ಬೆಂಗಳೂರು: ಎಣ್ಣೆ ಪಾರ್ಟಿಯಲ್ಲಿ (Drinks party) ಜತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24 ವರ್ಷ) ಎಂಬಾತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜತೆ ರುದ್ರಪ್ಪ ಗಾರ್ಡನ್‌ನಲ್ಲಿರುವ ಮಂಜು ಬಾರ್‌ಗೆ ತೆರಳಿದ್ದ.
ಇಬ್ಬರೂ ಪಾರ್ಟಿ ಮಾಡುತ್ತಿದ್ದಾಗ ಸಂತೋಷ್‌ನ ಸ್ನೇಹಿತರಾದ ರಾಹುಲ್, ಪ್ರಜ್ವಲ್ ಹಾಗೂ ಅಭಿಷೇಕ್ ಬಾರ್‌ಗೆ ಬಂದಿದ್ದರು. ಒಟ್ಟಿಗೆ ಕುಳಿತಿದ್ದಾಗ ಕ್ಷುಲ್ಲಕ ಕಾರಣಕ್ಕೆ ಸಂತೋಷ್ ಹಾಗೂ ರಾಹುಲ್, ಪ್ರಜ್ವಲ್, ಅಭಿಷೇಕ್‌ನ ನಡುವೆ ಜಗಳ ಆರಂಭವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಸಂತೋಷನ ಪರವಾಗಿ ತೇಜಸ್ ಮಾತನಾಡಿದ್ದ. ಜಗಳ ಅತಿರೇಕಕ್ಕೆ ತಿರುಗಿದಾಗ ಇಲ್ಲೇ ಇರು ಬರುತ್ತೇವೆ ಎಂದು ಆರೋಪಿಗಳು ಹೊರ ಹೋಗಿದ್ದರು. ಇತ್ತ ಸಂತೋಷ್ ಹಾಗೂ ತೇಜಸ್ ಪಾರ್ಟಿ ಮುಗಿಸಿ ಹೊರಡಲು ಸಿದ್ದವಾಗುತ್ತಿದ್ದಂತೆ ಮಾರಕಾಸ್ತ್ರಗಳ ಸಮೇತ ಬಂದಿದ್ದ ಆರೋಪಿಗಳು ತೇಜಸ್ನನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿದ್ದಾರೆ.
ಹಲ್ಲೆಯಿಂದಾಗಿ ತೇಜಸ್‌ನ ಕಾಲು ಭಾಗಶಃ ತುಂಡಾಗಿದ್ದು, ಕುತ್ತಿಗೆ ಹಿಂಭಾಗಕ್ಕೂ ತೀವ್ರ ಗಾಯವಾಗಿದೆ. ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವನನ್ನ ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ತೇಜಸ್‌ನ ಸಹೋದರ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.