
ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದು ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ದೆಹಲಿ ಸರ್ಕಾರ ಮತ್ತು ಪೊಲೀಸರು ಜುಲೈ 22ರಿಂದ ಆಗಸ್ಟ್ 9ರವರೆಗೆ ಬೆಳಗ್ಗೆ 11ರಿಂದ ಸಂಜೆ 5ಗಂಟೆಯ ನಡುವೆ ಐತಿಹಾಸಿಕ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ರೈತರಿಗೆ ಅನುಮತಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ 200 ರೈತರು ಗುರುತಿನ ಬ್ಯಾಡ್ಜ್ ಧರಿಸಿ ತಮ್ಮ ಒಕ್ಕೂಟಗಳ ಧ್ವಜಗಳನ್ನು ಹಿಡಿದುಕೊಂಡು ಸಿಂಘು ಗಡಿ ಪ್ರತಿಭಟನಾ ಸ್ಥಳದಿಂದ ಬಸ್ಸುಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಜಂತರ್ ಮಂತರಿಗೆ ಪ್ರಯಾಣ ಬೆಳೆಸಿದರು.ಮುಂಗಾರು ಅಧಿವೇಶನ ನಡೆಯುತ್ತಿರುವ ಸಂಸತ್ತು ಮತ್ತು ಜಂತರ್ ಮಂತರ್ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಕೆಎಂನಿಂದ 200 ಪ್ರತಿಭಟನಾಕಾರರು ಮತ್ತು ಕೆಎಂಎಸ್‌ಸಿಯಿಂದ ಆರು ಮಂದಿ ಪೊಲೀಸ್ ಬೆಂಗಾವಲಿನೊಂದಿಗೆ ಸಿಂಘು ಗಡಿಯಿಂದ ಜಂತರ್ ಮಂತರ್‌ಗೆ ಆಗಮಿಸಿದ್ದಾರೆ. ಅಂತೆಯೇ ಸಂಜೆ 5 ಗಂಟೆಯ ಹೊತ್ತಿಗೆ ಸಿಂಘು ಗಡಿಗೆ ಮರಳುತ್ತಾರೆ. ನಿಗದಿತ ಜಾಗದಲ್ಲಿ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು, ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಿಂದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಮೂರು ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಪಟ್ಟು ಸಡಿಲಿಸದ ಕಾರಣ, ರೈತ ಸಂಘಟನೆಗಳು ಮತ್ತು ಸರ್ಕಾರದ ನಡುವಿನ ಹಲವಾರು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ರೈತರ ಬೇಡಿಕೆಗೆ ಸರ್ಕಾರ ಇನ್ನೂ ಸಮ್ಮತಿಸದಿದ್ದರೂ, ಅದು 18 ತಿಂಗಳ ಕಾಲ ಕಾಯ್ದೆಯನ್ನು ತಡೆಹಿಡಿದಿದೆ. (ಪೊಟೋ ಕೃಪೆ: ANI)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..