ದೊಡ್ಡಬಳ್ಳಾಪುರ: ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಮತ್ತು ರೈತರು ತಯಾರಿಸುವ ಸಿರಿಧಾನ್ಯದ ಉತ್ಪನ್ನಗಳ ಮೌಲ್ಯವರ್ಧಿತ ಪದಾರ್ಥಗಳ ಕುರಿತು ಜನಸಾಮಾನ್ಯರ ಅರಿವು ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ-2026 ರ ಅಂಗವಾಗಿ “ಸಿರಿಧಾನ್ಯ (Siridhanya) ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಫರ್ಧೆ”ಯನ್ನು ಫೆಬ್ರವರಿ 28 ರಂದು ಬೆಳಿಗ್ಗೆ 10.30 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಜಿಲ್ಲೆಯ ಆಸಕ್ತ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಲು ನೋಂದಣಿಗಾಗಿ ಫೆ. 26 ರ ಮಧ್ಯಾಹ್ನ 03 ಗಂಟೆಯೊಳಗಾಗಿ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು ಭರ್ತಿ ಮಾಡಿ ತಮ್ಮ ಭಾವಚಿತ್ರದೊಂದಿಗೆ ಮಾಹಿತಿಯನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಅರ್ಜಿ ನಮೂನೆ ಸಲ್ಲಿಸಬಹುದು.
ಪ್ರತಿ ಸ್ಫರ್ಧೆಗೆ ಒಂದೇ ತಿನಿಸು ಮಾಡಲು (ಸಸ್ಯಹಾರಿ ಸಿರಿಧಾನ್ಯ ತಿನಿಸುಗಳಿಗೆ ಮಾತ್ರ) ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿನಿಸು ಮಾಡಲು ಅವಕಾಶವಿದ್ದು, ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ಅಧಿಕೃತ ತರಬೇತಿ/ಪದವಿ/ಶಿಕ್ಷಣ ಪಡೆದವರನ್ನು ಹೊರತುಪಡಿಸಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಸ್ಫರ್ಧಿಸಬಹುದಾಗಿದೆ.
ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯದ ಖಾದ್ಯ ಪ್ರದರ್ಶಿಸುವುದಕ್ಕೆ ಬಳಸುವ ಸಾಮಗ್ರಿಗಳ ಮಾದರಿಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಒಂದು ಸಿಹಿ, ಖಾರ ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ ಮತ್ತು ಮರೆತುಹೋದ ಖಾದ್ಯಗಳ ತಿನಿಸನ್ನು ಆಯ್ಕೆ ಮಾಡಲಾಗುತ್ತದೆ.
ಜಿಲ್ಲಾ ಮಟ್ಟದ ಪ್ರಥಮ ಸ್ಥಾನಕ್ಕೆ ಸಿಹಿ, ಖಾರದ ತಿನಿಸು (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಅಥವಾ ಮರೆತುಹೋದ ಖಾದ್ಯದ ತಿನಿಸುಗಳಿಗೆ ತಲಾ ರೂ. 5000/-, ದ್ವಿತೀಯ ಸ್ಥಾನಕ್ಕೆ ರೂ.3000/-, ತೃತೀಯ ಸ್ಥಾನಕ್ಕೆ ರೂ. 2000/- ಗಳನ್ನು ಬಹುಮಾನ ನೀಡಲಾಗುತ್ತದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಜಿ. ಕಲಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.