ನಮ್ಮ ಈ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್ ಅವರು, “ನಮ್ಮ ಕ್ಷೇತ್ರದಲ್ಲಿರುವ ನೂರಾರ ವರ್ಷಗಳ ಹಳೆಯದಾದ ಪುಣ್ಯಕ್ಷೇತ್ರ. ಬೆಟ್ಟದ ಮೇಲೆ ಈಗಲೂ ನೀರು ಜಿನುಗುತ್ತದೆ. ಇದನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ” ಎಂದು ತಿಳಿಸಿದರು.
“ಭಕ್ತಿ ಇರುವ ಕಡೆ ಭಗವಂತನಿದ್ದಾನೆ. ರಂಭಾಪುರಿ ಶ್ರೀಗಳು ಇಲ್ಲಿಗೆ ಬಂದು ಈ ಶಿವನು ನೆಲಿಸಿರುವ ಸ್ಥಾನಕ್ಕೆ ಹೊಸರೂಪ ನೀಡಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರದ ಜನರು ಸಹ ಇವರ ಜೊತೆ ಕೈ ಜೋಡಿಸಿ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಬಿಜ್ಜಹಳ್ಳಿ ಉತ್ತಮ ಇತಿಹಾಸ ಹೊಂದಿರುವ ಕ್ಷೇತ್ರ. ಇಲ್ಲಿನ ಭಕ್ತಾಧಿಗಳು ಇಂದಿಗೂ ಪೂಜೆ ಪುರಸ್ಕಾರಗಳನ್ನು ಮಾಡಿಕೊಂಡು ಇಲ್ಲಿನ ಪರಂಪರೆ ಉಳಿಸುತ್ತಿದ್ದಾರೆ” ಎಂದು ಹೇಳಿದರು.
“ಡಿ.ಕೆ.ಸುರೇಶ್ ಅವರು ಹಾಗೂ ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ. ಬೆಟ್ಟ ಹತ್ತುವುದಕ್ಕೆ ಕಷ್ಟ ಇರಬಹುದು. ಎಲ್ಲಾ ದೇವರುಗಳು ಬೆಟ್ಟದ ಮೇಲೆ ಇದ್ದಾವೆ. ಉದಾಹರಣೆಗೆ ಚಾಮುಂಡಿಬೆಟ್ಟ. ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಈ ದೇವಸ್ಥಾನಕ್ಕೂ ಮೆಟ್ಟಿಲು ಹತ್ತಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡುತ್ತೇನೆ” ಎಂದು ತಿಳಿಸಿದರು.
ಒಕ್ಕಲಿಗರು ಹಾಗೂ ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳು
“ದೇಶದಲ್ಲಿ ಓಬಿಸಿಗಳ ಸಂಖ್ಯೆ ವ್ಯಾಪಕವಾಗಿದೆ. ಒಕ್ಕಲಿಗರು ಹಾಗೂ ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳೇ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮುನ್ನೆಲೆಗೆ ತರಬೇಕು ಎಂದು ಓಬಿಸಿ ಸಲಹಾ ಸಮಿತಿ ಸಭೆ ನಡೆಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೇಳಿದರು.
ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕಳುಹಿಸಲು ಅವರಿಗೆ ಪಕ್ಷದ ಓಬಿಸಿ ಸಲಹಾ ಮಂಡಳಿ ಜವಾಬ್ದಾರಿ ನೀಡಿದ್ದಾರೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಸೇರಿದಂತೆ ಇದೇ ರೀತಿ ಅನೇಕ ಘಟಕಗಳಿವೆ. ಅಲ್ಪಸಂಖ್ಯಾತರಲ್ಲಿ ಜೈನ, ಸಿಖ್ ಧರ್ಮದವರೂ ಸೇರುತ್ತಾರೆ. ಇದನ್ನೆಲ್ಲಾ ಟೀಕೆ ಮಾಡಲಿಲ್ಲ ಎಂದರೆ ಬಿಜೆಪಿಯವರಿಗೆ ಸಮಾಧಾನವಾಗಬೇಕಲ್ಲ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ” ಎಂದರು.
“ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವ ಕಾರಣಕ್ಕೆ ಪಕ್ಷದ ಓಬಿಸಿ ಸಲಹಾ ಮಂಡಳಿಯ ಸಭೆ ಕೆಪಿಸಿಸಿ ಕಚೇರಿಯಲ್ಲಿಯೇ ನಡೆಯಲಿ ಎಂದು ಸಲಹೆ ನೀಡಿದ್ದೆ. ಅದರಂತೆ ಇಲ್ಲಿ ಸಭೆ ಏರ್ಪಡಿಸಲಾಗಿದೆ. ರಾಷ್ಟ್ರಮಟ್ಟದ ಸುಮಾರು 40 ಕ್ಕೂ ಹೆಚ್ಚು ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.