Harithalekhani: ಜಗತ್ತಿನ ಸೃಷ್ಟಿಯಲ್ಲಿ ಹಾಲಿನ ಸಮುದ್ರದ ಮೇಲೆ ವಿಷ್ಣು ಮಲಗಿದ್ದಾನೆ. ಸಮುದ್ರವನ್ನು ಹಿಡಿದಿಟ್ಟುಕೊಳ್ಳುವ ಹಾಲಿನ ಪಾತ್ರೆ ಹಿಡಿದಿರುವ ಶಕ್ತಿಯೇ ಆದಿಪರಾಶಕ್ತಿ -ಜಗದ್ಧಾತ್ರಿ.
ಬ್ರಹ್ಮನ ಸೃಷ್ಟಿ ಶಕ್ತಿ, ವಿಷ್ಣುವಿನ ರಕ್ಷಿಸುವ ಶಕ್ತಿ ಹಾಗೆ ಶಿವನ ಲಯ ಮಾಡುವ ಶಕ್ತಿ, ಇದೆಲ್ಲದರ ಒಟ್ಟು ಶಕ್ತಿ ಆದಿಪರಾಶಕ್ತಿ. ದೇವಿಯ ಶಕ್ತಿ ಸಾತ್ವಿಕ ವಾದಾಗ ವಿಷ್ಣುವಿನೊಳಗೆ ನಿಂತು ರಕ್ಷಣೆ ಮಾಡುತ್ತಾಳೆ.
ರಾಜಸಿಕವಾದಾಗ ಬ್ರಹ್ಮನೊಳಗೆ ಸೇರಿ ಸೃಷ್ಟಿಗೆ ಕಾರಣವಾದರೆ, ಸರ್ವ ಶಕ್ತಿಯಾಗಿ ಶಿವನಲ್ಲಿ ಸೇರಿ ಲಯಕ್ಕೆ ಕಾರಣವಾಗುತ್ತಾಳೆ. ಒಬ್ಬಳೇ ದೇವಿಯ ವಿಭಿನ್ನ ಶಕ್ತಿಯ ಎಲ್ಲಾ ಶಕ್ತಿಯು ದೇವಿಯಾಗಿದ್ದಾಳೆ.
ವೇದವ್ಯಾಸರ ರಚಿತ, ದೇವಿ ಭಾಗವತ ಹೇಗೆ ಸೃಷ್ಟಿಯಾಯಿತು ಎಂಬುದಕ್ಕೆ ವ್ಯಾಸರೇ ಹೇಳುವಂತೆ, ಬಾಲರೂಪಿಯಾದ ವಿಷ್ಣು ವಟಪತ್ರ ಶಾಹಿಯಲ್ಲಿ ಮಲಗಿದ್ದಾನೆ. ಅವನಿಗೆ ಒಂದು ಆಲೋಚನೆ ಹುಟ್ಟಿತು ಸುತ್ತಲೂ ಕ್ಷೀರ ಸಮುದ್ರವಿದೆ. ನಾನು ಬಾಲಕನ ರೂಪದಲ್ಲಿ ಇಲ್ಲಿಗೆ ಹೇಗೆ ಬಂದೆ. ಯಾವ ಕಾರ್ಯ ನೆರವೇರಿಸಲು ನಾನು ಇಲ್ಲಿದ್ದೇನೆ. ನನ್ನ ರಚನೆ ಹೇಗಾಯಿತು? ಇಂಥ ಹಲವಾರು ಪ್ರಶ್ನೆಗಳು ಮೂಡಿ ಉತ್ತರಕ್ಕಾಗಿ ಚಿಂತಿಸತೊಡಗಿದ ಇಂತಹ ಒಂದು ಚಿಂತನೆ ಬರಲು ಸಾಕ್ಷಾತ್ ದೇವಿಯೇ ಪ್ರೇರಣೆಯಾಗಿದ್ದಳು.
ಆಗ ಬಂದ ಯೋಚನೆ ಈ ಜಗತ್ತೆಲ್ಲವೂ ನಾನೇ ಆಗಿದ್ದೇನೆ. ನನ್ನನ್ನು ಬಿಟ್ಟು ಅವಿನಾಶಿಯಾದ್ದು ಏನು ಇಲ್ಲ ಎಂಬ ಪ್ರಚೋದನೆಯನ್ನು ದೇವಿ ಕೊಟ್ಟಳು. ಅಂತ ದೇವಿಯ ಸ್ವರೂಪವನ್ನು ಮನಸ್ಸಿನಲ್ಲಿ ತಂದುಕೊಂಡ ವಿಷ್ಣು ಅವುಗಳನ್ನು ನಿಧಾನವಾಗಿ ತಿಳಿಯುತ್ತಾ ಅವುಗಳನ್ನು ತನ್ನ ನಾಭಿ ಕಮಲದಿಂದ ಹುಟ್ಟಿದ ಬ್ರಹ್ಮನಿಗೆ ಮೊಟ್ಟಮೊದಲು ಬೋಧಿಸಿದನು.
ಬ್ರಹ್ಮನು ತನ್ನ ಮಾನಸ ಪುತ್ರ ನಾರದರಿಗೆ ತಿಳಿಸಿದನು. ನಂತರದ ದಿನಗಳಲ್ಲಿ ನಾರದರು ಈ ದೇವಿ ಮಹಾತ್ಮೆ ಕಥೆಯನ್ನು ವ್ಯಾಸರಿಗೆ ಬೋಧಿಸಿದರು. ವ್ಯಾಸರು ಇವುಗಳನ್ನು ಸಂಕಲಿಸಿ “ದೇವಿ ಭಾಗವತ” ವನ್ನು ರಚಿಸಿದರು ಎಂಬುದಾಗಿ ವ್ಯಾಸರು ತಿಳಿಸಿದ್ದಾರೆ.
ಸತ್ಯವತಿ ಪರಾಶರ ಪುತ್ರರಾದ ವೇದವ್ಯಾಸರಿಗೆ ಇಂಥ ಹೊಸ ಪರಿಕಲ್ಪನೆ ಮೂಡ ಲು ಕಾರಣ, ಅಗಾಧ ಜ್ಞಾನದ ಗಣಿಯಾದ ವ್ಯಾಸರಿಗೆ, ತಮ್ಮಲ್ಲಿದ್ದ ಜ್ಞಾನದ ಸಂಪತ್ತ ನ್ನು ದಾಟಿಸಲು ಒಬ್ಬ ಶಿಷ್ಯ ಬೇಕು ಎಂದುಕೊಂಡರು.
ನಂತರ ಯೋಚಿಸಿದರು ಶಿಷ್ಯನಿಗೆ ಬೋಧಿಸಿದರೆ ಕ್ರಮೇಣ ಅದು ಅಷ್ಟಕ್ಕೆ ನಿಲ್ಲಬಹುದು. ಅದನ್ನು ಮುಂದಕ್ಕೆ ಬೆಳೆಸುವಂತಹ ಮುಂದಿನ ಪೀಳಿಗೆಗೂ ಉಪಯುಕ್ತವಾಗುವಂತೆ ಅದನ್ನು ತಲುಪಿಸಲು ತನ್ನದೇ ಒಂದು ಗಂಡು ಸಂತಾನ ಇದ್ದರೆ ಎಂಬ ಯೋಚನೆ ಬಂದಿತು ಆದರೆ ಅದು ಹೇಗೆ ಪಡೆಯುವುದು ಎಂದು ಯೋಚಿಸುತ್ತಾ ತಪಸ್ಸು ಮಾಡಲು ಮಂದರ ಪರ್ವತಕ್ಕೆ ಹೋದರು.
ನಾರದರು ಅಲ್ಲಿಗೆ ಬಂದರು. ಅವರಿಗೆ ನಮಸ್ಕರಿ ಸಿದ ವ್ಯಾಸರು ತಮ್ಮ ಆಲೋಚನೆಯನ್ನು ಸಾಕಾರ ಗೊಳಿಸಲು ಗಣಪತಿ -ವಿಷ್ಣು- ಶಿವ- ಪಾರ್ವತಿ -ಸ್ಕಂದ ಇವರಲ್ಲಿ ನಾನು ಯಾರನ್ನು ಕುರಿತು ತಪಸ್ಸು ಮಾಡಿದರೆ ಶ್ರೇಷ್ಠ ಸಂತಾನ ಸಿಗುವುದು ಎಂದು ಕೇಳಿದರು.
ನಾರದರು ಹೇಳಿದರು, ನೀನು ಕೇಳಿದ ಪ್ರಶ್ನೆಯನ್ನೇ ವಿಷ್ಣುವಿನ ನಾಭಿ ಕಮಲದಲ್ಲಿ ಬಂದ ಬ್ರಹ್ಮ, ವಿಷ್ಣುವನ್ನೇ ಕೇಳ ಬೇಕೆಂಬ ಯೋಚನೆ ಬಂದು ವೈಕುಂಠಕ್ಕೆ ಬಂದಾಗ ಸರ್ವ ಶಕ್ತನಾಗಿದ್ದ ವಿಷ್ಣು ಧ್ಯಾನಸ್ಥ ನಾಗಿ ತಪಸ್ಸು ಮಾಡುವುದನ್ನು ನೋಡಿದ ಬ್ರಹ್ಮ ಬೆರಗಾದನು.
ಬ್ರಹ್ಮ ಹುಟ್ಟಿರುವುದು ವಿಷ್ಣುವಿನ ನಾಭಿಕಮಲದ ಹೂವಿನಲ್ಲಿ ಯಾವಾಗಲೂ ಹೂವಿನ ಮೇಲೆ ಬ್ರಹ್ಮ ಕುಳಿತಿರುತ್ತಾನೆ. ಹೀಗಾಗಿ ವಿಷ್ಣು ಸರ್ವ ಶ್ರೇಷ್ಠ. ವಿಷ್ಣುವಿನ ಹತ್ತಿರ ಹೇ ವಿಷ್ಣು ಜಗತ್ತಿನ ಸೃಷ್ಟಿಕರ್ತ ಸಕಲಕಾರಕ್ಕೂ ನೀನು ಪ್ರಭು, ಅಲ್ಲದೆ ಸೃಷ್ಟಿ ಕಾರ್ಯ ಮಾಡುವ ನಾನು ಕೂಡ ನಿನ್ನ ನಾಭಿ ಕಮಲದ ಮೇಲೆ ಕುಳಿತಿರುವೆ. ನಿನ್ನನ್ನೇ ಸರ್ವ ಶಕ್ತ ಎಂದುಕೊಂಡಿರುವೆ. ಆದರೆ ನೀನು ಯಾರನ್ನು ಕುರಿತು ತಪಸ್ಸು ಮಾಡುತ್ತಿರುವೆ ಎಂದು ಕೇಳಿದನಂತೆ.
ಬ್ರಹ್ಮನ ಪ್ರಶ್ನೆಗೆ ಉತ್ತರಿಸುತ್ತಾ ವಿಷ್ಣು ಹೇಳಿದ ನಾನು ನನ್ನ ಮನಸ್ಸಿನ ವಿಚಾರವನ್ನು ಹೇಳುತ್ತಿರುವೆ ಕೇಳು. ಬ್ರಹ್ಮ ನೀನು ಸೃಷ್ಟಿ ಮಾಡುತ್ತಿರುವೆ, ನಾನು ಪಾಲಿಸುತ್ತಿರುವೆ, ಶಂಕರ ಸಂಹಾರಕ ಆಗಿದ್ದಾನೆ. ಉಳಿದ ದೇವತೆಗಳು- ದಾನವರು -ಮಾನವರು ಎಲ್ಲರೂ ಹಾಗೆ ತಿಳಿದಿದ್ದಾರೆ. ಆದರೆ ವೇದಗಳನ್ನು ಅರಿತು ಪಾರಂಗತರಾದ ಋಷಿಮುನಿಗಳು, ಸೃಷ್ಟಿ- ಸ್ಥಿತಿ- ಸಂಹಾರ ಮಾಡುವ ಏಕೈಕ ಶಕ್ತಿ ಎಂದರೆ ಶಕ್ತಿ ದೇವತೆಯಾದ ಆದ್ಯಾಶಕ್ತಿಯಿಂದ ದೊರೆತಿರುವುದು ಎಂದಿದ್ದಾರೆ.
ವೇದವ್ಯಾಸರು ದೇವಿ ಭಾಗವತದಲ್ಲಿ ತಿಳಿಸಿರುವಂತೆ ಪ್ರಪಂಚದಲ್ಲಿ ಯಾವುದೇ ಜ್ಞಾನ- ಸೃಷ್ಟಿ ಅಥವಾ ಸಂಹಾರ ಆಗಲಿಲ್ಲ ಎಲ್ಲೆಡೆ ಅಂಧಕಾರ ತುಂಬಿತ್ತು ಆಗ ಆದಿಶಕ್ತಿ ಒಂದು ಪ್ರಕಾಶ ರೂಪದಲ್ಲಿ ಅವತಾರ ತೆಗೆದುಕೊಂಡಳು. ಆ ಪ್ರಕಾಶದಿಂದ. ಸೃಷ್ಟಿ ಕಾರ್ಯಕ್ಕೆ ಬ್ರಹ್ಮ, ಪೋಷಣೆಗೆ ವಿಷ್ಣು ಹಾಗೂ ಲಯಕಾರಕ ಶಿವ ಹುಟ್ಟಿದರು.
ಆದ್ಯಾ ಶಕ್ತಿಯ ಕೊರತೆ ಯಾದರೆ ಸೃಷ್ಟಿ -ಸ್ಥಿತಿ- ಲಯ ಈ ಕಾರ್ಯವನ್ನು ನಮ್ಮಿಂದ ಮಾಡಲು ಸಾಧ್ಯವಿಲ್ಲ. ಆದ್ಯಾಶಕ್ತಿಗೆ ಅಧೀನನಾಗಿ ನಾನು ಪ್ರಳಯ ಕಾಲದಲ್ಲಿ ಶೇಷಶಾಹಿಯ ಮೇಲೆ ಮಲಗಿರುತ್ತೇನೆ. ಸೃಷ್ಟಿ ಮಾಡುವ ಅವಕಾಶ ಬಂದಾಗ ಏಳುತ್ತೇನೆ. ಹಾಗೆ ಮಲಗಿದಾಗ ಆದ್ಯಾಶಕ್ತಿಯನ್ನು ಧ್ಯಾನ ಮಾಡುತ್ತೇನೆ.
ಇನ್ನೊಂದು ಪ್ರಕಾರ ಶಿವನು ನಿಶ್ಚೇತನಾಗಿ ಮಲಗಿರುವಾಗ ಕಾಳಿ ಮಾತೆ ತನ್ನ ಕಾಲನ್ನು ಶಿವನ ಎದೆಯ ಮೇಲಿಟ್ಟು ನಿಂತಿರುವುದನ್ನು ನೋಡಿದರೆ ಗಾಬರಿ ಯಾಗುತ್ತದೆ. ಆದರೆ ಶಿವನೊಳಗಿನ ಶಕ್ತಿಯೇ ಪಾರ್ವತಿ.
ಶಿವನು ಪ್ರಬಲವಾದ ಎಲ್ಲಾ ಶಕ್ತಿಗಳನ್ನು ( ಪೆಟ್ರೋಮ್ಯಾಕ್ಸ್ ನಂತೆ) ತನ್ನೊಳಗೆ ಇಟ್ಟುಕೊಂಡು ಧ್ಯಾನಸ್ಥನಾಗಿರುತ್ತಾನೆ ಆಧ್ಯಾಶಕ್ತಿ ಅವನಲ್ಲಿ ಶಕ್ತಿ ತುಂಬಿದಾಗ ನಟರಾಜನಾಗಿ ನಾಟ್ಯ ಆರಂಭಿಸುತ್ತಾನೆ ಆಗ ಅವನಲ್ಲಿರುವ ಶಕ್ತಿಯೆಲ್ಲ ಹೊರಹೊಮ್ಮುತ್ತದೆ.
ಆದ್ಯಾಶಕ್ತಿ ತ್ರಿಮೂರ್ತಿಗಳ ಒಳಗಿನ ಮೂಲ ಶಕ್ತಿ. ಸರ್ವ ಸೃಷ್ಟಿಯ ಮೂಲಶಕ್ತಿ ಆದಿಶಕ್ತಿ ಎಲ್ಲಾ ದೇವತೆಗಳು ಬ್ರಹ್ಮ -ವಿಷ್ಣು ಮತ್ತು ಶಿವ ತ್ರಿಮೂರ್ತಿಗಳ ಶಕ್ತಿಯ ಆಧಾರವೇ ಆದಿಶಕ್ತಿ. ಒಮ್ಮೆ ತ್ರಿಮೂರ್ತಿಗಳು ತಮ್ಮ ಕೆಲಸ ಗಳನ್ನು ಮಾಡಲಾಗದೆ ಇರುವ ಪರಿಸ್ಥಿತಿ ಬಂತು.
ಬ್ರಹ್ಮ ಸೃಷ್ಟಿಸಲು ಆಗಲಿಲ್ಲ ವಿಷ್ಣು ವಿಶ್ರಾಂತಿಯಲ್ಲಿ, ಶಿವನು ತಪಸ್ಸಿನಲ್ಲಿ, ಹೀಗೆ ಯಾವುದು ನಡೆಯದಂತೆ ಇದ್ದಾಗ ಆದ್ಯಾಶಕ್ತಿ ತ್ರಿಮೂರ್ತಿಗಳ ಅಂತರೊಳಗಿದ್ದ ಶಕ್ತಿಯನ್ನು ಜಾಗೃತಗೊಳಿಸಿದಳು. ಈ ಶಕ್ತಿ ಯೇ “ಆದಿ ಪರಾಶಕ್ತಿ” ವಿಶ್ವವನ್ನು ಚಲಿಸುವಂತೆ ಮಾಡುವ ಚೇತನಾ ಶಕ್ತಿ. ಇದಿಲ್ಲದೆ ಬ್ರಹ್ಮ ಸೃಷ್ಟಿಸಲಾರ ವಿಷ್ಣು ಪೋಷಿಸಲಾರ ಶಿವನು ಸಂಹಾರ ಮಾಡಲಾರ.
ಯಾ ದೇವಿ ಸರ್ವಭೂತೇಶು ಶಕ್ತಿ ರೂಪೇಣ ಸಂಸ್ಥಿತ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!!
ತ್ರಿಮೂರ್ತಿಗಳ ಶಕ್ತಿ ರೂಪ ಅಂದರೆ ಬ್ರಹ್ಮನಿಗೆ ಸರಸ್ವತಿ, ವಿಷ್ಣುವಿಗೆ ಲಕ್ಷ್ಮಿ ಹಾಗೂ ಶಿವನಿಗೆ ಪಾರ್ವತಿ ಅಥವಾ ದುರ್ಗಾ. ಈ ಮೂರು ಶಕ್ತಿಗಳೆಲ್ಲಾ ಒಬ್ಬ ಆದಿಶಕ್ತಿಯ ವಿಭಿನ್ನ ರೂಪಗಳು. ದೇವಿಯು ಒಬ್ಬಳೇ ಆದರೆ ಅವಳು ವಿಭಿನ್ನ ಕಾರ್ಯಗಳಿಗೆ ವಿಭಿನ್ನ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತಾಳೆ.
ಸಂದೇಶ:- ಶಕ್ತಿ ಇಲ್ಲದ ತ್ರಿಮೂರ್ತಿಗಳು ಶೂನ್ಯ, ಶಕ್ತಿಯು ಚೇತನತೆ -ಕ್ರಿಯಾಶೀಲತೆ ಪ್ರೇರಣೆಯ ಮೂಲ. ಆಧ್ಯಾದೇವಿ ಇಡೀ ಬ್ರಹ್ಮಾಂಡವನ್ನು ನಿರ್ವಹಿಸುತ್ತಿರುವ ಶಕ್ತಿ ಯಾವುದೋ ಒಂದಲ್ಲ ನಾವೆಲ್ಲ ನಮ್ಮೆಲ್ಲರಲ್ಲೂ ನೆಲೆಸಿರುವ ಜೀವಶಕ್ತಿ.
ಶಿವನ ಶಕ್ತಿ ಪಾರ್ವತಿ, ವಿಷ್ಣುವಿನ ಶಕ್ತಿ ಲಕ್ಷ್ಮಿ, ಬ್ರಹ್ಮನ ಶಕ್ತಿ ಸರಸ್ವತಿ ಈ ಮೂರು ಶಕ್ತಿಗಳ ಮೂಲತತ್ವ ಆಧ್ಯಾ ಶಕ್ತಿ. ಈ ಆದ್ಯಾ ಶಕ್ತಿಯೇ ಬ್ರಹ್ಮಾಂಡದ ಮೊದಲ ಬೆಳಕು ಇವಳೇ ಪ್ರಪಂಚದ ತಾಯಿ.
ಬರಹ ಕೃಪೆ: ಆಶಾ ನಾಗಭೂಷಣ ( ಸಾಮಾಜಿಕ ಜಾಲತಾಣ)