ಚಿಕ್ಕಬಳ್ಳಾಪುರ: ಮಾರಕಾಸ್ತಗಳನ್ನು ಹಿಡಿದು ವಾಹನ ಸವಾರರ ಡಕಾಯಿತಿಗೆ (Robbery) ಸ್ಕೆಚ್ ಹಾಕುತ್ತಿದ್ದ 7 ಮಂದಿಯನ್ನು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು (Police) ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ. 19 ರಾತ್ರಿ 10-30 ಗಂಟೆಗೆ ಬೆಂಗಳೂರು-ಹಿಂದೂಪುರ ರಸ್ತೆಯ ಗುಡಿಬಂಡೆ ಕ್ರಾಸ್ ನಿಂದ ಚಿಕ್ಕಕುರುಗೋಡು ರಸ್ತೆಯ ಮಧ್ಯ ಬರುವ ರಾಜಲಕ್ಷ್ಮಿ ದೇವಸ್ಥಾನಕ್ಕೆ ಹೋಗುವ ಅರ್ಚ್ ಬಳಿ 7 ಮಂದಿ ಗುಂಪಾಗಿ ಕುಳಿತುಕೊಂಡಿದ್ದು, ಅವರ ಕೈಗಳಲ್ಲಿ ಮಾರಕ ಆಯುಧಗಳನ್ನು ಹಿಡಿದುಕೊಂಡಿರುವುದು ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳ ಲೈಟ್ ಬೆಳಕಿನಲ್ಲಿ ಕಂಡು ಬಂದಿದೆ.
ಈ ವ್ಯಕ್ತಿಗಳು ರಸ್ತೆಯಲ್ಲಿ ಬರುವ ವಾಹನಗಳನ್ನು ಅಥವಾ ಜನರನ್ನು ಅಡ್ಡಗಟ್ಟಿ ಅವರಿಗೆ ಹಲ್ಲೆಯನ್ನು ಮಾಡಿ ಹೆದರಿಸಿ ಅವರ ಬಳಿ ಇರುವ ಹಣ ಒಡವೆ ಮೊಬೈಲ್ ಇನ್ನಿತರೇ ಬೆಲೆಬಾಳುವ ವಸ್ತುಗಳನ್ನು ಕಿತ್ತು ಕೊಳ್ಳುವ ಉದ್ದೇಶದಿಂದ ಅಪಾಯಕರವಾದ ಆಯುಧಗಳು ಮತ್ತು ವಸ್ತುಗಳನ್ನು ಇಟ್ಟುಕೊಂಡು ಹೊಂಚು ಹಾಕುತ್ತಿರುವ ಬಗ್ಗೆ ಅನುಮಾನ ಬೀಟ್ ಪೊಲೀಸರಿಗೆ ಬಂದಿದೆ.
ಈ ಕುರಿತಂತೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಮಾರಕಾಸ್ತ್ರಗಳೊಂದಿಗೆ ಸಾರ್ವಜನಿಕರನ್ನು ಅಡ್ಡಗಟ್ಟಿ ಡಕಾಯಿತಿ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳಾದ ಚಿಕ್ಕಕುರುಗೋಡು ಗ್ರಾಮದ ವಾಸಿಗಳಾದ ಸಂದೀಪ (26 ವರ್ಷ), ಉಮೇಶ (24 ವರ್ಷ), ಕುಮಾರ (28ವರ್ಷ), ಗಣೇಶ್ ಸಿ.ಎನ್ (24 ವರ್ಷ), ರಂಜೀತ್ ಕುಮಾರ್ .ಜಿ ಬಿನ್ (30ವರ್ಷ), ಗೋಪಿನಾಥ ಸಿ.ಎನ್ (27 ವರ್ಷ) ಮತ್ತು ಸುರೇಶ ಸಿ (22 ವರ್ಷ) ಎಂಬ 7 ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ. ಜಗನ್ನಾಥ್ ರೈ, ಪೊಲೀಸ್ ಉಪಾಧೀಕ್ಷಕ ಆರ್ ಶಿವಕುಮಾರ್, ವ್ಯತ್ತನಿರೀಕ್ಷಕ ಸತ್ಯನಾರಾಯಣ ಕೆ.ಪಿ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಲಲಿತಮ್ಮ, ರಮೇಶ್ ಗುಗ್ಗರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಬಗ್ಗೆ, ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.
