ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎದುರು 56 ಇಂಚಿನ ಎದೆ 36 ಇಂಚಿಗೆ ಕುಗ್ಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ್ ಕುರಿತು ತೀವ್ರ ಚರ್ಚೆಯ ಸಂದರ್ಭದಲ್ಲಿ ಟಿಎಂಸಿ ಸಂಸದರು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೇ 10 ರಂದು ಪಾಕಿಸ್ತಾನದೊಂದಿಗೆ ಕದನ ವಿರಾಮದ ಕುರಿತು ಮಾತನಾಡುತ್ತಾ ಪ್ರಧಾನಿಯನ್ನು ಟೀಕಿಸಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಹಲವು ದಿನಗಳ ಮಿಲಿಟರಿ ಯುದ್ಧದ ಬಳಿಕ ನಾನೇ ಎರಡು ದೇಶಗಳ ನಡುವೆ ಕದನ ವಿರಾಮ ಘೋಷಿಸಲು ಕಾರಣವಾಗಿದ್ದೇನೆ ಎಂದು ಟ್ರಂಪ್ ನಿರಂತರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ, ಒಮ್ಮೆ ನೀವು ನಿಮ್ಮX’ ಹ್ಯಾಂಡಲ್‌ನಲ್ಲಿ ಅಮೆರಿಕದ ಅಧ್ಯಕ್ಷರು ಹೇಳಿದ್ದೆಲ್ಲವೂ ತಪ್ಪು ಎಂದು ಪೋಸ್ಟ್ ಮಾಡಲು ಏಕೆ ಸಾಧ್ಯವಾಗಲಿಲ್ಲ? ನೀವು ಅಮೆರಿಕದ ಅಧ್ಯಕ್ಷರ ಮುಂದೆ ನಿಂತ ಕ್ಷಣ, ನಿಮ್ಮ ಎತ್ತರ 5 ಅಡಿಗಳಿಗೆ ಇಳಿಯುತ್ತದೆ ಮತ್ತು ನಿಮ್ಮ ಎದೆ 56 ಇಂಚುಗಳಿಂದ 36 ಇಂಚುಗಳಿಗೆ ಇಳಿಯುತ್ತದೆ. ನೀವು ಅಮೆರಿಕಾ ಅಧ್ಯಕ್ಷರಿಗೆ ಏಕೆ ಹೆದರುತ್ತೀರಿ? ಎಂದು ಬ್ಯಾನರ್ಜಿ ಪ್ರಶ್ನಿಸಿದರು.
ವಾರದ ಹಿಂದೆ ಭಾರತ-ಪಾಕಿಸ್ತಾನ ಸಂಘರ್ಷವನ್ನು ಪರಿಹರಿಸಿದ್ದಕ್ಕಾಗಿ ಶ್ವೇತಭವನವು ಟ್ರಂಪ್ ಅವರನ್ನು ಶ್ಲಾಘಿಸಿತು. ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ ವಿದೇಶಾಂಗ ನೀತಿಯನ್ನು ಬಣ್ಣಿಸಿದರು. ಅದಕ್ಕೂ ಮುನ್ನ ಮೇ ತಿಂಗಳಲ್ಲಿ ನಡೆದ ಯುದ್ದದ ಸಮಯದಲ್ಲಿ ಸುಮಾರು ನಾಲ್ಕರಿಂದ ಐದು ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಟ್ರಂಪ್ ಹೇಳಿಕೊಂಡಿದ್ದರೂ, ವ್ಯಾಪಾರದ ನೆಪವನ್ನು ಬಳಸಿಕೊಂಡು ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಅವರು ಮತ್ತೆ ಹೇಳಿಕೊಂಡರು ಎಂದು ಕಟುವಾಗಿ ಟೀಕಿಸಿದರು.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ 26 ನಾಗರಿಕರು ಸಾವನ್ನಪ್ಪಿದ ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ನಡೆಸಿತು. ಬಳಿಕ ಕದನವಿರಾಮ ಘೋಷಿಸಲಾಯಿತು.
ಇತ್ತ ಜುಲೈ 21 ರಂದು ಮಳೆಗಾಲದ ಅಧಿವೇಶನ ಪ್ರಾರಂಭವಾದಾಗಿನಿಂದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಪ್ರಕ್ರಿಯೆ ಸೇರಿದಂತೆ ಸಾರ್ವಜನಿಕ ಮಹತ್ವದ ವಿಷಯಗಳ ಕುರಿತು ಚರ್ಚಿಸುವಂತೆ ಪ್ರತಿಪಕ್ಷಗಳ ಒತ್ತಾಯಿಸುತ್ತಲೇ ಬಂದಿವೆ.
ಹೀಗಾಗಿ ಗದ್ದಲಗಳ ನಡುವೆ ಸಂಸತ್ತು ನಿರಂತರವಾಗಿ ಮುಂದೂಡಿಕೆಗಳಿಗೆ ಸಾಕ್ಷಿಯಾಗಿದೆ. ಆ ಬಳಿಕ ನಿನ್ನೆ ಮತ್ತು ಇಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ತಲಾ 16 ಗಂಟೆಗಳ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು.