ಸೌರವ್ ಗಂಗೂಲಿ ಎನ್ನುವ ಅಗ್ನಿಕಣ ಪ್ರಜ್ವಲಿಸಿ ಶೋಭಾಯಮಾನವಾಗಿ ಉರಿದು ಹಲವು ವರ್ಷಗಳೇ ಕಳೆದರೂ ಅದರ ಪ್ರಭೆಯಿನ್ನೂ ಆರಿಲ್ಲ.
ನಮ್ಮ ತಲೆಮಾರಿನ ಕ್ರಿಕೆಟ್ ಪ್ರೇಮಿಗಳಿಗೆ ಇದೊಂದು ಖಯಾಲಿ ಖಂಡಿತಾ ಇರುತ್ತದೆ. ಕನ್ನಡ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುವ ಈ ಕ್ರಿಕೆಟ್ ಪ್ರೇಮಿಗಳು ವರನಟ ಡಾ ರಾಜ್ ಕುಮಾರ್ ಬಗ್ಗೆ ಅತೀವ ಗೌರವ ವ್ಯಕ್ತಪಡಿಸುತ್ತಾರೆ ಆದರೆ ತಮ್ಮ ಫೇವರೇಟ್ ನಟನ ಸ್ಥಾನವನ್ನು ಮಾತ್ರ ಅಭಿನಯ ಭಾರ್ಗವ ವಿಷ್ಣುವರ್ಧನ್ ಗೆ ನೀಡುತ್ತಾರೆ.
ಅದೇ ರೀತಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಅಗಾಧ ಗೌರವ ಇದೆ, ಆದರೆ ಡೈ ಹಾರ್ಡ್ ಫ್ಯಾನ್ ಆಗಿರುವುದು ಮಾತ್ರ ಸೌರವ್ ದಾದಾಗೆ. ಅದು ಒಂದಿಡೀ ದಶಕ ನಮ್ಮ ಜನರೇಷನ್ ಅನ್ನು ಆವರಿಸಿಕೊಂಡಿದ್ದ ಸೌರವ್ ಮೇನಿಯಾ.
ಹೌದು! ಕ್ರಿಕೆಟ್ ಜಗತ್ತಿನ ಈ ಮಹಾಪ್ರವಾಹ ತಣ್ಣಗಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಆದ್ರೆ ಆ ಆರ್ಭಟದ ದಿನಗಳ ವೈಭವ ಮಾತ್ರ ದಾದಾ ಅಭಿಮಾನಿಗಳ ಕಣ್ಣಲ್ಲಿ ಇಂದಿಗೂ ಹಚ್ಚ ಹಸುರಾಗಿಯೇ ಇದೆ. ಭಾರತೀಯ ಕ್ರಿಕೆಟ್ ಅನ್ನು ಟೀಂ ಇಂಡಿಯಾವನ್ನಾಗಿಸಿದ ಅಪ್ಪಟ ಪ್ರತಿಭಾವಂತನ ಬದುಕೇ, ಒಂದು ನಿರಂತರ ಹೋರಾಟಗಳ ಹೊತ್ತಿಗೆ. ಇವತ್ತಿಗೂ ನಮ್ಮ ಜನರೇಷನ್ ಪಾಲಿನ ಅತ್ಯುತ್ತಮ ಕಪ್ತಾನ ಅನ್ನುವ ಆ ಅಗ್ನಿ ಕಣದ ಹೆಸರೇ ಪ್ರಿನ್ಸ್ ದಿ ಗ್ರೇಟ್ ಆಫ್ ಕೋಲ್ಕತ್ತಾ ಸೌರವ್ ಚಂಡೀದಾಸ್ ಗಂಗೂಲಿ.
ಭಾರತ ಕ್ರಿಕೆಟ್ ತಂಡ ತನ್ನ 8 ದಶಕಗಳ ಇತಿಹಾಸದಲ್ಲಿ ಅದೆಷ್ಟೋ ಅತಿರಥ ಮಹಾರಥರುಗಳನ್ನು ಕಂಡಿದೆ. ಆದ್ರೆ ಮೈದಾನದಲ್ಲಿ ಉಗುರು ಕಚ್ಚುತ್ತಾ, ಪದೇ ಪದೇ ಕಣ್ಣು ಮಿಟುಕಿಸುತ್ತಾ, 99 ನಂಬರಿನ ಬ್ಲೂ ಜೆರ್ಸಿ ತೊಟ್ಟ ಸ್ಪುರದ್ರೂಪಿಯನ್ನು ಇಂಡಿಯನ್ ಕ್ರಿಕೆಟ್ ಆಗಲೀ ಅಥವಾ ಕ್ರಿಕೆಟ್ನ ಅಭಿಮಾನಿಗಳಾಗಲೀ ಮರೆಯಲು ಸಾಧ್ಯವೇ ಇಲ್ಲ. ಮುಂಗೋಪಿ, ಹಠಮಾರಿ, ಛಲವಾದಿ ಆ ಯುವಕ ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲಿ ಸದಾ ಮಿನುಗುವ ಧ್ರುವತಾರೆ. ಅವರು ಬೇರಾರು ಅಲ್ಲ ಭಾರತೀಯ ಕ್ರಿಕೆಟ್ನ ಮಹಾರಾಜ ಸೌರವ್ ಚಂಡಿದಾಸ್ ಗಂಗೂಲಿ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ ಗಂಗೂಲಿಗೆ ಇಂದು 49ರ ಜನ್ಮದಿನದ ಸಂಭ್ರಮ. 8 ಜುಲೈ 1972ರಲ್ಲಿ ಕಲ್ಲತ್ತಾದಲ್ಲಿ ಚಂಡಿದಾಸ್ ಗಂಗೂಲಿ ಹಾಗೂ ನೂಪುರ ದಂಪತಿಗಳ ಮಗನಾಗಿ ಜನಿಸಿದ ಸೌರವ್ ಭಾರತೀಯ ಕ್ರಿಕೆಟ್ ಅನ್ನು ಹತ್ತಿರ ಹತ್ತಿರ ಎರಡು ದಶಕಗಳ ಕಾಲ ತನ್ನ ಪ್ರಭಾ ವಲಯದಲ್ಲಿಟ್ಟುಕೊಂಡು ಆಳಿದ ಅನಭಿಷಿಕ್ತ ದೊರೆ.
ಅಸಂಖ್ಯ ಕ್ರಿಕೆಟ್ ಪ್ರೇಮಿಗಳ ಹೃದಯದ ಸರ್ವಕಾಲಿಕ ಸಾಮ್ರಾಟ, ದಿ ಪ್ರಿನ್ಸ್ ಆಫ್ ಕೋಲ್ಕತ್ತಾ ಸೌರವ್ ಗಂಗೂಲಿಗೆ ಇಂದು ಜನ್ಮದಿನದ ಸಡಗರ.
ಸಂಘರ್ಷಗಳ ನಡುವೆಯೇ ದೇದೀಪ್ಯಮಾನವಾಗಿ ಬೆಳಗಿದ ಎಡಗೈ ದಾಂಡಿಗ ಸೌರವ್ ಗಂಗೂಲಿ. ಭಾಗಶಃ ಮುಗಿದೇ ಹೋಗಿದ್ದ ಇಂಡಿಯನ್ ಕ್ರಿಕೆಟ್ಗೆ ಮರುಹುಟ್ಟು ನೀಡಿ, ಕಟ್ಟಿ ಬೆಳೆಸಿದ ಕೀರ್ತಿ ದಾದಾಗೆ ಸಲ್ಲಬೇಕು. ಸೌರವ್ ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಟ ನಾಯಕ. ಈಗಿನ ತಲೆಮಾರಿನ ಬಹಳಷ್ಟು ಜನರಿಗೆ ಸೌರವ್ ಎನ್ನುವ ಪರಮ ಅಗ್ರೇಸ್ಸೀವ್ ಭಾರತೀಯ ಕ್ರಿಕೇಟಿಗನ ಕುರಿತಾದ ಕೆಲವು ವಿಚಾರಗಳು ತಿಳಿದಿರಲಿಕ್ಕಿಲ್ಲ. ಸೌರವ್ ಬಾಲಕನಾಗಿದ್ದಾಗ ಬಾಲ್ ಬಾಯ್ ಆಗಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದ. ತನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದು ಬಲಗೈ ಬ್ಯಾಟ್ಸ್ ಮನ್ ಆಗಿ, ಆದರೆ ತಾನು ವಿಶಿಷ್ಟ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ
ತಹತಹಿಕೆಯಿಂದಲೇ ಎಡಗೈ ಬ್ಯಾಟ್ಸ್ ಮನ್ ಆಗಿ ಆಡಲು ಶುರು ಮಾಡಿದ ಗಂಗೂಲಿ ಎಡಗೈ ಬ್ಯಾಟ್ಸ್ ಮನ್ ಗಳ ಪಾಲಿಗೆ ದಂತಕಥೆಯೇ ಆಗಿದ್ದು ಇತಿಹಾಸ. ನಮ್ಮ ಈಗಿನ ಯುವ ಕ್ರಿಕೇಟಿಗರು ಕ್ರೀಸಿನಿಂದ ಮುಂದೆ ನುಗ್ಗಿ ಸಲೀಸಾಗಿ ಸಿಕ್ಸರ್ ಹೊಡೆಯುತ್ತಾರೆಂದರೆ ಅವರೆಲ್ಲರಿಗೂ ರೋಲ್ ಮಾಡೆಲ್ ಸೌರವ್ ದಾ. ಕ್ರಿಕೇಟ್ ಕಾಶಿ ಲಾರ್ಡ್ಸ್ ನಲ್ಲಿ ಶತಕ ಸಿಡಿಸಿದ ಮೊದಲ ಐವರು ಲೆಜೆಂಡ್ ಕ್ರಿಕೇಟಿಗರಲ್ಲಿ ಸೌರವ್ ದಾದಾ ಒಬ್ಬರು ಮತ್ತು ಮೊತ್ತಮೊದಲ ಭಾರತೀಯ ದಾಂಡಿಗ. ಅಷ್ಟೇ ಅಲ್ಲ 1996ರಲ್ಲಿ ತಾನಾಡಿದ ಮೊತ್ತ ಮೊದಲ ಪಂದ್ಯದಲ್ಲೇ ಬರೋಬ್ಬರಿ 136 ರನ್ ಗಳನ್ನು ಸಿಡಿಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಬ್ಯಾಟ್ಸ್ ಮನ್ ಅವರು. ಸತತ ನಾಲ್ಕು ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಟ ಗೌರವಕ್ಕೆ ಭಾಜನರಾದ ಮತ್ತು ಏಕದಿನ ಪಂದ್ಯಾವಳಿಯಲ್ಲಿ 10 ಸಾವಿರ ರನ್, 100 ವಿಕೇಟ್ ಮತ್ತು 100 ಕ್ಯಾಚ್ ಪಡೆದ ವಿಶ್ವದ ಐವರು ಅತ್ಯುತ್ತಮ ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಸೌರವ್ ಇದ್ದಾರೆ. ಸೌರವ್ ಗಂಗೂಲಿಯ ಬಿರುದಾವಳಿಗಳೇನೂ ಕಡಿಮೆಯಿಲ್ಲ, ಬೆಂಗಾಲ್ ಟೈಗರ್, ಪ್ರಿನ್ಸ್ ಆಫ್ ಕೋಲ್ಕತ್ತಾ, ದಿ ಗಾಡ್ ಆಫ್ ಆಫ್ ಸೈಡ್, ದಿ ಮಹಾರಾಜಾ, ದಿ ವಾರಿಯರ್ ಪ್ರಿನ್ಸ್, ದಾದಾ ಆಫ್ ದಿ ಇಂಡಿಯನ್ ಕ್ರಿಕೇಟ್ ಇತ್ಯಾದಿ ಇತ್ಯಾದಿ. ಇದರಲ್ಲಿ ಪ್ರಿನ್ಸ್ ಆಫ್ ಕೋಲ್ಕತ್ತಾ ಎನ್ನುವ ಟೈಟಲ್ ಕೊಟ್ಟವರು ಖ್ಯಾತ ವೀಕ್ಷಕ ವಿವರಣೆಕಾರ ಜೆಫ್ರಿ ಬಾಯ್ಕಾಟ್.
ಸೌರವ್ ಚಂಡಿದಾಸ್ ಗಂಗೂಲಿ. ಅಭಿಮಾನಿಗಳ ಹೃದಯದಲ್ಲಿ ಅವರೆಂದಿಗೂ ಅಚ್ಚುಮೆಚ್ಚಿನ, ಹಠಮಾರಿ ಸ್ವಭಾವದ, ಹಿಡಿದಿದ್ದನ್ನು ಸಾಧಿಸುವ ದಾದಾ. ಸೌರವ್ ಕ್ರಿಕೆಟ್ ಬದುಕು ವರ್ಣರಂಜಿತ ಅಧ್ಯಾಯಗಳ ಹೊತ್ತಿಗೆ. ಅಲ್ಲಿ ಯಶಸ್ಸು-ವೈಫಲ್ಯ, ಸೋಲು-ಗೆಲುವು, ಉತ್ಸಾಹ-ಹತಾಶೆ, ಉತ್ತುಂಗಕ್ಕೇರಿದ ಕೀರ್ತಿ ಜೊತೆಗೆ ಅವಮಾನಗಳ ಸಮ್ಮಿಶ್ರ ಫಲವಿದೆ. ಈ ಬಂಗಾಳದ ಸುಪುತ್ರ ಜಗತ್ತನ್ನೇ ನಿಬ್ಬೆರಗಾಗಿಸುವಂತೆ ತ್ರಿವಿಕ್ರಮ ಬೆಳವಣಿಗೆ ಕಂಡರು; ಹಿಂದೆಯೇ ಬಲಿಚಕ್ರವರ್ತಿಯಂತೆ ಪಾತಾಳಕ್ಕೂ ತುಳಿಯಲ್ಪಟ್ಟರು. ಸೌರವ್ ಗಂಗೂಲಿ ಯುಗಾಂತ್ಯವಾಗಿ ಹೋಯಿತೇನೋ ಅನ್ನುವಷ್ಟರಲ್ಲಿ ಮತ್ತೆ ಫಿನೀಕ್ಸ್ನಂತೆ ಚೇತರಿಸಿಕೊಂಡು ಬಿರುಗಾಳಿಯಂತೆ ಆರ್ಭಟಿಸಿದರು. ತಾನು ಹುಟ್ಟಿದ್ದೇ ಕ್ರಿಕೆಟ್ಗಾಗಿ ಎಂಬಂತೆ ಆಡಿದರು. ಭಾರತೀಯ ಕ್ರಿಕೆಟ್ನಲ್ಲಿ ಎಷ್ಟರಮಟ್ಟಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೆಸರು ಉಳಿಯುತ್ತದೋ ಅಷ್ಟರಮಟ್ಟಿಗೇ ಭಾರತೀಯ ಕ್ರಿಕೆಟ್ ಅನ್ನು ಟೀಂ ಇಂಡಿಯಾವನ್ನಾಗಿಸಿ ವಿಶ್ವ ಚಾಂಪಿಯನ್ನರ ಸೃಷ್ಟಿಗೆ ಕಾರಣರಾದ ಸೌರವ್ ಗಂಗೂಲಿಯ ಹೆಸರೂ ಉಳಿಯುತ್ತದೆ.
ವಿಶ್ವ ಕ್ರಿಕೆಟ್ನ ದಿಗ್ಗಜ ಕ್ರಿಕೇಟಿಗರಾದ ಸಚಿನ್, ಬ್ರಾಡ್ಮನ್, ಲಾರಾ, ಕಾಲಿಸ್, ಪಾಂಟಿಂಗ್, ಜಯಸೂರ್ಯ, ಫ್ಲಿಂಟಾಫ್, ಸೆಹ್ವಾಗ್, ದ್ರಾವಿಡ್, ಪೀಟರ್ಸನ್, ಡೆವಿಲಿಯರ್ಸ್ ಮುಂತಾದವರ ಸಾಧನೆಯನ್ನು ದಾಖಲೆಗಳ ಅಂಕಿ ಅಂಶದ ಆಧಾರದಲ್ಲಿ ನಿರ್ಧರಿಸಬಹುದು. ಆದ್ರೆ ಯಾವುದೇ ಅಂಕಿ ಅಂಶಗಳ ಆಧಾರವಿಲ್ಲದೇ ಒಬ್ಬ ಕ್ರಿಕೆಟಿಗನ ಮಹತ್ವವನ್ನು ಜಗತ್ತು ಅಳೆಯುತ್ತದೆ ಅಂದರೆ ಅದು ನನ್ ಅದರ್ ದ್ಯಾನ್ ಸೌರವ್ ಗಂಗೂಲಿ ಮಾತ್ರ. ಭಾರತೀಯ ಕ್ರಿಕೆಟ್ ಅನ್ನು ಮಾನಸಿಕವಾಗಿ ಸದೃಡಗೊಳಿಸಿದ ಅದಮ್ಯ ಚೈತನ್ಯ ಶಕ್ತಿ. ಬಡವಾಗಿದ್ದ ಕ್ರಿಕೆಟ್ಗೆ ಪ್ರೋಟಿನ್ ವಿಟಮನ್ ತುಂಬಿ ಪುಷ್ಟಿಗೊಳಿಸಿದ ಪೋಷಕ. ಅಸಹಾಯಕ ಕ್ರಿಕೇಟಿಗರ ಸ್ಥೈರ್ಯವನ್ನು ಉದ್ದೀಪನಗೊಳಿಸಿದ ಟ್ರೈನರ್. ಟೀಂ ಇಂಡಿಯಾದ ಅಗ್ರೇಸ್ಸೀವ್ನೆಸ್ ವರ್ಧಿಸಿದ ವೈದ್ಯ. ಮೈಂಡ್ ಗೇಮ್ಗೆ ಮೈಂಡ್ಗೇಮ್ ಮೂಲಕವೇ ಉತ್ತರ ನೀಡಿದ ಚಾಣಕ್ಯ. ಹತ್ತಾರು ಬಾರಿ ಸಹ ಆಟಗಾರರ ಪರವಾಗಿ ಜಗಳಕ್ಕೆ ನಿಂತು ತಂಡವನ್ನು ಬಲಪಡಿಸಿದ ಹಠಮಾರಿ. ಹೀಗೆ, ಸೌರವ್ ಇಂಡಿಯನ್ ಕ್ರಿಕೆಟ್ ಟೀಂ ಬಲಪಡಿಸಲು ತಳೆದ ಪಾತ್ರಗಳು ಹತ್ತಾರು. ಆದ್ರೆ ದುರಂತವೆಂದ್ರೆ ಕ್ರಿಕೆಟ್ ಗಟ್ಟಿಗೊಳಿಸಲು ಸೌರವ್ ರೂಪಿಸಿದ ಆಯ್ಕೆ ಸಮಿತಿ ರಾಜಕಾರಣವೇ ಅವರ ಕ್ರಿಕೆಟ್ ಬದುಕನ್ನು ಕೊನೆಗೊಳಿಸಿತು. ಹೀಗಾಗಿ ಅವಧಿಗೆ ಮುನ್ನವೇ ದಾದಾ ತನ್ನಿಷ್ಟದ ವೃತ್ತಿ ಕ್ರಿಕೆಟ್ಗೆ ಗುಡ್ಬೈ ಹೇಳಬೇಕಾಯ್ತು.
ದಾದಾ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ 2003ರ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. 2000, 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ನಿರ್ವಹಣೆ ತೋರಿತ್ತು. ಇಂಗ್ಲೆಂಡ್ನಲ್ಲಿ ನಡೆದ ನ್ಯಾಟ್ವೆಸ್ಟ್ ಸೀರಿಸ್ನಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಹಣಾಹಣಿಯನ್ನು ಅಭಿಮಾನಿಗಳು ಮರೆಯುವಂತೆಯೇ ಇಲ್ಲ. ಅಂದು ಭಾರತದ ಸಂಘಟಿತ ಹೋರಾಟದ ನೇತೃತ್ವ ವಹಿಸಿದ್ದು ಸೌರವ್ ಗಂಗೂಲಿಯೆಂಬ ಮಹಾನ್ ಪ್ರತಿಭಾವಂತನ ಅಗ್ರೆಸ್ಸೀವ್ ಗುಣ.
ಸೌರವ್ ಗಂಗೂಲಿಯಲ್ಲಿ ಚತುರ ನಾಯಕತ್ವದ ಗುಣವಿದೆ, ಸಮರ್ಥ ಸಂಘಟಕನ ಸ್ವಭಾವವಿದೆ. ಇದರ ಅರಿವಿರುವ ಅವರ ಸಹ ಆಟಗಾರ ಸೆಹ್ವಾಗ್, ಭವಿಷ್ಯದಲ್ಲಿ ದಾದಾ ಪಶ್ಚಿಮ ಬಂಗಾಳದ ಸಿಎಂ ಆಗುತ್ತಾರೆ, ಅದಕ್ಕಿಂತ ಮೊದಲು ಬಿಸಿಸಿ ಅಧ್ಯಕ್ಷರಾಗುತ್ತಾರೆ ಎಂದಿದ್ದರು. ಹಿಂದೆ ಬಿಸಿಸಿಐ ಸಂಸ್ಥೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದ ಜಗಮೋಹನ್ ದಾಲ್ಮಿಯಾ ಸೌರವ್ ಪಾಲಿನ ಗಾಡ್ ಫಾದರ್ನಂತಾಗಿದ್ದರು. ಸೆಹ್ವಾಗ್ ಶಕುನ ನಿಜವಾಗಿ ಹೋಯಿತು. ಬಿಸಿಸಿಐನಲ್ಲಿ ಡಿಸಿಷನ್ ಮೇಕರ್ಗಳಾಗಿದ್ದ ಅನುರಾಗ್ ಠಾಕುರ್, ರಾಜೀವ್ ಶುಕ್ಲಾ, ಶಶಾಂಕ್ ಮನೋಹರ್ ಮುಂತಾದವರ ಅಸಲಿ ಮಾರ್ಗದರ್ಶಕರಾಗಿದ್ದ ಸೌರವ್ ದಿ ಗ್ರೇಟ್ ಬಿಸಿಸಿಐ ಚುಕ್ಕಾಣಿ ಹಿಡಿದೇಬಿಟ್ಟರು.
ಸೌರವ್ ಒಬ್ಬ ಅಪ್ರತಿಮ ಕ್ರಿಕೆಟ್ ಚಿಂತಕ ಅನ್ನುವುದಕ್ಕೆ ಹತ್ತು ಹಲವು ಉದಾಹರಣೆಗಳು ಸಿಗುತ್ತವೆ. ವೃತ್ತಿ ಕ್ರಿಕೇಟಿಗನಾಗಿದ್ದಾಗಲೂ ಸದಾ ಪ್ರಯೋಗಶೀಲರಾಗಿದ್ದ ಸೌರವ್, ನಿವೃತ್ತಿಯ ನಂತರವೂ ಸದಾ ಕ್ರಿಕೆಟ್ ಅಭಿವೃದ್ಧಿಗಾಗಿ ಚಿಂತಿಸುತ್ತಾರೆ. ಟೆಸ್ಟ್ ಅಥವಾ ಏಕದಿನ ಕ್ರಿಕೆಟ್ಗಳ ಸ್ವರೂಪದ ಬದಲಾವಣೆಯಾಗಲೀ ಅಥವಾ ಇತ್ತೀಚೆಗೆ ಟಿ-20 ಚುಟುಕು ಕ್ರಿಕೆಟ್ಗಳ ಜನಪ್ರಿಯತೆಯ ವಿಚಾರದಲ್ಲಾಗಲಿ ದಾದಾ ಪೂರ್ವಾಗ್ರಹ ಪೀಡಿತರಾಗಿ ಯೋಚಿಸುವುದಿಲ್ಲ. ಇನ್ ಫ್ಯಾಕ್ಟ್, ಜಗತ್ತಿನ ಕ್ರಿಕೆಟ್ ಪಂಡಿತರ ಚಾವಡಿ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಹೆಚ್ಚಾದರೆ ಟೆಸ್ಟ್ ಹಾಗೂ ಏಕದಿನ ಮಾದರಿಯ ಕ್ರಿಕೆಟ್ ಕಳೆಗುಂದುತ್ತದೆ ಎಂದು ಬೊಬ್ಬಿರಿಯುತ್ತಿದ್ದಾಗ, ದಾದಾ ಚುಟುಕು ಕ್ರಿಕೆಟ್ ಟಿ20 ಇಲ್ಲದೆ ಕ್ರಿಕೆಟ್ ಕ್ರೀಡೆಗೆ ಹೆಚ್ಚು ದಿನ ಉಳಿಗಾಲವಿಲ್ಲ ಎಂದು ಹೇಳಿಕೆ ನೀಡಿದ್ದರು. ಕ್ರಿಕೆಟ್ ಇತಿಹಾಸವನ್ನು ಆಮೂಲಾಗ್ರವಾಗಿ ನೋಡಿದಾಗ ಹಲವಾರು ಮಹತ್ತರ ಬದಲಾವಣೆಗಳು ಕಾಣಿಸುತ್ತವೆ. ಆಯಾ ಕಾಲಘಟ್ಟದಲ್ಲಿ ಒಂದೊಂದು ಮಾದರಿಯ ಕ್ರಿಕೆಟ್ ಜನಪ್ರಿಯಗೊಂಡಿದೆ. ಈಗಿನ ಫಾಸ್ಟೆಸ್ಟ್ ಯುಗದಲ್ಲಿ ಚುಟುಕು ಕ್ರಿಕೆಟ್ ಮಾದರಿಗೆ ಮಹತ್ವ ಕೊಡದಿದ್ದರೆ ಜಾಗತಿಕವಾಗಿ ಕ್ರಿಕೆಟ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಅನ್ನುವ ನಿಲುವು ಸೌರವ್ರದ್ದಾಗಿತ್ತು.
ಭಾರತೀಯ ಕ್ರಿಕೆಟ್ ಅನ್ನು ಅತ್ಯಂತ ವಿಷಮ ಸ್ಥಿತಿಯಿಂದ ಮೇಲಕ್ಕೆತ್ತಿದವರು ಸೌರವ್ ಗಂಗೂಲಿ. ಕಳೆಗಳನ್ನು ಕಿತ್ತು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದವರು ಅವರು. ಸತತ ವೈಫಲ್ಯದಲ್ಲಿದ್ದ ಸ್ಟಾರ್ ಆಟಗಾರರಿಗೆ ಮತ್ತೆ ಮತ್ತೆ ಅವಕಾಶ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಸಹ ಆಟಗಾರರ ಮನೋಸ್ಥೈರ್ಯ ವೃದ್ಧಿಸಿ ನಿರಂತರ ಪ್ರಯೋಗ ನಡೆಸಿ ಅವರಲ್ಲಿದ್ದ ಪ್ರತಿಭೆಯನ್ನು ಹೊರತೆಗೆದವರು. ಹತ್ತಾರು ಸ್ಟಾರ್ ಕ್ರಿಕೇಟರ್ಗಳ ಹುಟ್ಟಿಗೆ ಕಾರಣರಾದವರು ದಾದಾ. 1999-2000ರ ಮ್ಯಾಚ್ ಫಿಕ್ಸಿಂಗ್ ಕರಾಳ ಸಂದರ್ಭದಲ್ಲಿ ಇಡೀ ಜಗತ್ತೇ ಭಾರತದ ಕ್ರಿಕೆಟರ್ಸ್ಗಳನ್ನು ಹೀನಾಯವಾಗಿ ನೋಡುತ್ತಿದ್ದಾಗ, ಗಾಡ್ ಆಫ್ ಕ್ರಿಕೆಟ್ ಸಚಿನ್ರನ್ನೂ ಅನುಮಾನದ ದೃಷ್ಟಿಯಲ್ಲಿ ಪ್ರಪಂಚ ನೋಡುತ್ತಿದ್ದಾಗ, ಕತ್ತಲು ಕವಿದಿದ್ದ ಭಾರತೀಯ ಕ್ರಿಕೆಟ್ಗೆ ಭರವಸೆಯ ಬೆಳಕು ನೀಡಿದವರು ಸೌರವ್ ದಾದಾ. ಭಾರತೀಯ ಕ್ರಿಕೆಟ್ನ ಅತಿ ದೊಡ್ಡ ಶಕ್ತಿ, ಸ್ಫೂರ್ತಿ, ಚೈತನ್ಯ ಗಂಗೂಲಿ. ಹುಟ್ಟಿನಿಂದಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡಿದ್ದ ಸೌರವ್, ಎ ರಿಯಲ್ ಲೀಡರ್, ಕ್ಯಾಪ್ಟನ್, ಮೋಟಿವೇಟರ್ ಹಾಗೂ ಎಂಪರರ್. ದಾದಾ ಇರೋದೇ ಹಾಗೇ ಬರ್ನ್ ಟು ಲೀಡ್.
ದಾದಾ, ಕ್ರಿಕೆಟ್ ವೃತ್ತಿ ಜೀವನಕ್ಕೆ ಕಾಲಿಟ್ಟ ದಿನದಿಂದಲೂ ಸಂಘರ್ಷಗಳನ್ನೇ ಎದುರಿಸಿ ಗಟ್ಟಿಯಾದವ್ರು. ಕೊನೆಯತನಕವೂ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಡಿದ ಅವರ ಬದುಕು ಈಗಿನ ಅನೇಕ ಕ್ರಿಕೆಟರ್ಗಳಿಗೆ ಪಾಠವಾಗಬೇಕು. ಸೌರವ್ ಬದುಕಿನ ಸಂಕಷ್ಟಗಳನ್ನು ಎಳೆಎಳೆಯಾಗಿ ವಿವರಿಸುತ್ತದೆ ಸ್ವತಃ ಅವರೇ ಬರೆದಿರುವ ಅವರ ಆತ್ಮ ಕಥೆ ಎ ಸೆಂಚುರಿ ಈಸ್ ನಾಟ್ ಎನಾಫ್.
ದಾದಾ ನಿವೃತ್ತಿಯಾಗಿ ವರ್ಷಗಳೇ ಕಳೆದರೂ ಅವರ ಅಭಿಮಾನಿಗಳ ಅಭಿಮಾನದ ಮಹಾಪೂರ ಇನ್ನೂ ನಿಂತಿಲ್ಲ. ಅದಕ್ಕಿಂತ ಹೆಚ್ಚಾಗಿ ಸೌರವ್ ಗರಡಿಯಲ್ಲಿ ಪಳಗಿದ ಅನೇಕ ಸ್ಟಾರ್ ಆಟಗಾರರ ಪಾಲಿಗೆ ಅವರಿನ್ನೂ ಕ್ಯಾಪ್ಟನ್ ಎವರ್. ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಡೆಲ್ಲಿ ಡ್ಯಾಷರ್ ಎಂದೇ ಪ್ರಸಿದ್ಧರಾಗಿದ್ದ ವೀರೇಂದ್ರ ಸೆಹ್ವಾಗ್ ಸೌರವ್ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಅವರೊಟ್ಟಿಗೆ ಭಾಗವಹಿಸಿದ್ದರು. ಆ ವೇಳೆ ಸೌರವ್ ಪಕ್ಕದಲ್ಲಿದ್ದ ತಮ್ಮ ಖುರ್ಚಿಯನ್ನು ಕೊಂಚ ತಗ್ಗಿಸಿ, ದಾದಾ ತಮ್ಮ ಪಾಲಿಗೆ ಯಾವತ್ತೂ ನಾಯಕನೇ. ಅವರು ಸದಾ ಎತ್ತರದಲ್ಲಿರಬೇಕು ಎಂದಿದ್ದರು.
ಕ್ರಿಕೆಟ್ ಜಗತ್ತಿಗೆ ಕಾಲಿಡುವಾಗ ಸೌರವ್ಗೆ ಸಚಿನ್ಗೆ ಇದ್ದಂತಹ ಯಾವ ಅವಕಾಶಗಳೂ ಇರಲಿಲ್ಲ. ಸಚಿನ್ ಕ್ರಿಕೆಟ್ರಂಗ ಪ್ರವೇಶಿಸಿದ್ದು 16ನೇ ವಯಸ್ಸಿನಲ್ಲಾದ್ರೆ ಗಂಗೂಲಿ ಕಾಲಿಟ್ಟಿದ್ದು ತಮ್ಮ 19ರ ಪ್ರಾಯದಲ್ಲಿ ಅಂಡರ್19 ಕ್ರಿಕೆಟ್ ಮೂಲಕ. ಆದ್ರೆ 1991-92ರ ಆಸ್ಟ್ರೇಲಿಯನ್ ಪ್ರವಾಸದಲ್ಲಿ ತಂಡಕ್ಕೆ ಆಯ್ಕೆಯಾದ್ರೂ ಆಡಿದ್ದು ಕೇವಲ 1 ಏಕದಿನ ಪಂದ್ಯ ಮಾತ್ರ. ಅದೇ ವೇಳೆ ಮೈದಾನಕ್ಕೆ ನೀರು ತೆಗೆದುಕೊಂಡು ಹೋಗಲು ನಿರಾಕರಿಸಿದ್ದರು ಅನ್ನುವುದನ್ನೆ ನೆಪವಾಗಿಸಿಕೊಂಡು ಅವರ ಮೇಲೆ ಅಹಂಕಾರಿ ಅನ್ನುವ ಕಳಂಕ ಹೊರಿಸಲಾಯ್ತು. ಆದ್ರೆ ತನ್ನ ಹಠಮಾರಿ ಧೋರಣೆ ಹಾಗೂ ಸಾತ್ವಿಕ ಅಹಂಕಾರವನ್ನೇ ಅಸ್ತ್ರವನ್ನಾಗಿಸಿಕೊಂಡ ಸೌರವ್ 1996ರ ಇಂಗ್ಲೆಂಡ್ ಸರಣಿಗೆ ಸ್ಥಾನ ಪಡೆದು ಸತತ ಎರಡೂ ಚೊಚ್ಚಲ ಟೆಸ್ಟ್ಗಳಲ್ಲು ಶತಕ ಬಾರಿಸಿ ದಾಖಲೆ ನಿರ್ಮಿಸಿದ್ರು. ಆದರೂ ಅವರ ವೃತ್ತಿ ಜೀವನದ ಸಂಕಷ್ಟಗಳು ಮುಗಿದಿರಲಿಲ್ಲ. ಟೊರಂಟೋ ಏಕದಿನ ಪಂದ್ಯಗಳ ಸರಣಿಯಲ್ಲಿ ವಿನೋದ್ ಕಾಂಬ್ಳಿಗೆ ಅವಕಾಶ ಕಲ್ಪಿಸಲು ಅವರನ್ನು ಕಡೆಗಣಿಸಲಾಯ್ತು. ಮುಂದೆ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಹೆಚ್ಚುವರಿ ವೇಗದ ಬೌಲರ್ಗಾಗಿ ಸೌರವ್ ಮಧ್ಯಮವೇಗದ ಬೌಲರ್ ಆಗಿದ್ದರೂ ಅವಕಾಶ ನಿರಾಕರಿಸಲಾಯ್ತು.
ತಮ್ಮ ಕೈಗೆ ನಾಯಕತ್ವದ ಚುಕ್ಕಾಣಿ ಸಿಗುತ್ತಲೇ ಭಾರತೀಯ ಕ್ರಿಕೆಟ್ ಆಯ್ಕೆಯ ಪದ್ದತಿಯಲ್ಲಿದ್ದ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ವಲಯಗಳಿಗೆ ಜೋತು ಬೀಳುವ ಹಳೆಯ ಕಂದಾಚಾರಗಳಿಗೆ ತಿಲಾಂಜಲಿ ನೀಡಿದ್ರು ದಾದಾ. ಅಪ್ಪಟ ಪ್ರತಿಭಾವಂತರಿಗೆ ಮಾತ್ರ ಭಾರತೀಯ ಕ್ರಿಕೆಟ್ನಲ್ಲಿ ತೆರದ ಬಾಗಿಲು ಅನ್ನುವ ಪರಿಸ್ಥಿತಿ ನಿರ್ಮಾಣವಾಯ್ತು. ಆಗ ಬೆಳಕಿಗೆ ಬಂದ ಹಲವು ಪ್ರತಿಭಾವಂತರೇ ಮುಂದೆ ವಿಶ್ವಮಾನ್ಯತೆ ಗಳಿಸಿಕೊಂಡ ಕ್ರಿಕೇಟಿಗರಾದ್ರು. ಎದೆಗುಂದಬೇಡಿ, ವೈಫಲ್ಯಗೆ ಅಂಜಬೇಡಿ, ನಿಮ್ಮ ಬೆಂಬಲಕ್ಕೆ ನಾನು ಸೌರವ್ ಗಂಗೂಲಿ ಇದ್ದೇನೆ ಎಂದು ಭರವಸೆ ತುಂಬಿದ್ರು. ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಆಶೀಷ್ ನೆಹ್ರಾ, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಮಹೇಂದ್ರ ಸಿಂಗ್ ಧೋನಿಯಂತಹ ಶುದ್ಧ ವೃತ್ತಿಪರ ಕ್ರಿಕೇಟಿಗರ ನಿಜವಾದ ಗಾಡ್ಫಾದರ್ ದಾದಾ. ವೀರೇಂದ್ರ ಸೆಹ್ವಾಗ್ಗಾಗಿ ತಮ್ಮ ಆರಂಭಿಕ ಸ್ಥಾನ ಬಿಟ್ಟುಕೊಟ್ಟರು. ಮಹೇಂದ್ರ ಸಿಂಗ್ ಧೋನಿಗಾಗಿ ಒನ್ ಡೌನ್ ತ್ಯಾಗ ಮಾಡಿದ್ರು. ಹರ್ಭಜನ್ ಸಿಂಗ್ಗೆ ಸ್ಥಾನ ಕೊಡಲೇಬೇಕೆಂದು ಜಗಳ ಆಡಿದ್ರು. ಸತತ ವೈಫಲ್ಯಗಳಿಂದ ಕ್ರಿಕೆಟ್ನಿಂದ ದೂರ ಸರಿಯುವ ಹಂತದಲ್ಲಿದ್ದ ಯುವರಾಜ್ ಸಿಂಗ್ ಪರ ವಾದಿಸಿ ತಂಡದಲ್ಲಿ ಉಳಿಸಿಕೊಂಡ್ರು. ಅನಿಲ್ ಕುಂಬ್ಳೆಯನ್ನು ಆಸಿಸ್ ಪ್ರವಾಸಕ್ಕೆ ಆಯ್ಕೆ ಮಾಡದಿದ್ದರೆ ತಂಡದ ಪಟ್ಟಿಗೆ ಸಹಿ ಹಾಕುವುದಿಲ್ಲ ಅಂತ ಪಟ್ಟು ಹಿಡಿದ್ರು. ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ದ್ರಾವಿಡ್ ಕೈಗೆ ಗ್ಲೌಸ್ ಹಾಕಿ ಕೀಪರ್ ಮಾಡಿದ್ರು. ನಿವೃತ್ತಿಯ ಹಾದಿಯಲ್ಲಿದ್ದ ಜಾವಗಲ್ ಶ್ರೀನಾಥ್ ಮನವೊಲಿಸಿ 2003ರ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುವಂತೆ ಮಾಡಿದ್ರು. ಇವೆಲ್ಲವೂ ಸೌರವ್ ದಿ ಬೆಸ್ಟ್ ಕ್ಯಾಪ್ಟನ್ ಅನ್ನುವುದಕ್ಕೆ ಕೆಲವೇ ಉದಾಹರಣೆಗಳಷ್ಟೆ.
ತನ್ನ ಪಾಲಿನ ಗಾಡ್ ಫಾದರ್ ಜಗಮೋಹನ್ ದಾಲ್ಮಿಯಾ ಹಾಗೂ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ವಿರೋಧಿಸಿದ್ದರೂ ಜಾನ್ ರೈಟ್ ನಂತರ ಭಾರತೀಯ ಕ್ರಿಕೆಟ್ನ ಕೋಚ್ ಸ್ಥಾನಕ್ಕೆ ಗ್ರೆಗ್ ಚಾಪೆಲ್ರನ್ನು ಕರೆತಂದರು ಸೌರವ್. ಅದೇ ಅವರ ವೃತ್ತಿ ಬದುಕಿಗೆ ಮುಳುಗುನೀರು ತಂದಿತು. ಗ್ರೆಗ್ನ ಪ್ರತಿಭೆಯನ್ನು ಮಾತ್ರ ಗುರುತಿಸಿದ್ದ ಗಂಗೂಲಿ ಅವರೊಳಗಿದ್ದ ಕುಟಿಲನನ್ನು ಗುರುತಿಸುವಲ್ಲಿ ವಿಫಲರಾದ್ರು. 2005ರಲ್ಲಿ ಗ್ರೆಗ್ ಚಾಪೆಲ್ ಟೀಂ ಇಂಡಿಯಾಕೆ ಕೋಚ್ ಆದ್ರು, 2008ರಲ್ಲಿ ಸೌರವ್ ದಿ ಗ್ರೇಟ್ ತನ್ನ ಕ್ರಿಕೆಟ್ ವೃತ್ತಿ ಬದುಕಿಗೆ ಮಂಗಳ ಹಾಡಿದ್ರು. ಸೌರವ್ರ ಆತ್ಮೀಯ ಗೆಳೆಯ ಅಜಾತಶತ್ರು ಸಚಿನ್ ಸಹ ಆ ಸಂದರ್ಭದಲ್ಲಿ ವಿಷಾದದಿಂದ ಗ್ರೆಗ್ ಚಾಪೆಲ್ ಭಾರತೀಯ ಕ್ರಿಕೆಟ್ ತಂಡವನ್ನು ಹಾಳು ಮಾಡುವ ಉದ್ದೇಶದಿಂದಲೇ ಬಂದರು ಅಂತ ಉದ್ಘರಿಸಿದ್ದರು.
ಗಂಗೂಲಿಯ ಬದುಕೇ ಒಂದು ಸಂಪೂರ್ಣ ಹೋರಾಟದ ಪೂರ್ತಿ ಪ್ಯಾಕೇಜ್. ತಂಡದಲ್ಲಿ ಸ್ಥಾನ ಪಡೆಯಲು ಹೋರಾಟ, ಪಡೆದುಕೊಂಡ ಸ್ಥಾನ ಉಳಿಸಿಕೊಳ್ಳಲು ಹೋರಾಟ. ಕೆಟ್ಟು ಕಂಗೆಟ್ಟಿದ್ದ ಭಾರತೀಯ ಕ್ರಿಕೆಟ್ ಅನ್ನು ಮತ್ತೆ ಕಟ್ಟಲು ಹೋರಾಟ. ಸಹ ಆಟಗಾರರ ಉಳಿವಿಗಾಗಿ ಹೋರಾಟ. ಆಯ್ಕೆ ಸಮಿತಿಯ ಮಾನದಂಡ ಬದಲಾಯಿಸಲು ಹೋರಾಟ. ಗ್ರೆಗ್ ಜೊತೆ ನಿರಂತರ ಹೋರಾಟ. ತನ್ನ ವೈಫಲ್ಯಗಳ ವಿರುದ್ಧ ಹೋರಾಟ. ನಾಯಕತ್ವ ಕಳೆದುಕೊಂಡು ಸ್ಥಾನ ಉಳಿಸಿಕೊಳ್ಳಲು ಹೋರಾಟ. ಕೊನೆಗೆ ಮತ್ತೆ ಟೀಂ ಇಂಡಿಯಾಗೆ ವಾಪಾಸಾಗಲು ಹೋರಾಟ. ದೇಸಿ ಕ್ರಿಕೆಟ್ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿ ಕಂ ಬ್ಯಾಕ್ ಮಾಡಿದ ದಾದಾ ಕೊನೆಯ ದಿನಗಳನ್ನೂ ಉತ್ತಮವಾಗಿ ಕಳೆಯಲಾಗಲಿಲ್ಲ. ತಮಗಿನ್ನೂ ಆಡುವ ಸಾಮರ್ಥ್ಯವಿದೆ ಅಂತ ಖಾತ್ರಿಪಡಿಸಿದ್ರೂ ದೀರ್ಘ ಕಾಲ ತಂಡದೊಳಗೆ ಉಳಿಯಲಾಗಲಿಲ್ಲ. ಐಪಿಎಲ್ನಲ್ಲಿ ಕೋಲ್ಕತ್ತಾದ ಪರ ಮೂರು ಆವೃತ್ತಿಯಲ್ಲಿ ಆಡಿದ್ರೂ ನಾಲ್ಕನೇ ಆವೃತ್ತಿಯಲ್ಲಿ ಮಾಲಿಕ ಶಾರುಕ್ ಖಾನ್ ಜೊತೆ ಮನಸ್ಥಾಪವಾಗಿ ಪುಣೆ ತಂಡ ಸೇರಿಕೊಂಡರು. ಅವರ ಕ್ರಿಕೆಟ್ ಬದುಕಿನ ರೋಲರ್ ಕೋಸ್ಟರ್ನಂತಹ ಅಪ್ಸ್ ಎಂಡ್ ಡೌನ್ಸ್ ನಿಮಗೆ ಅರಿವಾಗಬೇಕು ಅಂದರೆ ಸ್ವತಃ ಸೌರವ್ ಬರೆದಿರುವ ಆತ್ಮಕಥೆ ಎ ಸೆಂಚುರಿ ಈಸ್ ನಾಟ್ ಎನಾಫ್ ಓದಬೇಕು.
ಗಂಗೂಲಿ ಸರ್ವಶ್ರೇಷ್ಟ ಅನ್ನುವ ಬಗ್ಗೆ ಎರಡು ಮಾತಿರಲಿಲ್ಲ. ಮ್ಯಾಚ್ ಫಿಕ್ಸಿಂಗ್ ಭೂತ ಭಾರತ ಕ್ರಿಕೆಟ್ನ ಬೆನ್ನು ಹತ್ತಿದ್ದ ಸಂದರ್ಭದಲ್ಲಿ ಕ್ರಿಕೆಟ್ ದೇವರು ಸಚಿನ್ ತನಗೆ ನಾಯಕತ್ವ ಬೇಡ ಎಂದು ನಿರಾಕರಿಸಿದ್ರು. ಆಗ ಆಯ್ಕೆ ಸಮಿತಿಯ ಮುಂದಿದ್ದ ಏಕೈಕ ಆಯ್ಕೆ ಸೌರವ್ ಗಂಗೂಲಿ ಮಾತ್ರ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಗಂಗೂಲಿ ಕೈಗೆ ನಾಯಕತ್ವದ ಚುಕ್ಕಾಣಿ ನೀಡುವಾಗ ಭಾರತ ಆಗ ಕುಸಿದಿದ್ದ 8ನೇ ಸ್ಥಾನದಿಂದ 2ನೇ ಸ್ಥಾನಕ್ಕೇರುತ್ತದೆ ಎಂದು ಆಯ್ಕೆ ಸಮಿತಿಯ ಯಾರೂ ಕಲ್ಪಿಸಿಕೊಂಡಿರಲಿಲ್ಲ. ಆದ್ರೆ ಸೌರವ್ರಲ್ಲಿ ಅಂತದ್ದೊಂದು ತಾಕತ್ತಿದೆ ಅಂತ ನಂಬಿದವರು ಇಬ್ಬರೇ. ಒಬ್ಬರು ಕ್ರಿಕೆಟ್ ದೇವರು ಸಚಿನ್ ಹಾಗೂ ಇನ್ನೊಬ್ಬರು ದಿ ವಾಲ್ ರಾಹುಲ್ ದ್ರಾವಿಡ್. ಮೈದಾನಲ್ಲಿ ತಾನು ಬ್ಯಾಟ್ ಹಿಡಿದ ಸಮಯ ತನಗೆ ಬಲ ತುಂಬುವುದು ಕ್ರಿಕೆಟ್ ದೇವರು ಸಚಿನ್ ಹಾಗೂ ಆಫ್ಸೈಡ್ ದೇವರು ಸೌರವ್ ಗಂಗೂಲಿ ಎಂದು ಮುಕ್ತವಾಗಿ ಹೇಳಿಕೆ ನೀಡಿದ್ದರು ರಾಹುಲ್ ದ್ರಾವಿಡ್. ಆಸ್ಟ್ರೇಲಿಯಾದ ಶ್ರೇಷ್ಟ ನಾಯಕ ಸ್ಟೀವ್ ವಾಹ್, ನೀವು ಗಂಗೂಲಿಯವರನ್ನು ಇಷ್ಟಪಡದಿದ್ದರೂ ಅವರನ್ನು ಗೌರವಿಸಬೇಕು ಅಂದಿದ್ದಾರೆ. ಇಂಗ್ಲೆಂಡ್ನ ನಾಸಿರ್ ಹುಸೇನ್ರಿಂದ ಪಾಕಿಸ್ತಾನದ ವಾಸಿಂ ಅಕ್ರಂವರೆಗೆ, ವಿಂಡೀಸ್ನ ಚಂದ್ರಪಾಲ್ರಿಂದ ಶ್ರೀಲಂಕಾದ ಸನತ್ ಜಯಸೂರ್ಯವರೆಗೆ ಸೌರವ್ ನಾಯಕತ್ವದ ಗುಣಗಳನ್ನು ಹತ್ತಾರು ದಿಗ್ಗಜ ಕ್ರಿಕೇಟಿಗರು ಕೊಂಡಾಡಿದ್ದಾರೆ.
ಸೌರವ್ ಗಂಗೂಲಿ ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ನ ಅವಿಭಾಜ್ಯ ಅಂಗದಂತಿದ್ದರು. ಅವರು ಮೈದಾನದಲ್ಲಿ ಸೃಷ್ಟಿಸಿದ ದಾಖಲೆಗಳಿಗೇನೂ ಕೊರತೆಯಿಲ್ಲ. ಈಗ ನಿವೃತ್ತಿಯ ನಂತರವೂ ದಾದಾ ಕ್ರಿಕೆಟ್ ಜೊತೆಗಿನ ತಮ್ಮ ಬಾಂದವ್ಯವವನ್ನು ಮುಂದುವರೆಸಿದ್ದಾರೆ. ಭವಿಷ್ಯದಲ್ಲಿ ಇಂಡಿಯನ್ ಕ್ರಿಕೇಟ್ಗೆ ದಾದಾರ ಮತ್ತಷ್ಟು ಸಲಹೆ ಸೂಚನೆ ಮಾರ್ಗದರ್ಶನದ ಅವಶ್ಯಕಥೆ ಖಂಡಿತಾ ಇದೆ.
ಸೌರವ್ ಗಂಗೂಲಿ, ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಲು ಮಹೇಂದ್ರ ಸಿಂಗ್ ಧೋನಿ ಕಾರಣ ಅನ್ನುವ ಮಾತುಗಳಿವೆ. ಆದ್ರೆ ತಮ್ಮ ಆತ್ಮ ಚರಿತ್ರೆಯಲ್ಲಿ ಇದಕ್ಕೆ ಸೌರವ್ ಪ್ರತಿಕ್ರಿಯೆ ನೀಡಿದ್ದು, 2003ರ ವಿಶ್ವಕಪ್ ಟೂರ್ನಿಗೆ ಧೋನಿ ತಂಡದಲ್ಲಿರಬೇಕಿತ್ತು ಎಂದು ಬರೆದುಕೊಂಡಿದ್ದಾರೆ. ಇನ್ನು ರವಿಶಾಸ್ತ್ರಿ ಜೊತೆಗಿನ ದಾದಾ ಮುನಿಸು ಜಗಜ್ಜಾಹಿರಾದ ವಿಚಾರ. ಈಗಲೂ ದಾದಾ ಹಾಗೂ ಶಾಸ್ತ್ರಿ ನಡುವಿನ ಸಂಬಂಧ ಎಣ್ಣೇ ಸಿಗೇಕಾಯಿಯಂತೆ.
ನಿವೃತ್ತಿಯ ನಂತರ ಕ್ರಿಕೆಟ್ ಜೊತೆಗಿನ ಬಾಂದವ್ಯ ಸಕ್ರಿಯವಾಗಿಟ್ಟುಕೊಂಡಿರುವ ದಾದಾ ಸದ್ಯ ಈಗ ಬಿಸಿಸಿಐ ಬಾಸ್. ಕರೋನಾ ಸಂಕಷ್ಟ ಕಾಲ ಕಳೆಯುತ್ತಿದ್ದ ಹಾಗೆ ಭಾರತ ಕ್ರಿಕೆಟ್ ತಂಡದ ಮಿಂಚಿನ ಸಂಚಾರಕ್ಕೆ ಸೌರವ್ ದಾದಾ, ಈ ಲಾಕ್ ಡೌನ್ ಕಾಲದಲ್ಲಿ ನೀಲನಕ್ಷೆ ಹಾಕಿಕೊಂಡು ಕೂತಿರುತ್ತಾರೆ. ಆಗಾಗ ಪಂದ್ಯಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಸೌರವ್, ಭಾರತೀಯ ಕ್ರಿಕೆಟ್ನ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ವಿಸ್ಡನ್ ಇಂಡಿಯಾದ ಎಡಿಟೋರಿಯಲ್ ಬೋರ್ಡ್ನ ಅಧ್ಯಕ್ಷರೂ ಆಗಿದ್ದರು. ಐಪಿಎಲ್ ಗವರ್ನಿಂಗ್ ಕೌನ್ಸಿಲ್ನ ನಾಲ್ವರು ಸದಸ್ಯರಲ್ಲಿ ಸೌರವ್ ಸಹ ಒಬ್ಬರಾಗಿದ್ದರು. ಐಪಿಎಲ್ನ ತಾಂತ್ರಿಕ ಸಮಿತಿಯ ಸದಸ್ಯರಾಗಿ 2016ರಿಂದ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಜಸ್ಟಿಸ್ ಮುದ್ಗಲ್ ಸಮಿತಿಯ ಪ್ಯಾನಲ್ನಲ್ಲಿ ಸೌರವ್ ಗಂಗೂಲಿಯವರೂ ಓರ್ವ ಸದಸ್ಯರಾಗಿದ್ದರು. ಗಂಗೂಲಿ 2004ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ್ರು. 2013ರಲ್ಲಿ ಪಶ್ಚಿಮ ಬಂಗಾಳದ ಬಂಗ ಬಿಬೂಷಣ್ ಪ್ರಶಸ್ತಿಯೂ ಸೌರವ್ರನ್ನು ಅರಸಿಕೊಂಡು ಬಂದಿದೆ. ಫುಟ್ಬಾಲ್ ಅನ್ನು ಸಾಕಷ್ಟು ಇಷ್ಟ ಪಡುವ ದಾದಾ ಇಂಡಿಯನ್ ಸೂಪರ್ ಲೀಗ್ನಲ್ಲಿ ಕೋಲ್ಕತ್ತಾ ಫ್ರಾಂಚೈಸಿಯ ಸಹ ಮಾಲೀಕರೂ ಆಗಿದ್ದಾರೆ.
ಐದು ಅಡಿ 11 ಇಂಚು ಎತ್ತರದ ಸೌರವ್ ಎಡಗೈ ಬ್ಯಾಟ್ಸಮನ್ ಹಾಗೂ ಬಲಗೈ ಮಧ್ಯಮವೇಗದ ಬೌಲರ್. ಆಫ್ಸೈಡ್ನಲ್ಲಿ ದಾದಾ ಬಾರಿಸುತ್ತಿದ್ದ ಬೌಂಡರಿಗಳು ವೇಗದ ಬೌಲರ್ಗಳಿಗೆ ಸಿಂಹಸ್ವಪ್ನ. ಸೌರವ್ ಏಕದಿನ ಪಂದ್ಯಗಳಲ್ಲಿ ಮುಂದೆ ನುಗ್ಗಿ ಸ್ಪಿನ್ನರ್ಸ್ಗಳಿಗೆ ಸಿಡಿಸುತ್ತಿದ್ದ ಸಾಲು ಸಾಲು ಸಿಕ್ಸರ್ಗಳು ನೋಡುಗರ ಕಣ್ಣಿಗೆ ಹಬ್ಬ. ಇನ್ನು ಎರಡೂ ಕೈಗಳಿಂದ ಬಾಲ್ ಅನ್ನು ಅವಿತಿಟ್ಟುಕೊಂಡು ಇಪ್ಪತ್ತು ಹೆಜ್ಜೆಗಳಿಂದ ಓಡಿ ಬಂದು ಬಾಲ್ ಎಸೆಯುತ್ತಿದ್ದ ದಾದಾ ಬೌಲಿಂಗ್ ಶೈಲಿಗೆ ಮರುಳಾದವರೂ ಅನೇಕರು. ತಾರುಣ್ಯದ ದಿನಗಳಲ್ಲಿ ದಾದಾ ಒಬ್ಬ ಅತ್ಯುತ್ತಮ ಫೀಲ್ಡರ್ ಕೂಡಾ ಆಗಿದ್ರು. ದಾದಾ ದೇಸಿ ಕ್ರಿಕೆಟ್ನಲ್ಲಿ ಪಶ್ಚಿಮ ಬಂಗಾಳ, ಲ್ಯಾಂಚ್ಶೈರ್, ಗ್ಲಾಮೋರ್ಗನ್, ನಾರ್ತಂಪ್ಟನ್ಶೈರ್, ಕೋಲ್ಕತ್ತಾ ನೈಟ್ ರೈಡರ್ಸ್, ಪುಣೇ ವಾರಿಯರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಸೌರವ್ ತೊಟ್ಟ ಜೆರ್ಸಿ ಸಂಖ್ಯೆಗಳು 1, 21, 24 ಹಾಗೂ 99. 1999ರಲ್ಲಿ ತಮ್ಮ ಬಾಲ್ಯದ ಗೆಳತಿ ಕಥಕ್ ಡ್ಯಾನ್ಸರ್ ಡೋನಾ ರಾಯ್ರನ್ನ ವಿವಾಹವಾದ ಸೌರವ್ ಗಂಗೂಲಿ ಪುತ್ರಿ ಸಾನಾ ಗಂಗೂಲಿ. ಇವರ ಹಿರಿಯ ಸಹೋದರ ಸ್ನೇಹಶೀಷ್ ಗಂಗೂಲಿ ಸಹ ಕ್ರಿಕೆಟರ್.
1992ರಿಂದ 2008ರವರೆಗೆ ಟೀಂ ಇಂಡಿಯಾದ ಸಕ್ರಿಯ ಸದಸ್ಯರಾಗಿದ್ದ ಸೌರವ್, ತಮ್ಮ ಮೊದಲ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದು ಇಂಗ್ಲೆಂಡ್ ವಿರುದ್ಧ 20 ಜೂನ್ 1996ರಲ್ಲಿ. ಕೊನೆಯ ಟೆಸ್ಟ್ ಆಡಿದ್ದು 6 ನವೆಂಬರ್ 2008 ವೆಸ್ಟ್ ಇಂಡೀಸ್ ವಿರುದ್ಧ. ನಾಯಕರಾಗಿ ಸೌರವ್ 49 ಟೆಸ್ಟ್ಗಳಿಗೆ ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದಾರೆ, 21ರಲ್ಲಿ ಭಾರತ ಜಯಗಳಿಸಿದೆ. ದಾದಾ ಮೊದಲ ಏಕದಿನ ಪಂದ್ಯವಾಡಿದ್ದು ವೆಸ್ಟ್ ಇಂಡೀಸ್ ವಿರುದ್ಧ 11 ಜನವರಿ 1992ರಲ್ಲಿ. ಕೊನೆಯ ಏಕದಿನ ಪಂದ್ಯ 15 ನವೆಂಬರ್ 2007ರಲ್ಲಿ ಪಾಕಿಸ್ತಾನದ ವಿರುದ್ಧ. 146 ಏಕದಿನ ಪಂದ್ಯಗಳನ್ನು ನಾಯಕರಾಗಿ ದಾದಾ ಮುನ್ನೆಡಿಸಿದ್ದಾರೆ, ಇವುಗಳಲ್ಲಿ 76 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ.
ಏಕದಿನ ಪಂದ್ಯಗಳಲ್ಲಿ 8ನೇ ಗರಿಷ್ಟ ಸ್ಕೋರರ್, 10 ಸಾವಿರ ರನ್ ಗಡಿ ದಾಟಿದ ಮೂರನೆಯ ಬ್ಯಾಟ್ಸ್ಮನ್ ಸೌರವ್. ದಾದಾ ಆಡಿದ ಒಟ್ಟು ಟೆಸ್ಟ್ ಪಂದ್ಯಗಳು 113 ಗಳಿಸಿದ್ದು 16 ಶತಕ ಹಾಗೂ 35 ಅರ್ಧ ಶತಕಗಳ ಸಹಿತ 7212 ರನ್. ಪಡೆದುಕೊಂಡಿದ್ದು, 32 ವಿಕೆಟ್ ಹಾಗೂ 71 ಕ್ಯಾಚ್. 311 ಏಕದಿನ ಪಂದ್ಯಗಳಲ್ಲಿ 22 ಶತಕ ಹಾಗೂ 72 ಅರ್ಧ ಶತಕಗಳೊಂದಿಗೆ ದಾದಾ ಗಳಿಕೆ 11363 ರನ್ಗಳು. ಏಕದಿನ ಪಂದ್ಯಗಳಲ್ಲಿ ಸೌರವ್ ಪಡೆದುಕೊಂಡಿದ್ದು 100 ವಿಕೆಟ್ ಹಾಗೂ 100 ಕ್ಯಾಚ್. ಪ್ರಥಮ ದರ್ಜೆ ಹಾಗೂ ಎ ದರ್ಜೆ ಕ್ರಿಕಟ್ಗಳಲ್ಲೂ ಸೌರವ್ ಸಾಧನೆ ಅತ್ಯುತ್ತಮವೇ. 254 ಪ್ರಥಮ ದರ್ಜೆ ಹಾಗೂ 437 ಎ ದರ್ಜೆ ಕ್ರಿಕೆಟ್ನಲ್ಲಿ ದಾದಾ ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ 15658 ಹಾಗೂ ಎ ದರ್ಜೆಯಲ್ಲಿ 15622 ರನ್ ಗಳಿಸಿದ್ದಾರೆ. ಹಾಗೂ ಕ್ರಮವಾಗಿ 167 ಹಾಗೂ 171 ವಿಕೆಟ್ ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಿ ಬೆಸ್ಟ್ ಓಪನರ್ ಜೋಡಿ ಎಂದರೆ ಅದು ಈಗಲೂ ಸಚಿನ್-ಸೌರವ್ ಜೋಡಿ. ಸೌರವ್ ಗಂಗೂಲಿ ಹಾಗೂ ದೀದಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಸಂಪರ್ಕ ಸಂಬಂಧ ಚೆನ್ನಾಗಿದೆ. ಆದರೂ ದೀದಿ ಎದುರು ದಾದಾರನ್ನು ಪ್ರತಿಸ್ಪರ್ಧಿಯಾಗಿಸಲು ಸೌರವ್ಗಾಗಿ ಬಿಜೆಪಿಯ ಗಾಳ ಹಾಕುತ್ತಲೇ ಇದೆ. ಸೌರವ್ ಅನ್ನುವ ಕ್ರಿಕೆಟ್ ಲೋಕದ ಮಹಾಪ್ರವಾಹ ಈಗ ತಣ್ಣಗಾಗಿದ್ದರೂ ಗತ ಇತಿಹಾಸದ ವೈಭವ ಮಾತ್ರ ಮರೆಯುವಂತೆಯೇ ಇಲ್ಲ. ಕ್ರಿಕೆಟ್ ಧರ್ಮವಾಗಿರುವ ಭಾರತದಲ್ಲಿ ಕ್ರಿಕೆಟ್ ಮೆಚ್ಚುವ ಅಸಂಖ್ಯ ಅಭಿಮಾನಿಗಳ ಕಣ್ಣಲ್ಲಿ ಸೌರವ್ ದಾದಾ ಯಾವತ್ತಿಗೂ ಗತ್ತಿನ ಕಪ್ತಾನ. ಸೌರವ್ ಗಂಗೂಲಿ ಅನ್ನುವ ದೈತ್ಯ ಪ್ರತಿಭೆ ಜಾಗತಿಕ ಕ್ರಿಕೆಟ್ನಿಂದ ದೂರವಾಗಿ ಹಲವು ವರ್ಷ ಕಳೆದರೂ ಇನ್ನೂ ದಾದ ನೆನಪು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿ ಉಳಿದಿದೆ. (ಕೃಪೆ: ವಿಭಾ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..