ದೊಡ್ಡಬಳ್ಳಾಪುರ: ಇಲ್ಲಿನ ನಂದಿ ಗಿರಿಪ್ರದಕ್ಷಿಣೆ ಸೇವಾ ಸಮಿತಿಯು ಪ್ರತಿ ವರ್ಷ ಆಷಾಢ ಮಾಸದ ಸೋಮವಾರದಂದು ನಡೆಯುವ ನಂದಿ ಗಿರಿ ಪ್ರದಕ್ಷಿಣೆಗೆ (Nandigiri Pradaksine) ಇಂದು ಚಾಲನೆ ನೀಡಲಾಗಿದ್ದು, ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ 85ನೇ ವರ್ಷದ ಗಿರಿ ಪ್ರದಕ್ಷಿಣೆ ಸೋಮವಾರ ಬೆಳಗ್ಗೆ 7ಕ್ಕೆ ಚಾಲನೆ ನೀಡಲಾಯಿತು.
ಕುಡುವತಿ ಕ್ರಾಸ್, ಕಾರಹಳ್ಳಿ ಕ್ರಾಸ್, ಕಣಿವೇಪುರ, ನಂದಿ ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ ಗಾಂಧಿಪುರ, ಕಣಿವೆ ಬಸವಣ್ಣ ಸುಲ್ತಾನ್ ಪೇಟೆ ಮಾರ್ಗವಾಗಿ ದೇವಾಲಯ ತಲುಪುತ್ತದೆ. ಸುಮಾರು 16 ಕಿಮೀ ಸುತ್ತಳತೆಯ ಗಿರಿಯನ್ನು ಪ್ರದಕ್ಷಿಣೆ ಹಾಕಲಾಗುತ್ತಿದೆ.
ನಂದಿಗಿರಿ ಪ್ರದಕ್ಷಿಣೆಯೊಂದಿಗೆ ಈ ಕಣಿವೆಯ ಗೋಪಿನಾಥ ಗಿರಿ, ದಿಬ್ಬಗಿರಿ, ಬ್ರಹ್ಮಗಿರಿ, ಚೆನ್ನಗಿರಿಗಳ ದರ್ಶನವೂ ಇರುತ್ತದೆ. ಪ್ರದಕ್ಷಿಣೆಯ ನಡುವೆ ಉಪಹಾರ, ಹಾಗೂ ಪೂರ್ಣ ಪ್ರದಕ್ಷಿಣೆ ಆದ ನಂತರ ಭೋಜನದ ವ್ಯವಸ್ಥೆಯನ್ನು ಸಮಿತಿಯ ವತಿಯಿಂದ ಮಾಡಲಾಗಿದೆ.