ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ರಸ್ತೆಯ ಪ್ರಸಿದ್ದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಂಡಿ ಕಳ್ಳತನ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ದೇವಾಲಯದ ಗೇಟ್ ಹಾಗೂ ಮುಖ್ಯ ದ್ವಾರದ ಬಾಗಿಲಿಗೆ ಹಾಕಿರುವ ಬೀಗಗಳನ್ನು ಹೊಡೆದು ಒಳಗೆ ನುಗ್ಗಿರುವ ಕಳ್ಳರು, ದೇವಾಲಯದಲ್ಲಿದ್ದ ಮೂರು ಹುಂಡಿಗಳನ್ನು ತೆರೆಯಲು ಪ್ರಯತ್ನಿಸಿ ವಿಫಲರಾಗಿ ನಂತರ ಹುಂಡಿಗಳನ್ನು ದೇವಾಲಯದ ಎದುರಿನಲ್ಲಿರುವ ನಾಗರಕರೆಯ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಹುಂಡಿಗಳನ್ನು ಜಜ್ಜಿ, ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿ ಹುಂಡಿಗಳನ್ನು ಅಲ್ಲೇ ಬಿಸಾಡಿ, ಪರಾರಿಯಾಗಿದ್ದಾರೆ.
ಬೆಳಗಿನ ಜಾವ ದೇವಾಲಯದ ಸಿಬ್ಬಂದಿ ಬಾಗಿಲು ತೆರೆಯಲು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಲಾಕ್‍ಡೌನ್ ಹಿನ್ನಲೆಯಲ್ಲಿ ಇತ್ತೀಚೆಗೆ ದೇವಾಲಯಕ್ಕೆ ಭಕ್ತರ ಆಗಮನ ಕಡಿಮೆ ಇದ್ದುದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಇರಲಿಲ್ಲ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾಕ್‍ಡೌನ್ ತೆರವಾದ ನಂತರ ತಾಲೂಕಿನಲ್ಲಿ ಕಳ್ಳತನಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಮುಖ್ಯ ರಸ್ತೆಗಳ ದೇವಾಲಯಗಳಲ್ಲಿಯೇ ಹೀಗಾದರೆ ಹೊರವಲಯದಲ್ಲಿರುವ ಮನೆಗಳಿಗೆ ಹಾಗೂ ದೇವಾಲಯಗಳಿಗೆ ರಕ್ಷಣೆ ಹೇಗೆ ಎನ್ನುವ ಆತಂಕ ಎದುರಾಗಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..