ಲಕ್ಕೋ: ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜವಾನನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 7 ಮಂದಿ ಕನ್ವಾರಿಯರನ್ನು ಬಂಧಿಸಿರುವ ಘಟನೆ ಮಿರ್ಜಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀರ ಯೋಧನ ಮೇಲೆ ಹಲ್ಲೆ ಕೃತ್ಯವನ್ನು ಖಂಡಿಸಲಾಗುತ್ತಿದೆ.
ವರದಿಯನ್ವಯ ಸಿಆರ್‌ಪಿಎಫ್ ಜವಾನ ಗೌತಮ್ ಮಿರ್ಜಾಪುರದಿಂದ ಮಣಿಪುರಕ್ಕೆ ತೆರಳಲು ಬ್ರಹ್ಮಪುತ್ರ ರೈಲಿಗಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗೆ ಬಂದ ಕೆಲವು ಕನ್ವಾರಿಯರೊಂದಿಗೆ ಅವರು ವಾಗ್ವಾದ ನಡೆಸಿದರು. ಇದಾದ ಬಳಿಕ ಕನ್ವಾರಿಯರು ಜವಾನ ಗೌತಮ್ ಅವನ್ನು ಬೆನ್ನಟ್ಟಿ ನೆಲಕ್ಕೆ ಎಸೆದು ಕಾಲಿನಿಂದ ಒದ್ದು ಮನಬಂದಂತೆ ಥಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೇಸರಿ ಬಟ್ಟೆ ಧರಿಸಿದ ಕನ್ವಾರಿಯರ ಗುಂಪೊಂದು CRPF ಸಿಬ್ಬಂದಿಯ ಮೇಲೆ ದಾಳಿ ಮಾಡಿ ಥಳಿಸುತ್ತಿರುವುದು ಕಂಡುಬಂದಿದೆ.
ಗಲಾಟೆಯ ದೃಶ್ಯಗಳನ್ನು ರೈಲ್ವೆ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ನೋಡುತ್ತಾ ನಿಂತಿದ್ದರೆ ಹೊರತು ಜನರಾಗಲಿ ಅಥವಾ ಭದ್ರತಾ ಸಿಬ್ಬಂದಿಯಾಗಲಿ ಯಾರೂ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿಲ್ಲ.
ಈ ಘಟನೆಯ ನಂತರ, ಸಿಆರ್‌ಪಿಎಫ್ ಜವಾನ ಗೌತಮ್ ರೈಲು ಹತ್ತಿ ತನ್ನ ಗಮ್ಯಸ್ಥಾನಕ್ಕೆ ತೆರಳಿದರು ಎನ್ನಲಾಗಿದೆ.
ಇನ್ನೂ ಘಟನೆಯ ಬಗ್ಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಗೆ ಮಾಹಿತಿ ನೀಡಲಾಗಿದ್ದು, ಅವರು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು. ದಾಳಿಯಲ್ಲಿ ಭಾಗಿಯಾಗಿದ್ದ ಕನ್ವಾರಿಯಾಗಳ ವಿರುದ್ಧ ಆರ್‌ಪಿಎಫ್ ಪ್ರಕರಣ ದಾಖಲಿಸಿದೆ. ಸಂಪೂರ್ಣ ತನಿಖೆಯ ನಂತರ, ಸಿಆರ್‌ಪಿಎಫ್ ಜವಾನನನ್ನು ಥಳಿಸಿದ ಆರೋಪದ ಮೇಲೆ ಅವರಲ್ಲಿ ಏಳು ಜನರನ್ನು ಬಂಧಿಸಲಾಯಿತು.
Jai Jawan! 😢
— Satish Acharya (@satishacharya) July 19, 2025
What/who gives them so much 'courage' ? pic.twitter.com/f7GaL8rOs5
ಈ ಸಂಬಂಧ ಆರ್‌ಪಿಎಫ್ ಉಸ್ತುವಾರಿ ಇನ್ಸ್‌ಪೆಕ್ಟರ್ ಚಮನ್ ಸಿಂಗ್ ತೋಮರ್ ಅವರು ಪ್ರತಿಕ್ರಿಯಿಸಿ, ಸಿಆರ್‌ಪಿಎಫ್ ಜವಾನನನ್ನು ಥಳಿಸಿದ ಪ್ರಕರಣದಲ್ಲಿ ಏಳು ಕನ್ವಾರಿಯಾಗಳನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ವರ್ ಯಾತ್ರೆಯು ಕನ್ವಾರಿಯಾ ಅಥವಾ ಭೋಲೆ ಎಂದು ಕರೆಯಲ್ಪಡುವ ಶಿವ ಭಕ್ತರು ಪ್ರತಿ ವರ್ಷ ಆಚರಿಸುವ ವಾರ್ಷಿಕ ಹಿಂದೂ ತೀರ್ಥಯಾತ್ರೆಯಾಗಿದೆ.
ಈ ಯಾತ್ರೆಯು ಶ್ರಾವಣ ಮಾಸದಲ್ಲಿ ನಡೆಯುವುದಾಗಿದ್ದು, ಈ ವರ್ಷ ಜುಲೈ 11 ರಿಂದ ಪ್ರಾರಂಭವಾಗಿದೆ. ಸಂದರ್ಭದಲ್ಲಿ ಕನ್ವಾರಿಯರು ಶಿವನಿಗೆ ನೀರು ತುಂಬಿಸಿ ಅರ್ಪಿಸಲಿದ್ದಾರೆ.
ಈ ನಡುವೆ ಅನೇಕ ಕಡೆಗಳಿಂದ ಹೊಡೆದಾಟದ ಸುದ್ದಿಗಳು ಬರುತ್ತಿವೆ. ಅಂತೆಯೇ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದ ಹೊಡೆದಾಟದ ವೀಡಿಯೋವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.