ದೊಡ್ಡಬಳ್ಳಾಪುರ: ಗ್ರಾಮಾಂತರ ಠಾಣೆ ಆವರಣದಲ್ಲಿ ಇಂದು (ಜೂ.12) ಖಾಸಗಿ ಶಾಲೆಗಳ ಬಸ್ ಚಾಲಕರ (Private school bus drivers) ಸಭೆಯನ್ನು ಆಯೋಜಿಸಲಾಗಿತ್ತು.
ಶಾಲೆ ಆರಂಭದ ಬಳಿಕ ರಾಜ್ಯದ ವಿವಿಧೆಡೆ ಸಂಭವಿಸಿದ ಶಾಲಾ ಬಸ್ ಅಪಘಾತ ಪ್ರಕರಣದ ಕುರಿತು ಮುಂಜಾಗ್ರತೆ ವಹಿಸಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಖಾಸಗಿ ಬಸ್ ಚಾಲಕರ ಸಭೆ ನಡೆಸಿದರು.
ಸಭೆಯಲ್ಲಿ ಸುಮಾರು 30 ಮಂದಿ ವಿವಿಧ ಶಾಲೆಯ ಬಸ್ ಚಾಲಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ, ಅಪಘಾತಗಳ ತಡೆಗಟ್ಟಲು ಶಾಲಾ ವಾಹನಗಳ ಚಾಲಕರ ಪಾತ್ರ ಪ್ರಮುಖವಾಗಿದೆ.
ಖಾಸಗಿ ಶಾಲೆ ಬಸ್ ಮಾಲೀಕರು, ಚಾಲಕರು ಸರ್ಕಾರದ ನಿಯಮ ಪಾಲನೆ ಅಗತ್ಯವಾಗಿದೆ, ನುರಿತ ಚಾಲಕರ ನೇಮಕ, ವೇಗ ಮಿತಿ, ಕಡ್ಡಾಯವಾಗಿ ಸಂಚಾರಿ ನಿಯಮ ಪಾಲನೆ, ಸಮರ್ಪಕ ದಾಖಲೆ, ವಾಹನಗಳ ಗುಣಮಟ್ಟ ಹೊಂದಿರಬೇಕಿದೆ.
ಶಾಲೆಗೆ ಬರುವ ಪುಟಾಣಿ ಮಕ್ಕಳ ಜೀವದ ಹೊಣೆ ನಿಮ್ಮದಾಗಿರುತ್ತೆ. ಮಕ್ಕಳನ್ನು ವಾಹನಗಳಿಗೆ ಹತ್ತಿಸಿಕೊಳ್ಳುವಾಗ, ಇಳಿಸಿದ ಬಳಿಕ ವಾಹನಗಳ, ಹಿಂದೆ ಮತ್ತು ಮುಂದೆ ಯಾವುದೇ ಮಕ್ಕಳು ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡ ಬಳಿಕ ವಾಹನ ಮುಂದೆ ಸಾಗಬೇಕಿದೆ.
ರಸ್ತೆಯಲ್ಲಿ ಇತರೆ ಶಾಲೆ ಬಸ್ ಜೊತೆ ಸ್ಪರ್ಧೆಗೆ ಬಿದ್ದು ಬೇಕಾಬಿಟ್ಟಿ ರೋಡ್ ರೇಜ್ ಮಾಡುವುದು, ನಿಯಮ ಉಲ್ಲಂಘನೆ ಮಾಡಿ ಏಕ ಮುಖರಸ್ತೆಯಲ್ಲಿ ಸಂಚರಿಸುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾಧಿಕ್ ಪಾಷಾ ಎಚ್ಚರಿಕೆ ನೀಡಿದರು.