Harithalekhani; ಧಾರುಣಿ ಹುಟ್ಟು ಅಂಗವಿಕಲೆ. ಭಗವಂತನ ಶಾಪವೋ ಎಂಬಂತೆ ನೀಲಮ್ಮ ಕೇಶವರಾಯರಿಗೆ ನಾಲ್ಕು ಮಕ್ಕಳಲ್ಲಿ ಮೂರನೆಯವಳಾಗಿ ಹುಟ್ಟಿದವಳು.
ಮೊದಲೆರಡು ಗಂಡು ಮಕ್ಕಳು. ಕೊನೆಯವಳು ಮತ್ತೊಬ್ಬಳು ಶ್ರಾವಣಿ. ಈಕೆ ಸುರ ಸುಂದರಿ ಎಂದೇ ಹೇಳಬಹುದು. ಅಷ್ಟೇ ಅಲ್ಲ ಸಕಲ ಕಲಾ ವಲ್ಲಭೆ. ಹಾಡು, ನೃತ್ಯ ಯಾವುದೇ ಚಟುವಟಿಕೆ ಇರಲಿ.. ಶ್ರಾವಣಿ ಅಲ್ಲಿ ಇದ್ದೇ ಇರುತಿದ್ದಳು.
ಹೆತ್ತವರಿಗೂ ಮುದ್ದಿನ ಮಗಳಾದಳು. ಮೊದಲೆರಡು ಗಂಡು ಮಕ್ಕಳ ಸ್ಥಾನ ಬೇರೇನೇ ಇತ್ತು. ಇನ್ನು ಉಳಿದದ್ದು ಪಾಪ ಧಾರುಣಿ ನಡೆಯಲಾಗದ ನತದೃಷ್ಟೆ. ಎಲ್ಲದಕ್ಕೂ ಪರರ ಆಶ್ರಯ ಬೇಕು.ಸ್ವಲ್ಪ ಮಟ್ಟಿಗೆ ಮೂಲೆ ಗುಂಪೇ ಆದಳು ಎನ್ನಬಹುದು. ಆದರೆ ತಂಗಿಯ ಚಟುವಟಿಕೆಯ ನೋಡಿ ನಾನು ಏನಾದರು ಮಾಡಬೇಕು,ಸಾಧಿಸಬೇಕು ಎನ್ನುವ ಹಂಬಲ ಮನದೊಳಗೆ ಇತ್ತು.
ಉಳಿದ ಮಕ್ಕಳ ಹಾಗೆ ತಾನು ಶಾಲೆಗೆ ಹೋಗುವ ಹಾಗಿಲ್ಲ.. ಮನೆಯಲ್ಲಿ ಅಣ್ಣನವರು,ತಂಗಿ ಓದುತಿದ್ದ ಪಾಠಗಳು ಕಿವಿಗೆ ಬಿದ್ದ ಕ್ಷಣ ಅದನ್ನು ಜ್ಞಾಪಿಸಿಕೊಳ್ಳುವ ಶಕ್ತಿ ದೇವರು ಕರುಣಿಸಿದ್ದ.ಹಾಗೆ ತಂಗಿ ಮಾಡುತಿದ್ದ ಸಂಗೀತದ ಹಾಡು ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳುತಿದ್ದಳು..
ಸ್ವರವೂ ಇಂಪಾಗಿತ್ತು.. ಒಂದು ಭಾರಿ ಅವರ ಮನೆಗೆ ಬಂದ ಬಳಗದವರೊಬ್ಬರು ಧಾರುಣಿ ಗುಣುಗುತಿದ್ದ ಹಾಡು ಕೇಳುತ್ತಾರೆ. ಈ ಹುಡುಗಿಗೆ ಸರಿಯಾದ ದಾರಿ ತೋರಿದರೆ ಒಳ್ಳೆ ಸಂಗೀತ ಗಾರ್ತಿಯಾದರು ಆಗಬಹುದು ಎಂದು ಕೇಶವರಾಯರಲ್ಲಿ ಪ್ರಸ್ತಾಪಿಸುತ್ತಾರೆ. ಆದರೆ ರಾಯರು ಅಷ್ಟೊಂದು ಉತ್ಸಾಹ ತೋರಿಸುವುದಿಲ್ಲ.
ಇತ್ತ ಶ್ರಾವಣಿಗೆ ಒಂದು ಟಿವಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗ್ತದೆ. ಒಂದು ದಿನ ಅಲ್ಲಿ ಅವಳ ಅಕ್ಕನ ಬಗ್ಗೆ ಹೇಳುವಾಗ ತೀರ್ಪುಗಾರರು ಅಲ್ಲಿಗೆ ಬಂದ ಧಾರುಣಿಯಲ್ಲೂ ಹಾಡಲು ಹೇಳುತ್ತಾರೆ. ಅವಳ ಹಾಡು ಕೇಳಿದ ಎಲ್ಲರೂ ದಂಗಾಗಿ ದೇವರು ಕಾಲು ಕೊಡದಿದ್ದರೆ ಏನಂತೆ.. ಕಂಠವಾದರೂ ಕೊಟ್ಟಿದ್ದಾರಲ್ಲ ಅನ್ನುತ್ತಾ ಅವಳಿಗೂ ಮಾರ್ಗದರ್ಶನಕ್ಕಾಗಿ ಒಂದು ಶಿಕ್ಷಕಿಯನ್ನು ನೀಡುತ್ತಾರೆ.
ಧಾರುಣಿ ಎಲ್ಲ ಪ್ರಕಾರದ ಸಂಗೀತವನ್ನು ಕೂಡಲೇ ಕಲಿಯುತ್ತಿದ್ದಳು. ಧಾರುಣಿಗೆ ಟಿವಿ ಯವರು ನಡೆಸಿದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬರ್ತದೆ.
ಅವಳ ಬಾಳಿನಲ್ಲೂ ಕಪ್ಪು ಮೋಡಗಳು ಸರಿದು ಬೆಳದಿಂಗಳಾಗಿ ಹರಡುತ್ತದೆ ಅವಳ ಜೀವನದ ಪಥವೇ ಬದಲಾಗುತ್ತದೆ. ಗಾಲಿ ಚಕ್ರ ಹೋಗಿ ಮುಂದೆ ಕೃತಕ ಕಾಲು ಜೋಡಿಸಿ ಅವಳು ನಡೆಯುವಂತಾಗುತ್ತಾಳೆ… ದೊಡ್ಡ ಸಂಗೀತಗಾರಳಾಗಿ ಎಲ್ಲರ ಮನ ಸೆಳೆದು ಮನೆ ಮಾತಾಗುತ್ತಾಳೆ.
ಕೃಪೆ: ಶೋಭಾ ಆರ್ ಕಲ್ಕೂರ್ (ಸಾಮಾಜಿಕ ಜಾಲತಾಣ)