ದೊಡ್ಡಬಳ್ಳಾಪುರ: ಗಣೇಶ ಚತುರ್ಥಿಯನ್ನು (Ganesh Chaturthi) ಆಚರಣೆ ಬುಧವಾರ ತಾಲೂಕಿನಾಧ್ಯಂತ ಸಂಭ್ರಮ, ಸಡಗರದಿಂದ ನೆರವೇರಿಸಲಾಗಿದೆ.
ವಿವಿಧೆಡೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನವನವೀನ ಭಂಗಿಯಲ್ಲಿನ ಬೃಹತ್ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದರೆ, ಮನೆಗಳಲ್ಲಿ ಚಿಕ್ಕ ಮೂರ್ತಿಗಳನ್ನು ತಂದು ಶ್ರದ್ಧಾ, ಭಕ್ತಿಯಿಂದ ಪೂಜಿಸಿದ್ದಾರೆ.

ಅನೇಕರು ಸಾಂಪ್ರದಾಯಿಕ ವಾದ್ಯ, ಸಂಗೀತ ಹಾಗೂ ಪಟಾಕಿ ಸಿಡಿಸಿ ಗಣೇಶನನ್ನು ಬರಮಾಡಿಕೊಂಡರು. ವಿವಿಧ ಹೂವು, ವಿದ್ಯುತ್ ಬೆಳಕಿನಿಂದ ಆಲಂಕರಿಸಿದ ಮಂಟಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಲಂಬೋದರನಿಗೆ ಪ್ರಿಯವಾದ ಕಡುಬು, ಪಂಚ ಕಜ್ಜಾಯ, ಮೋದಕ ಸೇರಿದಂತೆ ವಿವಿಧ ಬಗೆಯ ನೈವೇದ್ಯ ಸಮರ್ಪಿಸಿದರು.

ಹಿರಿಯರು ಕಿರಯರೆನ್ನದೇ ಎಲ್ಲ ವಯೋಮಾನ ದವರು ಹೊಸ ಬಟ್ಟೆ ತೊಟ್ಟು, ದೇವರಿಗೆ ಆರತಿ ಬೆಳಗಿ ಸಂಭ್ರಮಿಸಿದರು.

ಸಾಮಾನ್ಯವಾಗಿ ವಿವಿಧೆಡೆ ಒಂದು ದಿನ, ಮೂರು ದಿನ, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳ ವರೆಗೆ ಗಣೇಶನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಅನಂತ ಚತುರ್ದಶಿ ತನಕ ಪೂಜಿಸುವ ವಾಡಿಕೆ ಇದೆ.
ವಿಸರ್ಜನಾ ಸ್ಥಳಗಳಲ್ಲಿ ಮೂರ್ತಿಗಳಿಗೆ ಪೂಜೆ ಸಲ್ಲಿಸುವ ವೇಳೆ ‘ಗಣಪತಿ ಬಪ್ಪಾ ಮೋರಯಾ!’ ಎಂಬ ಮುಗಿಲು ಮುಟ್ಟುವ ಭಕ್ತರ ಘೋಷಣೆಯೊಂದಿಗೆ ನಗರಸಭೆಯ ಸಂಚಾರಿ ವಾಹನ, ಡಿ.ಕ್ರಾಸ್ ರಸ್ತೆಯಲ್ಲಿನ ಕೆರೆ ಅಂಚಿನಲ್ಲಿ ನಿರ್ಮಿಸಿರುವ ಜಲಸಂಗ್ರಹದಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿನ ಕೆರೆ, ಕುಂಟೆ ಮೂರ್ತಿಯನ್ನು ವಿಸರ್ಜಿಸಿ ವಿದಾಯ ಹೇಳಿದರು.
ಗಮನ ಸೆಳೆದ ಇಮ್ಮಡಿ ಪುಲಿಕೇಶಿ, RCB ರೂಪದ ಗಣೇಶ ಮೂರ್ತಿ

ದೊಡ್ಡಬಳ್ಳಾಪುರ ನಗರದ ಬೆಸ್ತರಪೇಟೆಯಲ್ಲಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ರೂಪದ ಗಣೇಶ ಮೂರ್ತಿ, ರೋಜಿಪುರದಲ್ಲಿ ಆರ್‌ಸಿಬಿ (RCB) ಗಣಪತಿ ಮೂರ್ತಿ ಗಮನ ಸೆಳೆದಿದೆ.