ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿರುವ ಹಿನ್ನೆಲೆ, ಮಕ್ಕಳಿಗೆ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ(ಎನ್‌ಸಿಪಿಸಿಆರ್) ಸದಸ್ಯ ಡಾ.ಆರ್.ಜಿ.ಆನಂದ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಅವರು ಮಾತನಾಡಿದರು.
ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಪತ್ತೆಹಚ್ಚಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು, ಮಕ್ಕಳ ತಜ್ಞರನ್ನು ಗುರುತಿಸಿ, ಕಾರ್ಯನಿರ್ವಹಿಸಲು ಸನ್ನದ್ಧರನ್ನಾಗಿಸಿ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಆರ್ ರವಿಕುಮಾರ್ ಅವರು ಮುಂಬರುವ ಮೂರನೇ ಅಲೆಯ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕೈಗೊಂಡಿರುವ ಕ್ರಮಗಳ ಸವಿವರವಾದ ಮಾಹಿತಿಯನ್ನು ಆಯೋಗದ ಸದಸ್ಯರಿಗೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ ಮೊಬೈಲ್ ಕ್ಲಿನಿಕ್‌ಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಹಳ್ಳಿಗೆ ಭೇಟಿ ನೀಡಿ ಸ್ಥಳದಲ್ಲೇ ಕೊರೋನಾ ಪರೀಕ್ಷೆ ನಡೆಸಿ, ವೈದ್ಯೋಪಚಾರ ನೀಡುತ್ತಿವೆ ಎಂದು ಹೇಳಿದರು.
ನವ ಭಾರತ ನಿರ್ಮಾಣಕ್ಕೆ ಮಕ್ಕಳ ಪಾಲ್ಗೊಳ್ಳುವಿಕೆಗೆ ಸ್ಫೂರ್ತಿದಾಯಕ ಆಲೋಚನೆಗಳು, ಅನುಭವಗಳು, ಉಪ ವ್ಯಾಖ್ಯಾನ ಸಾಕ್ಷ್ಯಗಳು ಮತ್ತು ಮಾರ್ಗದರ್ಶನಗಳ ಸಂಕಲನದ ಪುಸ್ತಕವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ.ಆರ್.ರವಿಕುಮಾರ್ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ(ಎನ್‌ಸಿಪಿಸಿಆರ್) ಸದಸ್ಯರಾದ ಡಾ. ಆರ್.ಜಿ.ಆನಂದ್ ಅವರು ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಎ.ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪುಷ್ಪಲತಾ.ಜಿ.ರಾಯರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹೇಮಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..