Harithalekhani; ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನು ತುಂಬ ಸುಸಂಸ್ಕೃತನಾಗಿದ್ದ. ನಡೆ ನುಡಿಗಳಲ್ಲಿ ಪ್ರಜೆಗಳಿಗೆ ಒಳ್ಳೆಯ ಮಾರ್ಗದರ್ಶನಕನಾಗಿದ್ದ. ಆತನು ಆಗಾಗ್ಗೆ ಮಾರುವೇಷದಲ್ಲಿ ರಾಜ್ಯವನ್ನು ಸುತ್ತುತ್ತ, ದುಷ್ಟರನ್ನು ಶಿಕ್ಷಿಸುತ್ತ ಶಿಷ್ಟರನ್ನು ರಕ್ಷಿಸುತ್ತಿದ್ದ. ಹಾಗಾಗಿ ಆ ರಾಜ್ಯ ಸುಭಿಕ್ಷದಿಂದ ತಾಂಡವಾಡುತ್ತಿತ್ತು.
ಒಮ್ಮೆ ರಾಜನು ತನ್ನ ಸೈನಿಕರೊಂದಿಗೆ ಬೇಟೆಗಾಗಿ ಕಾಡಿಗೆ ತೆರಳಿದ್ದ. ಅಲ್ಲೂ ಕೂಡ ಅವನು ಅನವಶ್ಯಕವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರಲಿಲ್ಲ. ಯಾವುದಾದರೂ ದುಷ್ಟಪ್ರಾಣಿಯಿಂದ ತನ್ನ ಪ್ರಜೆಗಳಿಗೆ ತೊಂದರೆಯಾದರೆ ಅಂಥ ಪ್ರಾಣಿಗಳನ್ನು ಮಾತ್ರ ಹುಡುಕಿ ಕೊಲ್ಲುತ್ತಿದ್ದ. ಆ ದಿನ ರಾಜನು ತನ್ನ ಸೈನಿಕರೊಂದಿಗೆ ಎಷ್ಟು ಸುತ್ತಿದರೂ ಒಂದೇ ಒಂದು ಬೇಟೆಯೂ ಸಿಗಲಿಲ್ಲ.
ಕಾಡಿನೊಳಗೆಲ್ಲಾ ಸುತ್ತಿ, ಸುತ್ತಿ ರಾಜನಾದಿಯಾಗಿ ಎಲ್ಲರಿಗೂ ತುಂಬಾ ಬಾಯಾರಿಕೆಯಾಯಿತು. ಅವರೆಲ್ಲಾ ನೀರಿಗಾಗಿ ತುಂಬಾ ಹುಡುಕಾಡಿದರು. ಎಷ್ಟೇ ಹುಡುಕಿದರೂ ಅವರಿಗೆ ಕುಡಿಯಲು ಒಂದೇ ಒಂದು ಹನಿ ನೀರು ಕೂಡಾ ದೊರಕಲಿಲ್ಲ. ಯಾವುದೇ ಕೆರೆಯಾಗಲೀ, ಕೊಳವಾಗಲೀ, ಬಾವಿಗಳಾಗಲೀ ಅಥವಾ ಹೊಳೆಯಾಗಲೀ ಗೋಚರಿಸಲಿಲ್ಲ. ಅವರು ಹಾಗೇ ಮುಂದುವರಿಯುತ್ತ ಬಾಯಾರಿಕೆಯಿಂದ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು.
ಆಗ ಹಾದಿಯಲ್ಲಿ ಒಬ್ಬ ಕುರುಡನು ತನ್ನ ಸ್ವಂತ ಬಾವಿಯಿಂದ ದಾರಿಹೋಕರಿಗೆಲ್ಲ ನೀರುಕೊಡುತ್ತಿದ್ದ ದೃಶ್ಯ ಕಂಡುಬಂದಿತು. ಆಗ ರಾಜನು ತನ್ನ ಸೇವಕನ ಬಳಿ ಅಲ್ಲಿಗೆ ಹೋಗಿ ಸ್ವಲ್ಪ ನೀರನ್ನು ಕೇಳಿ ತರಲು ಹೇಳಿದನು.
ಅಂತೆಯೇ ಸೇವಕನು ಅವನ ಬಳಿ ಹೋಗಿ ದರ್ಪದಿಂದ, “ಏ ಕುರುಡ, ನಮಗೆ ತುಂಬಾ ಬಾಯಾರಿಕೆಯಾಗಿದೆ, ಕುಡಿಯಲು ಒಂದು ಕೊಡ ನೀರು ಕೊಡು,” ಎಂದು ಘರ್ಜಿಸಿದ.
ಆಗ ಆ ಮುದುಕನು ಅಷ್ಟೇ ಒರಟಾಗಿ, “ಇದು ನನ್ನ ಸ್ವಂತ ಬಾವಿ. ನಾನು ಇಲ್ಲೇನೂ ನೀರನ್ನು ಮಾರಾಟಕ್ಕೆ ಇಟ್ಟಿಲ್ಲ. ಇಟ್ಟಿದ್ದರೂ ನಿನ್ನಂತಹ ಮೂರ್ಖನಿಗೆ ನಾನು ಒಂದು ಹನಿ ನೀರನ್ನೂ ಕೊಡುವುದಿಲ್ಲ. ಹೋಗು, ಹೋಗು” ಎಂದು ಘರ್ಜಿಸಿದ.
ಅಲ್ಲಿಂದ ಹಿಂತಿರುಗಿದ ಸೇವಕನು , ಆ ಮುದುಕ ತುಂಬಾ ಒರಟನೆಂದೂ, ನಾನು ಎಷ್ಟೇ ಕೇಳಿಕೊಂಡರೂ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಗದರಿಸಿ ಕಳುಹಿಸಿದ ಎಂದು ರಾಜನಿಗೆ ವರದಿ ಮಾಡಿದ. ಆಗ ರಾಜನು ಸೇನಾಧಿಪತಿಯ ಕಡೆಗೆ ತಿರುಗಿ, “ನೀನು ಹೋಗಿ ಪ್ರಯತ್ನಿಸು” ಎಂದು ಆದೇಶಿಸಿದನು.
ಅಂತೆಯೇ ಸೇನಾಧಿಪತಿ೦ುು ವೃದ್ಧನ ಬಳಿಗೆ ಹೋಗಿ, “ಏ ಮುದುಕ, ಕಣ್ಣಿಲ್ಲದೇ ಕುರುಡನಾಗಿದ್ದರೂ, ಎಷ್ಟೊಂದು ಅಹಂಕಾರ ನಿನಗೆ. ಒಳ್ಳೆಯ ಮಾತಿನಲ್ಲಿ ನೀರನ್ನು ಕೊಟ್ಟರೆ ಸರಿ, ಇಲ್ಲದಿದ್ದರೆ ನಿನ್ನ ಗತಿ ನೆಟ್ಟಗಾಗುವುದಿಲ್ಲ” ಎಂದು ಗದರಿಸಿದ. ಆದರೆ ಆ ಮುದುಕನು ಸೇನಾದಿಕಾರಿಯ ಮಾತಿಗೆ ಕಿಂಚಿತ್ತೂ ಬೆಲೆ ಕೊಡದೇ, “ಹೋಗು, ಹೋಗು, ಇದು ನನ್ನ ಬಾವಿ, ನೀರುಕೊಡುವುದೂ ಬಿಡುವುದೂ ನನಗೆ ಸೇರಿದ್ದು. ನನ್ನನ್ನು ಬೆದರಿಸಲು ನೀನಾರು? ನೀನು ಅದೇನು ಮಾಡುವೆಯೋ ಮಾಡಿಕೋ, ನಾನು ನೋಡಿ ಕೊಳ್ಳುತ್ತೇನೆ. ನಾನಂತೂ ನಿನಗೆ ನೀರು ಕೊಡುವುದಿಲ್ಲ” ಎಂದು ಅಷ್ಟೇ ಒರಟಾಗಿ ಉತ್ತರಿಸಿದ.
ಬಾಕಿ ಸಂದರ್ಭದಲ್ಲಾದರೆ ಸೈನ್ಯಾಧಿಕಾರಿ ಹೇಳಿದಂತೆ ಒದ್ದು ತರುತ್ತಿದ್ದನೋ ಏನೋ, ಆದರೆ ಅಲ್ಲಿ ರಾಜನಿದ್ದುದರಿಂದ ಏನೂ ಮಾಡಲಾಗದೇ ಹಾಗೇ ಹಿಂತಿರುಗಿದನು. ರಾಜನಿಗೆ ಮುದುಕನ ವಿಷಯವಾಗಿ ಹೇಳುತ್ತ, “ಆ ಮುದುಕನು ಬಹಳ ವರಟನಿದ್ದಾನೆ. ಅದು ತನ್ನ ಬಾವಿ, ತಾನು ಯಾರಿಗೂ ನೀರನ್ನು ಕೊಡುವುದಿಲ್ಲ. ಅದರ ಬಳಿ ಯಾರೂ ಸುಳಿಯಬಾರದು ಎಂದು ಎಗರಾಡುತ್ತಿದ್ದಾನೆ” ಎಂದನು.
“ಈಗ ನಾನೇ ಪ್ರಯತ್ನಿಸುತ್ತೇನೆ”, ಎನ್ನುತ್ತಾ ರಾಜನು ಆ ವೃದ್ಧನ ಬಳಿಗೆ ಹೋಗಿ ಅತ್ಯಂತ ವಿನಯದಿಂದ, “ಮಹಾಸ್ವಾಮಿ, ನನಗೆ ತಾವು ಯಾರೆಂದು ತಿಳಿಯದು. ಆದರೆ ತಾವು ಈ ಬಾವಿಯ ಮಾಲೀಕರು, ಬಂದವರಿಗೆಲ್ಲ ನಿಮ್ಮ ಬಾವಿ ನೀರನ್ನು ಕೊಟ್ಟು, ಅವರ ಬಾಯಾರಿಕೆಯನ್ನು ನಿವಾರಿಸುವ ಪುಣ್ಯಾತ್ಮರು ಎಂಬುದು ತಿಳಿದಿದೆ. ನಾನು ನನ್ನ ಸೇವಕರು ತುಂಬಾ ಬಾಯಾರಿಕೆಯಿಂದ ಬಳಲುತ್ತಿದ್ದೇವೆ. ದಯಮಾಡಿ ಸ್ವಲ್ಪ ನೀರನ್ನು ಕೊಟ್ಟು ಕಾಪಾಡುತ್ತೀರಾ?” ಎಂದು ಪ್ರಾರ್ಥಿಸಿದನು.
ಕಣ್ಣಿಲ್ಲದ ಕುರುಡನಾದರೂ ಆ ವೃದ್ಧನ ಮೊಗವು ಸಂತೋಷದಿಂದ ಅರಳಿತು. ಆತನು ಅತಿಯಾದ ಶ್ರದ್ಧಾಭಕ್ತಿಯಿಂದ,
“ಸ್ವಾಮೀ, ತಾವು ಈ ದೇಶದ ಮಹಾರಾಜರಲ್ಲವೇ? ತಾವು ನೀರು ಕೇಳಿದರೆ ಇಲ್ಲ ಎನ್ನುವೆನೇ? ದಯಮಾಡಿ ಆಗಮಿಸಿ, ತಮ್ಮ ದಾಹ ಇಂಗುವತನಕ ನೀರು ಕುಡಿಯಿರಿ. ನಂತರ ತಮ್ಮ ಪರಿವಾರದೊಂದಿಗೆ ನನ್ನ ಅಳಿಲು ಆತಿಥ್ಯವನ್ನು ಸ್ವೀಕರಿಸಿ, ವಿಶ್ರಾಂತಿ ಪಡೆಯುವ ಕೃಪೆ ಮಾಡಬೇಕು” ಎಂದು ಪ್ರಾರ್ಥಿಸಿದನು.
ರಾಜ ಮತ್ತು ಅವನ ಸೈನಿಕರು ಮನಸಾರೆ ನೀರು ಕುಡಿದು ಹಣ್ಣು ಹಂಪಲು ತಿಂದು ಸಂತೃಪ್ತನಾದ ನಂತರ ರಾಜನು, “ಮಹಾತ್ಮ, ನಮ್ಮೆಲ್ಲರನ್ನೂ ಸಂತೃಪ್ತಿ ಪಡಿಸಿದುದಕ್ಕೆ ನಿನಗೆ ತುಂಬಾ ಧನ್ಯವಾದಗಳು. ಆದರೆ ನನ್ನ ಸೇವಕರ ಮಾತುಗಳಿಗೆ ಕಿವಿಗೊಡದ ನೀನು, ನನ್ನನ್ನು ರಾಜ ಎಂದು ಹೇಗೆ ಗುರುತಿಸಿದಿ” ಎಂದು ಕೇಳಿದನು.
ಅದಕ್ಕೆ ಆ ವೃದ್ಧನು, ‘ಪ್ರಭು, ನನಗೆ ನೋಡುವ ಕಣ್ಣಿಲ್ಲದಿದ್ದರೂ ಅರಿ೦ಯುವ ಹೃದಯವಿದೆ. ತಮ್ಮ ಸೇವಕರ ಮಾತುಗಳಲ್ಲಿ ಅಧಿಕಾರ, ಅಹಂಕಾರದ ಸೊಕ್ಕು ಕಾಣಿಸುತ್ತಿತ್ತು. ಆದರೆ ತಮ್ಮ ಸವಿ ಮಾತುಗಳಲ್ಲಿ ಆದರ್ಶ, ಆತ್ಮೀಯತೆ ಎದ್ದು ಕಾಣುತ್ತಿತ್ತು. ಒಬ್ಬ ರಾಜನಿಗಿರಬೇಕಾದ ವ್ಯಕ್ತಿತ್ವ ತಮ್ಮಲ್ಲಿ ಎದ್ದು ಕಾಣುತ್ತಿತ್ತು. ಅದರಿಂದ ನಾನು ನಿಮ್ಮನ್ನು ರಾಜ ಎಂದು ಗುರುತಿಸಿದೆ. ನೀವು ಇದೇ ರೀತಿ ನೂರ್ಕಾಲ ಬದುಕಿ ಬಾಳಿ’ ಎಂದು ಹಾರೈಸಿದನು.
ಅದಕ್ಕೇ ಅಲ್ಲವೇ ಹೇಳುವುದು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ನಾವಾಡುವ ಮಾತು ಮತ್ತು ಎಸಗುವ ಕಾರ್ಯಗಳು ನಮ್ಮ ವ್ಯಕ್ತಿತ್ವನ್ನು ನಿರೂಪಿಸುತ್ತವೆ.
ಕೃಪೆ; ಗಣೇಶ ವಂದಗದ್ದೆ ಸಾಗರ ( ಸಾಮಾಜಿಕ ಜಾಲತಾಣ)