ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಇತ್ತೀಚೆಗೆ ಚಾಲನೆ ನೀಡಿದ ಘಾಟಿ ಇಶಾ ಫೌಂಡೇಶನ್ ಪ್ಯಾಕೇಜ್ (Ghati Isha Foundation Package) ಪ್ರವಾಸ-2ದಲ್ಲಿ ನಗರದ ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯಕ್ಕೆ ಯಾತ್ರಾತ್ರಿಗಳು ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದು ಪ್ರವಾಸದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಘಾಟಿ ಇಶಾ ಫೌಂಡೇಶನ್ ಪ್ಯಾಕೇಜ್ ಪ್ರವಾಸ-2ದಲ್ಲಿ ನಗರದ ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯ, ಘಾಟಿ ಸುಬ್ರಹ್ಮಣ್ಯ ದೇವಾಲಯ, ಮುದ್ದೇನಹಳ್ಳಿಯ ಜ್ಞಾನ ತೀರ್ಥ, ಪಂಚನದಿ ಕ್ಷೇತ್ರ ಪಾಪಾಗ್ನಿ ಮಠ, ಕಲ್ಯಾಣಿ ಕಾರಂಜಿ ಮತ್ತು ಚಿಕ್ಕಬಳ್ಳಾಪುರ ಇಶಾ ಫೌಂಡೇಷನ್ ಕ್ಷೇತ್ರಗಳು ಸೇರಿದೆ.
ಬೆಳಿಗ್ಗೆ 9 ಗಂಟೆಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು ಸಂಜೆ 7 ಗಂಟೆಗೆ ವಾಪಾಸಾಗಲಿದೆ. ಪ್ರಯಾಣದದ 600 ರೂಗಳಗಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರವು ಪ್ರಖ್ಯಾತಿಯಾಗಿದ್ದು, ಹೆಚ್ಚಿನ ಯಾತ್ರಿಕರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಾರೆ. ಆದರೆ ದೊಡ್ಡಬಳ್ಳಾಪುರದ ಪುರಾತನ ದೇವಾಲಯವಾದ ನಗರದ ಬಸ್ ನಿಲ್ದಾಣದ ಸಮೀಪದ ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯವು ಪ್ರವಾಸದ ಪಟ್ಟಿಯಲ್ಲಿ ಇದೇ ಮೊದಲ ಬಾರಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಈ ದೇವಾಲಯಕ್ಕೆ 600 ವರ್ಷಗಳ ಇತಿಹಾಸವಿದ್ದು, ಇದನ್ನು ಕೃಷ್ಣದೇವರಾಯನ ಕಾಲದಲ್ಲಿ ಕಟ್ಟಿರುವ ಬಗ್ಗೆ ದೇವಾಲಯದಲ್ಲಿ ಕುರುಹುಗಳಿವೆ. ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ ಈ ದೇವಾಲಯ ನೆಲದಡಿಯಲ್ಲಿ ಸಿಕ್ಕಿದ್ದರಿಂದ ಇದು ನೆಲದಾಂಜನೇಯಸ್ವಾಮಿ ಎಂದು ಹೆಸರಾಗಿದೆ. ದೇವಾಲಯದ ದ್ವಾರದಲ್ಲಿ ಆಲಿಂಗನ ರಾಮಾಂಜಿನೇಯ ವಿಗ್ರಹವಿದೆ.
ಆವರಣದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ಪ್ರತಿಷ್ಟಾಪಿಸಿರುವ 15 ಅಡಿ ಎತ್ತರದ ಕಲ್ಲಿನ ಗದೆ, ಅಶ್ವತ್ಥ ಕಟ್ಟೆ ಹಾಗೂ ಅರಳಿ, ಅತ್ತಿ, ಬಿಲ್ವ,ಬನ್ನಿ ಹಾಗೂ ಬೇವು ಪಂಚ ವೃಕ್ಷಗಳಿವೆ.
ಆಂಜನೇಯಸ್ವಾಮಿಗೆ ನೇರವಾಗಿ ಭಕ್ತರೇ ಗರ್ಭಗುಡಿಗೆ ಹೋಗಿ ನಮಸ್ಕರಿಸಿ ಪೂಜಿಸುವ ಆಚರಣೆ ಹಿಂದಿನಿಂದಲೂ ಬಂದಿದ್ದು, ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಶಕ್ತಿ ಆಂಜನೇಯಸ್ವಾಮಿಯದ್ದಾಗಿದೆ ಎಂದು ನೆಲದಾಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಪ್ರಮುಖರು ಯಾತ್ರಾತ್ರಿಗಳಿಗೆ ದೇವಾಲಯದ ಪರಿಚಯ ಮಾಡಿಕೊಟ್ಟರು.
ಬೆಂಗಳೂರಿನ ಸಮೀಪದಲ್ಲಿಯೇ ಇಂತಹ ಪುರಾತನ ದೇವಾಲಯಗಳಿದ್ದು, ಇವುಗಳ ಬಗ್ಗೆ ನಮಗೆ ಹೆಚ್ಚಿನ ಅರಿವು ಮೂಡಬೇಕಿದೆ. ದೇವಾಲಯದ ಇತಿಹಾಸ ಹಾಗೂ ಮಹಿಮೆ ತಿಳಿದು ಸಂತಸವಾಗಿದ್ದು, ಘಾಟಿ ಇಶಾ ಫೌಂಡೇಶನ್ ಪ್ಯಾಕೇಜ್ ಪ್ರವಾಸ ಒಳ್ಳೆಯ ಅನುಭವ ನೀಡಿದೆ ಎಂದು ಯಾತ್ರಿಕರಾದ ಜಗದೀಶ್, ಸುಕನ್ಯ ರಾಜ್ಯ ಸರ್ಕಾರದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.