ದೊಡ್ಡಬಳ್ಳಾಪುರ; ಮೊದಲ ದಿನ ಅಮ್ಮ ಗೌರಮ್ಮನನ್ನು ಪೂಜಿಸಿದರೆ, ಮರುದಿನ ಅಂದರೆ ಬುಧವಾರ ಗೌರಿಪುತ್ರ, ವಿಘ್ನ ನಿವಾರಕ ಗಣೇಶನ (Ganesha) ಪೂಜೆ.
ಸ್ವರ್ಣಗೌರಿ ವ್ರತಾಚರಣೆ ಮಂಗಳವಾರ ಬಂದಿರುವುದು ಹೆಚ್ಚು ಶ್ರೇಷ್ಠ. ಹೀಗಾಗಿ, ಸಂಪ್ರದಾಯವುಳ್ಳವರು ಮನೆಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಮನೆ ಮಂದಿಯೆಲ್ಲಾ ಕೂಡಿ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು.

ಮುಂಜಾನೆಯೇ ಎದ್ದು ಮಡಿಯುಟ್ಟ ಹೆಂಗಳೆಯರು ಮನೆ ಬಾಗಿಲಿಗೆ ಬಣ್ಣ ಬಣ್ಣಗಳಿಂದ ತುಂಬಿದ ಚಂದದ ರಂಗವಲ್ಲಿ ಹಾಕಿ, ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿದರು. ಮನೆಯ ಮಂಟಪದಲ್ಲಿ ಗೌರಿಯನ್ನು ಕೂರಿಸಿ ಹೂಗಳಿಂದ ಅಲಂಕರಿಸಿ ಬಾಗಿನ ಹಾಗೂ ಹಣ್ಣುಗಳನ್ನಿಟ್ಟು ಪೂಜೆ ನೆರವೇರಿಸಿದರು.
ಹೋಳಿಗೆ, ಪಾಯಸ ಸೇರಿದಂತೆ ನಾನಾ ಖಾದ್ಯಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಮಾಡಿದರು. ತವರಿನಿಂದ ಬಂದ ಬಾಗಿನವನ್ನು ದೇವರ ಮುಂದಿಟ್ಟು ಪೂಜಿಸಿ ಮುತೈದೆಯರಿಗೆ ಅರಿಶಿನ, ಕುಂಕುಮ ನೀಡಿದರು. ಮನೆಯವರೊಟ್ಟಿಗೆ ಊಟ ಮಾಡಿ ಸಂಭ್ರಮಿಸಿದರು.
ಝರಿ ಸೀರೆಯುಟ್ಟ ಹೆಂಗೆಳೆಯರು ಮನೆ ಮನೆಗಳಿಗೆ ಅರಿಶಿನ ಕುಂಕುಮಕ್ಕೂ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುಟ್ಟ ಹೆಣ್ಣು ಮಕ್ಕಳು ಹೊಸ ಉಡುಗೆ ತೊಟ್ಟು ಸಂತಸ ಪಡುತ್ತಿದ್ದರು.
ದೇವಾಲಯಗಳಲ್ಲೂ ವಿಶೇಷ ಪೂಜೆ: ಗೌರಿಹಬ್ಬದ ಅಂಗವಾಗಿ ನಾನಾ ದೇವಿ ದೇವಾಲಯಗಳು ಹಾಗೂ ಇತರೆ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಗಿತ್ತು. ಹೀಗಾಗಿ, ಭಕ್ತರು ಬೆಳಗ್ಗೆಯಿಂದಲೇ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು.
ತವರು ಮನೆಯ ಬಾಗಿನ: ವಿವಾಹಿತ ಮಹಿಳೆಯರಿಗೆ ತಮ್ಮ ತವರು ಮನೆಯಿಂದ ಬಾಗಿನ ತಂದು ನೀಡುತ್ತಿದ್ದ ದೃಶ್ಯವೂ ನಮ್ಮ ಸಂಸ್ಕೃತಿಯ ಪ್ರತೀಕವಾಗಿತ್ತು.
ಗಣೇಶ ಹಬ್ಬ
ಹಲವರು ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕೆಲವರು ಗಣಪನನ್ನು ಪ್ರತಿಷ್ಠಾಪಿಸಿದರೆ, ರಸ್ತೆಗೊಂದರಂತೆ ಗಣೇಶೋತ್ಸವ ಸಮಿತಿಗಳಿಂದ ವಿಶೇಷವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಇಡೀ ಬಡಾವಣೆಯ ಜನರನ್ನು ಸೇರಿಸಿಕೊಂಡು ಹಬ್ಬ ಆಚರಿಸಲು ಅಣಿಯಾಗಿದ್ದಾರೆ.
ಹಲವೆಡೆ ವಿಶೇಷ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ಮಣ್ಣಿನ ಗಣಪತಿ, ಪೇಪರ್ ಗಣಪತಿ ಸೇರಿದಂತೆ ಹಲವರು ಪರಿಸರ ಸ್ನೇಹಿ ಗಣಪನನ್ನು ಕೂರಿಸಲು ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
ಪ್ರತಿಷ್ಠಾಪನೆಗೆ ಶುಭಕಾಲ: ಭಾದ್ರಪದ ಶುಕ್ಲಪಕ್ಷ ಚತುರ್ಥಿ ಆ. 27ರ ಬುಧವಾರ ಶ್ರೀ ವರಸಿದ್ಧಿ ವಿನಾಯಕ ವ್ರತಾಚರಣೆ.
ಬೆಳಗ್ಗೆ 4:30 ರಿಂದ 5:30
ಬೆಳಗ್ಗೆ 09:00 ರಿಂದ 09:45
ಬೆಳಿಗ್ಗೆ 10:00 ರಿಂದ 11:45 ಸಂಜೆ 04:30ರಿಂದ 06:00 ಗಂಟೆಯೊಳಗೆ ಪ್ರತಿಷ್ಠಾಪನೆಗೆ ಶುಭಕಾಲವಾಗಿದೆ.