ದೊಡ್ಡಬಳ್ಳಾಪುರ: ವಿಶ್ವವಿದ್ಯಾಲಯಗಳಲ್ಲಿ ಡಾ.ಸಿದ್ಧಲಿಂಗಯ್ಯ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿ.ಗುರುರಾಜಪ್ಪ ಒತ್ತಾಯಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ತಾಲ್ಲೂಕು ಛಲವಾದಿ ಮಹಾಸಭಾ ಆಯೋಜಿಸಿದ್ದ, ಬಂಡಾಯ ಸಾಹಿತಿ ಡಾ.ಸಿದ್ಧಲಿಂಗಯ್ಯ ನವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಸರ್ಕಾರವು ತೋರಿಸಿದ ಕಾಳಜಿಗೆ ಧನ್ಯವಾದಗಳು. ಡಾ.ಸಿದ್ಧಲಿಂಗಯ್ಯ ಅವರು ದೇಶ ಕಂಡ ಮೇರು ವ್ಯಕ್ತಿ ಮತ್ತು ವ್ಯಕ್ತಿತ್ವ. ದಲಿತ-ಹಿಂದುಳಿದ ಹಾಗು ದುಡಿಯುವ ಸಮುದಾಯಗಳ ಏಳಿಗೆಗಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು.
ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸಿದ ಸಿದ್ಧಲಿಂಗಯ್ಯನವರು ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಪ್ರಮುಖರು. ತಮ್ಮ ಬದುಕಿನುದ್ದಕ್ಕೂ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಅವರು ಕನ್ನಡ ನಾಡಿನ ನಿಜದ ನಾಡೋಜ ಎಂದ ಅವರು. ಇಂಥ ಮೇರು ವ್ಯಕ್ತಿ ಡಾ.ಸಿದ್ಧಲಿಂಗಯ್ಯನವರು ಈಗ ನಮ್ಮನ್ನು ಅಗಲಿದ್ದು ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರ ಸಕಲ ಗೌರವಗಳೊಂದಿಗೆ ನಡೆಸಿಕೊಂಡಿರುವುದು ಸರಿಯಷ್ಟೇ. ಆದರೆ, ಅವರು ಮುಂದಿನ ತಲೆಮಾರಿನ ಪ್ರೇರಣಾ ಶಕ್ತಿಯಾಗಿರುವುದರಿಂದ ಹಾಗು ಅವರ ವಿಚಾರಗಳು ಕಾಲಾಂತರದಲ್ಲಿಯೂ ಪ್ರಸ್ತುತವಾಗಿರುವುದರಿಂದ ಅವರ ಹೆಸರಿನಲ್ಲಿ ಒಂದು ಸ್ಮಾರಕವನ್ನು ಮಾಡುವ ಅಗತ್ಯವಿದೆ. ಈ ಕುರಿತು ದಲಿತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ ಎಂದರು.
ಡಾ.ಸಿದ್ಧಲಿಂಗಯ್ಯ ಅವರ ಹೆಸರಿನಲ್ಲಿ ಒಂದು ಸ್ಮಾರಕ ನಿರ್ಮಿಸಲು ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ‘ಡಾ.ಸಿದ್ಧಲಿಂಗಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು’ ಹಾಗು ಅವರಿಗೆ ಮರಣೋತ್ತರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಹಾಸಭಾದ ಮಾಜಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜುಸಣ್ಣಕ್ಕಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸೊಣಪನಹಳ್ಳಿ ರಮೇಶ್, ಸಮುದಾಯದ ಮುಖಂಡರಾದ ಹನುಮಂತರಾಯಪ್ಪ, ಆಂಜನಮೂರ್ತಿ, ಛಲವಾದಿ ಸುರೇಶ್, ಪುನೀತ್, ಮೂರ್ತಿ ಉದಯ್ ಮುಂತಾದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….