ದೊಡ್ಡಬಳ್ಳಾಪುರ: ಭಾರತದಲ್ಲಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಈಗ ಹೊಸ ಚುರುಕು ಸಿಕ್ಕಿದೆ. ಲಸಿಕೆ ಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಜವಾಬ್ದಾರಿಯನ್ನು ಹಿಂಪಡೆದು ತಾನೇ ಖರೀದಿಸಿ ಹಂಚಿಕೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ದೇಶಾದ್ಯಂತ ಕೋವಿಡ್ ಲಸಿಕೆ ಕಾರ್ಯ ಕ್ಷಿಪ್ರ ಗತಿಯಲ್ಲಿ ಸಾಗಿದೆ.
ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಹಲವು ಗೊಂದಲ, ಸಮಸ್ಯೆಗಳ ನಡುವೆಯೂ ಒಂದು ಲಕ್ಷ ಗುರಿಯನ್ನು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಾಲೂಕು ಆಡಳಿತ ಸಾಧಿಸಿದೆ.
ತಾಲೂಕು ಆಡಳಿತ ನೀಡಿರುವ ಮಾಹಿತಿ ಅನ್ವಯ ಜುಲೈ 2 ರ ಅಂತ್ಯದ ವೇಳೆಗೆ ಕೋವಿಡ್ ಶೀಲ್ಡ್ 90749, ಕೋವ್ಯಾಕ್ಸಿನ್ 10554 ಒಟ್ಟು 101303 ಲಸಿಕೆ ಡೋಸ್ಗಳನ್ನ ಹಾಕಲಾಗಿದೆ.
ಈಗಾಗಲೇ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಚುರುಕುಗೊಂಡಿರುವುದು ಸಾರ್ವಜನಿಕರು ತುಸು ನಿಟ್ಟುಸಿರು ಬಿಡಬಹುದಾಗಿದೆ.
ಈ ಲಸಿಕೆ ಅಭಿಯಾನ ಇದೇ ಉತ್ಸಾಹದಲ್ಲಿ ಮುಂದುವರಿದಲ್ಲಿ ಡಿಸೆಂಬರ್ ವೇಳೆಗೆ ತಾಲೂಕು ಆಡಳಿತ ಇಟ್ಟುಕೊಂಡಿದ್ದ ಲಸಿಕಾ ಗುರಿಯನ್ನು ಮುಟ್ಟುವುದು ಕಷ್ಟವಾಗುವುದಿಲ್ಲ.
ಡಿಸೆಂಬರ್ ವೇಳೆಗೆ ಶೇ.100 ರಷ್ಟು ಸಂಪೂರ್ಣ ಲಸಿಕೆ ಹಾಕುವ ಮಹತ್ವಾಕಾಂಕ್ಷಿ ಗುರಿಯನ್ನ ತಾಲೂಕು ಇಟ್ಟುಕೊಂಡಿದೆ.
ಜಿಲ್ಲೆಗೆ ಮೊದಲ ಸ್ಥಾನ: 101303 ಲಸಿಕೆ ಡೋಸ್ಗಳನ್ನ ಹಾಕುವ ಮೂಲಕ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಮೊದಲ ಸ್ಥಾನದಲ್ಲಿದ್ದು, 99949 ಲಸಿಕೆ ಡೋಸ್ಗಳನ್ನ ಹಾಕುವ ಮೂಲಕ ದೇವನಹಳ್ಳಿ ಎರಡನೆ ಸ್ಥಾನದಲ್ಲಿದ್ದರೆ, ಹೊಸಕೋಟೆ 93059 ಹಾಗೂ ನೆಲಮಂಗಲ 71784 ಲಸಿಕೆ ಡೋಸ್ಗಳನ್ನ ಹಾಕುವ ಮೂಲಕ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಈಗ ಲಸಿಕೆ ಕಾರ್ಯ ಮಹಾ ವೇಗ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಿದಷ್ಟೂ ಲಸಿಕೆ ಅಭಿಯಾನ ಇನ್ನೂ ಹೆಚ್ಚು ಚುರುಕುಗೊಳ್ಳಲಿದೆ. ಜೂನ್ ತಿಂಗಳ ಒಂದು ವಾರದಲ್ಲಿ ದಾಖಲೆಯ ಪ್ರಮಾಣದಲ್ಲಿ ಲಸಿಕೆ ಹಾಕಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಶೇ.100ರಷ್ಟು ಗುರಿ: ತಾಲೂಕಿನಲ್ಲಿ ಒಂದು ಲಕ್ಷ ಲಸಿಕೆ ಗುರಿ ತಲುಪಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಶಾಸಕ ಟಿ.ವೆಂಕಟರಮಣಯ್ಯ, ಜನಪ್ರತಿನಿದಿಗಳು ಹಾಗೂ ಸಾರ್ವಜನಿಕರ ಸಹಕಾರ ಇದಕ್ಕೆ ಕಾರಣವಾಗಿದ್ದು, ಶೇ.100 ರಷ್ಟು ಲಸಿಕೆ ಹಾಕುವ ಗುರಿ ನಮ್ಮ ಮುಂದಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ಹಿರಿಯರ ಮನವೊಲಿಸಿ: ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದರು, 45 ವರ್ಷ ಮೇಲ್ಪಟ್ಟವರು ಇನ್ನು ಬಾಕಿ ಇದ್ದು, ಯುವ ಸಮುದಾಯ ತಮ್ಮ ಕುಟುಂಬಗಳಲ್ಲಿರುವ ಹಿರಿಯರಿಗೆ ಮನವೊಲಿಸಿ ಲಸಿಕೆ ಹಾಕಿಸಲು ಪ್ರೇರೇಪಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಮನವಿ ಮಾಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..