ದೊಡ್ಡಬಳ್ಳಾಪುರ: ವರುಣ ಆರ್ಭಟ ತಾಲೂಕಿನ ಕೆಲವೆಡೆ ಮುಂದುವರೆದಿದ್ದು, ಹಲವು ಅವಾಂತರಗಳನ್ನು ಉಂಟು ಮಾಡಿದೆ.
ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಬುಧವಾರ ಸಂಜೆ ತಾಲೂಕಿನ ಆರೂಢಿ ಗ್ರಾಪಂ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಟಮೋಟೊ, ಸುಕಂದರಾಜ ಹೂ, ಮೆಣಸಿನ ಗಿಡ ಸೇರಿದಂತೆ ಹಲವು ಬೆಳೆಗಳು ಕೊಚ್ಚಿಹೋಗಿದೆ.
ಇದೇ ಗ್ರಾಮದ ಯುವ ರೈತ ಮಂಜುನಾಥ್ ಎನ್ನುವವರ ಜಮೀನಿನಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್‌ಫರ್ಮರ್ ಕಂಬ ಗಾಳಿಗೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ತೀವ್ರವಾದ ಗಾಳಿಗೆ ತಾಲೂಕಿನ ಹಲವೆಡೆ ಬೃಹತ್ ಮರಗಳು ನೆಲಕ್ಕೆ ಉರುಳಿಬಿದ್ದಿದ್ದು, ತೋಟಗಾರಿಕೆ ಬೆಳೆಗಳು ನೀರು ಪಾಲಾಗಿವೆ.
ವಾಡಿಕೆ ಮೀರಿದ ಮಳೆ: ತಾಲೂಕಿನಲ್ಲಿ ಈ ತಿಂಗಳಲ್ಲಿ ಸರಾಸರಿ 112 ಮಿಮೀ ವಾಡಿಕೆ ಮೀರಿದ ಮಳೆ ಸುರಿದಿದ್ದು, ಕಳೆದ ನಾಲ್ಕು ದಿನಗಳ ವರದಿಯಂತೆ ಕಸಬ ಹೋಬಳಿ 112.7 ಮಿಮೀ, ದೊಡ್ಡಬೆಳವಂಗಲ ಹೋಬಳಿ 102.5 ಮಿಮೀ, ಕನಸವಾಡಿ ಹೋಬಳಿ 68.6ಮಿಮೀ, ಸಾಸಲು ಹೋಬಳಿಯಲ್ಲಿ ಅತಿಹೆಚ್ಚು 151.2ಮಿಮೀ ಸುರಿದಿದ್ದರೆ, ತೂಬಗೆರೆ ಹೋಬಳಿಯಲ್ಲಿ 128 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ಹರಿತಲೇಖನಿಗೆ ತಿಳಿಸಿದ್ದಾರೆ.
ರಾಜ ಕಾಲುವೆ ಒತ್ತುವರಿ ತೆರವಿಗೆ ಆಗ್ರಹ: ತಾಲೂಕಿನ ಕೆರೆಗಳಿಗೆ ಮಳೆ ನೀರು ಹರಿಸುವ ರಾಜ ಕಾಲುವೆಗಳು ಒತ್ತುವರಿಯಾಗಿರುವ ಜೊತೆಗೆ, ಹೂಳಿನಿಂದ ತುಂಬಿರುವ ಕಾರಣ ಸುರಿಯುತ್ತಿರುವ ಮಳೆಯ ನೀರು ಕೆರೆಗೆ ಹರಿಯದೆ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ.
ಕೆರೆಗಳ ಅಭಿವೃದ್ಧಿ, ರಾಜಕಾಲುವೆ ಒತ್ತುವರಿ ತೆರವು, ನರೆಗಾ ಯೋಜನೆ ಸಮರ್ಪಕ ಬಳಕೆ ಎಂಬುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗುತ್ತಿದ್ದು, ಸುರಿಯುತ್ತಿರುವ ಮಳೆ ನೀರು ಕೆರೆಗಳಿಗೆ ಹರಿಯುವಂತೆ ಮಾಡಿ ಅಂತರ್ಜಲ ಹೆಚ್ಚಿಸಲು ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಳ್ಳದ ಕಾರಣ ಮಳೆ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಬೆಳೆ ಹಾಳಾಗುವುದರ ಜೊತೆಗೆ ನೀರಿನ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ ಎಂದು ಯುವ ಮುಖಂಡ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..