ದೊಡ್ಡಬಳ್ಳಾಪುರ: ರಾತ್ರಿಯ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಮೂವರನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ.
ವಿವರ: ಮೇ. 21 ರಂದು ರಾತ್ರಿ 9:15ರ ವೇಳೆ ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್ ನಲ್ಲಿ ಬಂದ ಮೂರು ಜನ ಅಪರಿಚಿತ ವ್ಯಕ್ತಿಗಳು ದೊಡ್ಡಬಳ್ಳಾಪುರ-ಡಾಬಸ್‍ಪೇಟೆ ರಸ್ತೆಯ ಕೂಗೇನಹಳ್ಳಿ ಕಾಲೋನಿ-ರಾಮೇಶ್ವರ ಗೇಟ್ ನಡುವೆ ನಾರಾಯಣಸ್ವಾಮಿ ಮತ್ತು ಆತನ ಸಂಬಂದಿ ಗಂಗಾಧರ್ ರವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಿ ಅಡ್ಡಹಾಕಿ ಅವರ ಬಳಿ ಇದ್ದ ಸ್ಪೆಂಡರ್ ಪ್ಲಸ್ ಬೈಕ್, ರೂ. 20,000 ನಗದು, ಎರಡು ಮೊಬೈಲ್ ಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರಾದ ರವಿ ಡಿ ಚನ್ನಣ್ಣನವರ್, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ, ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ಟಿ.ರಂಗಪ್ಪ ರವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ವೃತ್ತದ ಸಿಪಿಐ ಎಂ.ಬಿ.ನವೀನ್‍ಕುಮಾರ್, ಪಿ.ಎಸ್.ಐ. ಗಜೇಂದ್ರ ವಿ. ಹಾಗೂ ಸಿಬ್ಬಂದಿಯವರಾದ ಮಂಜುನಾಥ್,ಹುಸೇನ್, ನವೀನ್, ಕುಮಾರ್, ತಾಂತ್ರಿಕ ವಿಭಾಗದ ಉಮೇಶ್, ಪಾಂಡುರಂಗ ರವರುನ್ನೋಳಗೊಂಡ ವಿಶೇಷ ತಂಡವನ್ನು ರಚಿಸಿದರು.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ವಿಶೇಷ ತಂಡ ಕೃತ್ಯ ನಡೆದ ಒಂದು ವಾರದ ಒಳಗೆ ಶಾಂತಿನಗರ ಸೋಮಶೇಖರ, ಸಂಜಯನಗರ ಚಂದ್ರಕೀರ್ತಿ, ಹುಲಿಯೂರು ದುರ್ಗಾದ ಎಸ್.ವಿನುತ್ ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿದೆ.
ಆರೋಪಿಗಳ ಪೈಕಿ ಎ1 ಆರೋಪಿ ಸೋಮಶೇಖರನ ಮೇಲೆ ದೊಡ್ಡಬಳ್ಳಾಪುರ, ಯಲಹಂಕ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ ಪ್ರಯತ್ನ ಪ್ರಕರಣಗಳು ದಾಖಲಾಗಿದ್ದು, ಆರೋಪಿ ಜನವರಿ 2ನೇ ವಾರದಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಒಂದು ಆಕ್ಟೀವ್ ಹೋಂಡಾ ಮೋಟಾರ್ ಸೈಕಲ್ ಕಳವು ಮಾಡಿ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಕೃತ್ಯಕ್ಕೆ ಉಪಯೋಗಿಸಿದ್ದು, ಆರೋಪಿಗಳ ಕಡೆಯಿಂದ ಸುಲಿಗೆ ಮಾಡಲು ಉಪಯೋಗಿಸಿದ್ದ ಒಂದು ಆಕ್ಟೀವ್ ಹೋಂಡಾ ಮೋಟಾರ್ ಸೈಕಲ್, ಸುಲಿಗೆ ಮಾಡಿದ್ದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಮತ್ತು ಒಂದು ರೆಡ್‍ಮಿ ಮೊಬೈಲ್ ಫೋನ್ ಅಮಾನತ್ತು ಪಡಿಸಿಕೊಂಡಿದ್ದಾರೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….