ದೊಡ್ಡಬಳ್ಳಾಪುರ: ನಿನ್ನೆಯಷ್ಟೇ (ಮಂಗಳವಾರ) ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನಪ್ಪಿ, ಓರ್ವ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬೆನ್ನಲ್ಲೇ, ಇಂದು ಸಂಜೆ (ಬುಧವಾರ) ನಗರದಲ್ಲಿ ವಿದ್ಯುತ್ ಸ್ಪರ್ಶದಿಂದ (Electric shock) ಎಮ್ಮೆಯೊಂದು (Buffalo) ಸಾವನಪ್ಪಿರುವ ಘಟನೆ ವರದಿಯಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ ಒಂದರ ಬಸವೇಶ್ವರ ನಗರದಲ್ಲಿ ಇಂದು ಸಂಜೆ ವಿದ್ಯುತ್ ಕಂಬದ ಬಳಿ ಎಮ್ಮೆ ಮೇವು ಮೇಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ ಧನುಶ್ ಗೌಡ, ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷದಿಂದ ಸಾವಿರಾರು ಮೌಲ್ಯದ ಎಮ್ಮೆ ಸಾವನಪ್ಪಿದೆ ಎಂದು ಆರೋಪಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಳೆದ 6,7 ತಿಂಗಳಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇದ್ದು, ಅರ್ಥಿಂಗ್ ಫೇಲ್ ಆಗಿದೆ. ಇದರಿಂದ ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ಪದೇ ಪದೇ ಹಾಳಾಗುತ್ತಿದೆ. ಈ ಕುರಿತಂತೆ ಬೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗುತ್ತಿದೆಯಾದರು, ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಇದರ ಬೆನ್ನಲ್ಲೇ ಇಂದು ಸಂಜೆ ಎಮ್ಮೆ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದೆ. ಒಂದು ವೇಳೆ ಎಮ್ಮೆಯ ಬದಲಾಗಿ ಮಕ್ಕಳು ಅಥವಾ ದೊಡ್ಡವರು ಆ ವಿದ್ಯುತ್ ಕಂಬದ ಬಳಿ ತೆರಳಿದ್ದರೆ ಅವರು ಕೂಡ ಸಾವನಪ್ಪುತ್ತಿದ್ದರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಹೆಚ್ಚೆತ್ತು ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.