ಬೆಂಗಳೂರು: ಕೋವಿಡ್-19 ತಂದೊಡ್ಡಿರುವ ಸಂಕಷ್ಟ ಮತ್ತು ಆರ್ಥಿಕ ಹಿಂಜರಿತದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಧ್ಯಾಹ್ನ 12 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ 8ನೇ ಬಜೆಟ್ ಮಂಡಿಸಲು ತಯಾರಾಗಿದ್ದು, ಈ ಸಲದ ಬಿಜೆಪಿ ಸರಕಾರದ ಎರಡನೇ ಬಜೆಟ್ ಸೋಮವಾರ ಮಂಡನೆಯಾಗುತ್ತಿದೆ. ಈ ಸಲವೂ ಕಳೆದ ಬಾರಿಯಂತೆಯೇ ಬಿ.ಎಸ್.ಯಡಿಯೂರಪ್ಪರ ಮುಂದೆ ಸವಾಲುಗಳ ಬೆಟ್ಟವೇ ಇದ್ದು, ಹೇಗೆ ನಿಭಾಯಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.
ಪ್ರವಾಹ ಹಾಗೂ ಬರ ಪರಿಸ್ಥಿತಿ ಕಾರಣದಿಂದ 2020-21ರ ಮುಂಗಡ ಪತ್ರ ಮಂಡಿಸುವಾಗಲೂ ಇಕ್ಕಟ್ಟಿನ ಪರಿಸ್ಥಿತಿಯಿತ್ತು. ಅದರ ಬೆನ್ನಿಗೇ ಕೊರೊನಾ ಬಂದದ್ದರಿಂದ ರಾಜ್ಯದ ಅಭಿವೃದ್ಧಿ ಚಟುವಟಿಕೆಯೇ ನಿಂತು ಹೋಗುವಂತಾಗಿತ್ತು. ಆರ್ಥಿಕ ವರ್ಷದ ಪ್ರಾರಂಭದಲ್ಲೇ ಕೊರೊನಾದಿಂದಾಗಿ ಹೊಡೆತ ಬಿದ್ದಿದ್ದರಿಂದ ಏಪ್ರಿಲ್, ಮೇನಲ್ಲಿ ತೆರಿಗೆ ಸಂಗ್ರಹದಲ್ಲಿ ಬಹುತೇಕ ಶೂನ್ಯ ಸಾಧನೆಯಾಗಿತ್ತು. ಆ ಬಳಿಕ ನಿಧಾನವಾಗಿ ಚೇತರಿಕೆ ಕಂಡಿದೆ.
ಈ ನಡುವೆಯೂ ಸ್ವಂತ ತೆರಿಗೆ ರಾಜಸ್ವದಲ್ಲಿ 2021ರ ಜನವರಿ ಅಂತ್ಯದವರೆಗೆ ಶೇ.67.62ರಷ್ಟು ಮಾತ್ರ ಗುರಿ ಸಾಧನೆಯಾಗಿದೆ. ವಾಡಿಕೆಯಂತೆ ಈ ಅವಧಿಯಲ್ಲಿ ಶೇ.80ಕ್ಕೂ ಹೆಚ್ಚು ತೆರಿಗೆ ಸಂಗ್ರಹವಾಗಬೇಕಿತ್ತು. ಇದು ರಾಜ್ಯದ ಆರ್ಥಿಕ ಸ್ಥಿತಿ ಚಿಂತಾಜನಕ ಆಗಿರುವುದರುವುದು ಸುಳ್ಳಲ್ಲ.
ಈ ಸನ್ನಿವೇಶದಲ್ಲಿ ಹೊಸ ಬಜೆಟ್ ಕಟ್ಟುವುದು ಸವಾಲಿನದ್ದಾಗಿದೆ. ಕೋವಿಡ್ ನಂತರದಲ್ಲಿ ಈಗಷ್ಟೇ ವ್ಯಾಪಾರ, ವಹಿವಾಟು ಚುರುಕುಗತಿ ಪಡೆಯುತ್ತಿದೆ. ಆದರೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಅಗತ್ಯ ವಸ್ತುಗಳ ದರ ಏರಿಕೆಯೂ ಆಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ ತೆರಿಗೆ ಹೆಚ್ಚಳ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರೂ ತೆರಿಗೆ ಹೆಚ್ಚಳವಿಲ್ಲ ಎಂಬ ಭರವಸೆ ನೀಡಿದ್ದಾರೆ. ಆದರೆ ಬಜೆಟ್ ಮೇಲೆ ಜನತೆಯ ನಿರೀಕ್ಷೆ ಹೆಚ್ಚಿರುವುದು ಸುಳ್ಳಲ್ಲ.
ಬಜೆಟ್ ಮಂಡನೆ ನೇರ ಪ್ರಸಾರವನ್ನು ಹರಿತಲೇಖನಿಯಲ್ಲಿ ವೀಕ್ಷಿಸಿ.