ದೊಡ್ಡಬಳ್ಳಾಪುರ: ಶ್ರಾವಣ ಮಾಸದ ನಾಗರಪಂಚಮಿ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ (Ghati Subrahmanya) ಕ್ಷೇತ್ರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಜನದಟ್ಟಣೆ ಹೆಚ್ಚಾಗಿದ್ದು, ದೇವಾಲಯದ ಗೋಪುರದಿಂದ ಹೊರಗಿನ ರಸ್ತೆವರೆಗೂ ಕ್ಯೂ ಬೆಳೆದಿದೆ. ನಸುಕಿನಿಂದಲೇ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಈವರೆಗೆ ಸಾವಿರಾರು ಮಂದಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ.

ನಾಗರಪಂಚಮಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಸಲಾಗಿದ್ದು, ಘಾಟಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ನಾಗರಪಂಚಮಿಯಂದು ಪೂಜೆಯನ್ನು ನೆರವೇರಿಸಿ, ತನಿಯೆರೆದರೆ ಸರ್ಪದೋಷ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ.
ಈ ಕಾರಣದಿಂದಾಗಿ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
10ಸಾವಿರಕ್ಕು ಹೆಚ್ಚು ನಾಗರಕಲ್ಲುಗಳು
ರಾಜ್ಯದಲ್ಲಿ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರದೊಂದಿಗೆ ಸರ್ಪದೋಷ ನಿವಾರಣೆಗೆ ಖ್ಯಾತಿ ಹೊಂದಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿನ ನಾಗರಕಲ್ಲುಗಳು.
ಬರೋಬ್ಬರಿ 10ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಭಕ್ತರು ದೇವಸ್ಥಾನದ ಸುತ್ತ ಮುತ್ತ ಪ್ರತಿಷ್ಠಾಪಿಸಿದ್ದು, ನಾಗರಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇಲ್ಲಿ ರೂಢಿಯಾಗಿದೆ. ಜತೆಗೆ, ನಾಗರಪಂಚಮಿ ದಿನ ನಾಗರಕಲ್ಲುಗಳಿಗೆ ಕ್ಷೀರಾಭಿಷೇಕ ನೆರವೇರಿಸುವುದು ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ.